ಹಾಸನ (ಡಿ.10):  ಅಕ್ಕನ ಮದುವೆಗಾಗಿ ಮಾಡಿದ್ದ ಸಾಲವನ್ನು ಸಾಲ ಕೊಟ್ಟವರು ವಾಪಸ್‌ ಕೊಡುವಂತೆ ಕೇಳಿದ್ದಾರೆ. ಆದರೆ ಸಾಲ ಪಡೆದವನು ಸಾಲ ಕೊಡದೆ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಉಲ್ಟಾಹೊಡೆದಿದ್ದಕ್ಕೆ, ಹಣ ಕೊಟ್ಟವನು ಕೆಲವರನ್ನು ಗುಂಪುಗೂಡಿಕೊಂಡು ಸಾಲ ಕೊಡಲು ನಿರಾಕರಿಸುತ್ತಿದ್ದವನನ್ನು ಕೊಚ್ಚಿ ಕೊಲೆ ಮಾಡಿದ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಕಳೆದ ಡಿಸೆಂಬರ್‌ 5 ರಂದು ಹಾಸನ ನಗರದ ಅರಳಿಕಟ್ಟೆಸರ್ಕಲ್‌ ಬಳಿ ಟೀ ಅಂಗಡಿಯೊಂದರ ಬಳಿ ನಡೆದಿದ್ದ ಯುವಕನ ಕೊಲೆಯನ್ನು ಪೊಲೀಸರು ಬೇಧಿಸಿದ್ದು, ಈ ಸಂಬಂಧ ಎಸ್ಪಿ ಶ್ರೀನಿವಾಸಗೌಡ ಅವರು ಬುಧವಾರ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ರಂಗೋಲಿಹಳ್ಳದ ರಘು ಎಂಬಾತ ತನ್ನ ಅಕ್ಕನ ಮದುವೆ ಸಂದರ್ಭದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ತೇಜಸ್‌ ಎಂಬಾತನಿಂದ 1,50,000 ಲಕ್ಷ ರು. ಸಾಲ ಪಡೆದಿದ್ದನು. ನಂತರದ ದಿನಗಳಲ್ಲಿ ರಘು 50 ಸಾವಿರ ಹಣವನ್ನು ವಾಪಸ್‌ ನೀಡಿದ್ದಾನೆ. ಉಳಿದ ಹಣವನ್ನು ಕೇಳಿದಾಗಲೆಲ್ಲಾ ಸಬೂಬು ಹೇಳಿಕೊಂಡು ಕಣ್ತಪ್ಪಿಸಿಕೊಂಡು ತಿರುಗುತ್ತಿದ್ದ. ಆದರೆ ರಘುವನ್ನು ಪತ್ತೆ ಮಾಡಿ ಹಣ ಕೊಡುವಂತೆ ಒತ್ತಾಯಿಸಿದಾಗ ‘ಹಣ ಕೊಡಲಾಗುವುದಿಲ್ಲ. ಏನು ಬೇಕಾದರೂ ಮಾಡಿಕೊ’ ಎಂದಿದ್ದಾನೆ. ಇದರಿಂದ ವಿಚಲಿತನಾದ ತೇಜಸ್‌ ತನ್ನ ಸ್ನೇಹಿತರೊಂದಿಗೆ ಸೇರಿ ರಘುವನ್ನು ಹಿಂಬಾಲಿಸಿಕೊಂಡು ಬಂದು ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚು ಲಾಂಗ್‌ಗಳಿಂದ ಹಲ್ಲೆ ನಡೆಸಿದ್ದರು.

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿದ್ಯಾರ್ಥಿ ಡಿಬಾರ್‌ ..

ಈ ಪ್ರಕರಣ ಪತ್ತೆಹಚ್ಚಲು ರಚಿಸಲಾಗಿದ್ದ ಪೊಲೀಸ್‌ ತಂಡ ತೇಜಸ್‌ ಹೊಳೆನರಸೀಪುರದ ತನ್ನ ಸ್ನೇಹಿತ ಕಿಶನ್‌ ಎಂಬುವನ ಮನೆಯಲ್ಲಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಬಂಧಿಸಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ರಂಗೋಲಿಹಳ್ಳ, ತಿಮ್ಮೇಗೌಡರ ವಠಾರದ ನಿವಾಸಿ ನಂದಿ ಎಂಟರ್‌ ಪ್ರೈಸಸ್‌ ಫೈನಾನ್ಸ್‌ನಲ್ಲಿ ಕೆಲಸ ಮಾಡುವ ಭವಿತ್‌(19 ವರ್ಷ), ನಗರದ ಜಯನಗರ ಪೆಟ್ರೋಲ್‌ ಬಂಕ್‌ ಹತ್ತಿರ ವಾಸವಾಗಿರುವ ಎಪಿಎಂಸಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಪುನೀತ್‌ 21 ವರ್ಷ, ಹಾಸನ ಬಳಿ ಚನ್ನಪಟ್ಟಣದ ಹೌಸಿಂಗ್‌ ಬೋರ್ಡ್‌ನಲ್ಲಿ ವಾಸವಾಗಿರುವ ಐಟಿಐ ವಿದ್ಯಾರ್ಥಿ ನವೀನ್‌ ಕುಮಾರ್‌ 21 ವರ್ಷ, ಕೊನೆಯ ಆರೋಪಿ ಹಾಸನದ ಶಾಂತಿನಗರ ನಿವಾಸಿ ಎಪಿಎಂಸಿಯಲ್ಲಿ ತರಕಾರಿ ಹೋಲ್‌ಸೆಲ್‌ ವ್ಯಾಪಾರ ಮಾಡುವ ವಿವೇಕ್‌ 24 ವರ್ಷ ಎಂಬುವವರ ಜತೆ ಗುಂಪು ಕಟ್ಟಿಕೊಂಡು ರಘುವನ್ನು ಕೊಚ್ಚಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಯನ್ನು ಪತ್ತೆ ಮಾಡಿದ ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ವಿವರ ಹಾಸನ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಪುಟ್ಟಸ್ವಾಮಿಗೌಡ, ಹಾಸನ ನಗರ ವೃತ್ತದ ಪೊಲೀಸ್‌ ನಿರೀಕ್ಷಕರಾದ ಕೃಷ್ಣರಾಜು, ಹಾಸನ ನಗರ ಪೊಲೀಸ್‌ ಠಾಣೆಯ ಉಪ ನಿರೀಕ್ಷಕರಾದ ಆಭಿಜಿತ್‌ ಹಾಗೂ ಸಿಬ್ಬಂದಿ ಹರೀಶ್‌, ಪ್ರವೀಣ, ಲತೇಶ್‌, ರವಿಕುಮಾರ, ವೇಣುಗೋಪಾಲ, ದಿಲೀಪ್‌, ಜಮೀಲ್‌ ಅಹಮದ್‌ ರವರ ಕಾರ್ಯವನ್ನು ಪೊಲೀಸ್‌ ಅಧೀಕ್ಷಕರು, ಹಾಸನ ಜಿಲ್ಲೆ, ಹಾಸನ ರವರು ಪ್ರಶಂಸಿಸಿ ವಿಶೇಷ ಬಹುಮಾನ ಘೋಷಣೆ ಮಾಡಿದ್ದಾರೆ.