ಮಂಗಳೂರು(ಮೇ.03): ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ನಿವಾಸಿಗಳನ್ನು ಒಳಗೊಂಡಿರುವ ಸುಮಾರು 25ಕ್ಕೂ ಅಧಿಕ ಮಂದಿಯ ಯುವಕರ ತಂಡ 3-4 ತಿಂಗಳ ಹಿಂದೆ ಕುವೈಟ್‌ಗೆ ತೆರಳಿದ್ದು, ಈಗ ಅಲ್ಲಿ ಕೆಲಸವಿಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಾಸಿಕ 150 ಕುವೈಟಿ ದಿನಾರ್‌ (ಕೆ.ಡಿ.) (36,500 ಭಾರತೀಯ ರು.) ವೇತನ, ಬರೀ ಐದು ಕಿ.ಮೀ. ವ್ಯಾಪ್ತಿಯಲ್ಲಿ ಫುಡ್‌ ಡೆಲಿವರಿ ಕೆಲಸದ ಭರವಸೆ ಮೇಲೆ ತೆರಳಿದವರು, ಈಗ ಅಲ್ಲಿ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.

ಕೆಲವರು ಕಳೆದ ವರ್ಷ, ಇನ್ನೂ ಕೆಲವರು ಜನವರಿಯಲ್ಲಿ ಅಲ್ಲಿಗೆ ತೆರಳಿದ್ದರು. ಅದಾಗಿ ಕೆಲವೇ ಸಮಯದಲ್ಲಿ ಅಲ್ಲಿ ಲಾಕ್‌ಡೌನ್‌ ಜಾರಿಯಾಗಿದೆ. ಹಾಗಾಗಿ ಬಹುತೇಕರಿಗೆ ಕಳೆದ ಎರಡು ತಿಂಗಳಿನಿಂದ ಕೆಲಸ ಇಲ್ಲ. ಅವರನ್ನು ನಿಯೋಜಿಸಿದ ಕಂಪನಿ ಕೇವಲ 50 ಕೆ.ಡಿ. ಮಾತ್ರ ನೀಡುತ್ತಿದ್ದು, ಅದು ಜೀವನೋಪಾಯಕ್ಕೆ ಸಾಲುತ್ತಿಲ್ಲ ಎಂದು ಅಲ್ಲಿನ ಯುವಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹೇಳಿದ್ದೊಂದು, ಕೆಲಸ ಇನ್ನೊಂದು:

ಕೆಲವರನ್ನು ಕೆಲಸ ಗೊತ್ತಿಲ್ಲದ ಗ್ಯಾರೇಜ್‌ ಕೆಲಸ, ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಪ್ರಶ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ಹಾಕಲಾಗುತ್ತದೆ ಎಂದು ಸಂತ್ರಸ್ತ ಯುವಕರು ಆರೋಪಿಸಿದ್ದಾರೆ.

ನಾಲ್ಕು ಚಕ್ರದ ವಾಹನದಲ್ಲಿ ಫುಡ್‌ ಡೆಲಿವರಿ ಕೆಲಸ ಎಂದು ನನಗೆ ಹೇಳಲಾಗಿತ್ತು. ಆದರೆ ಇಲ್ಲಿ ಗ್ಯಾರೇಜ್‌ ಕೆಲಸ ನೀಡಿದ್ದಾರೆ. ಒಪ್ಪಂದ ಪ್ರಕಾರ ಫುಡ್‌ ಡೆಲಿವರಿ ಕೆಲಸ ಒದಗಿಸಿ ಎಂದು ಕಂಪನಿಯವರಲ್ಲಿ ಹೇಳಿರುವುದಕ್ಕೆ ಕುವೈತ್‌ ನಗರದಿಂದ ತುಂಬಾ ದೂರದ ಅಪರಾಧ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದಿರುವ ಜಾರ ಎನ್ನುವ ಪ್ರದೇಶಕ್ಕೆ ನನ್ನನ್ನು ಹಾಗೂ ಇನ್ನು ಕೆಲವರನ್ನು ಕಳುಹಿಸಿದ್ದಾರೆ ಎಂದು ಮಂಗಳೂರು ಕಾವೂರು ನಿವಾಸಿ ರಾಯ್‌ಸ್ಟನ್‌ ವಿಲ್ಸನ್‌ ಡಿಸೋಜ ತಮ್ಮ ಕಷ್ಟಹೇಳಿಕೊಂಡರು.

ನಿಶ್ಚಿತಾರ್ಥಕ್ಕೆ ಬಂದು ಬಾಕಿ ಆದ 18 ಮಂದಿ ಮರಳಿ ತವರಿಗೆ

ಕೆಲಸ ಬಿಡುವವರು 400 ಕೆ.ಡಿ. ದಂಡ ಪಾವತಿಸಿ ಊರಿಗೆ ಮರಳಬಹುದು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಿ ಎನ್ನುವ ಬೆದರಿಕೆ ಕೂಡ ಕಂಪನಿ ಕಡೆಯಿಂದ ಬಂದಿದೆ ಎಂದು ವಿವರಿಸಿದರು. ಈಗ ಸಂಕಷ್ಟದಲ್ಲಿರುವ ಅವರಿಗೆ ಅಲ್ಲಿನ ಕನ್ನಡ ಸಂಘ ಆಹಾರ ಕಿಟ್‌ಗಳನ್ನು ವಿತರಿಸಿದೆ ಎಂದು ದಿಲೀಪ್‌ ಕಾವೂರು ನೆನಪಿಸಿಕೊಂಡರು.