ದಾವಣಗೆರೆ(ಫೆ.29): ಕುಗ್ರಾಮದ ಬಡ ಕೃಷಿ ಕುಟುಂಬದ ಯುವಕನೊಬ್ಬ ಕಾನೂನು ಪದವಿಯಲ್ಲಿ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಶ್ರೀಕಂಠಾಪುರ ಗ್ರಾಮದ ಮುದುಕಪ್ಪ ಮತ್ತು ಗೌರಮ್ಮ ದಂಪತಿ ಪುತ್ರ ಎಂ.ಅಂಜಿನಪ್ಪ ಕಾನೂನು ಪದವಿಯಲ್ಲಿ ಇಂಥದೊಂದು ಸಾಧನೆ ಮಾಡಿದ್ದಾರೆ. ಈತ ದಾವಣಗೆರೆಯ ರಾ.ಲ.ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ರಾಜ್ಯದ ಸುಮಾರು 60 ಸಾವಿರ ವಿದ್ಯಾರ್ಥಿಗಳು ಅಂತಿಮ ವರ್ಷದ ಕಾನೂನು ಪರೀಕ್ಷೆ ಬರೆದಿದ್ದರು. ಅಂಜಿನಪ್ಪ 24 ವಿಷಯಗಳಲ್ಲಿ 1800 ಅಂಕಗಳಿಗೆ 1414 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಮೆಕ್ಯಾನಿಕ್ ಮಗಳಿಗೆ 13 ಚಿನ್ನದ ಪದಕ..!

ತನ್ನ ಸಾಧನೆ ಬಗ್ಗೆ ಕಾಲೇಜಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅನಿಸಿಕೆ ಹಂಚಿಕೊಂಡ ಅಂಜಿನಪ್ಪ, ನಿತ್ಯವೂ ತನ್ನ ಊರಿನಿಂದ ಜಮ್ಮನಹಳ್ಳಿಗೆ ನಡೆದುಕೊಂಡೇ ಬಂದು, ಅಲ್ಲಿಂದ ಬಸ್ಸನ್ನು ಹಿಡಿದು ದಾವಣಗೆರೆ ಕಾಲೇಜಿಗೆ ಬರಬೇಕಾಗಿತ್ತು. ಕಾಲೇಜಿನ ವಿರಾಮದ ವೇಳೆ ಸೇರಿದಂತೆ ಬಹುತೇಕ ಅವಧಿಯನ್ನು ಓದಿಗಾಗಿಯೇ ಮೀಸಲಾಗಿಟ್ಟಿದ್ದೆ. ಕಾನೂನು ಅಧ್ಯಯನ ಮುಂದುವರಿಸಿ, ಪ್ರಾಕ್ಟೀಸ್‌ ಮಾಡಿ, ಮುಂದೆ ನ್ಯಾಯಾಧೀಶನಾಗುವ ಅಭಿಲಾಷೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.