ಬೆಂಗಳೂರು (ಜ.20):  ಬೆಸ್ಕಾಂ ವ್ಯಾಪ್ತಿಯ ರಾಜಗೋಪಾಲನಗರ ಮುಖ್ಯ ರಸ್ತೆಯಲ್ಲಿ ವಿದ್ಯುತ್‌ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕೆಲಸಕ್ಕೆ ಸೇರಿದ ದಿನವೇ ಯುವಕನೊಬ್ಬ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ರಾಣೆಬೆನ್ನೂರು ತಾಲೂಕಿನ ಕುಪ್ಪೆಲ್ಲೂರು ಗ್ರಾಮ ಮೂಲದ ಪ್ರಕಾಶ್‌ (21) ಮೃತಪಟ್ಟವರು. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಪ್ರಕಾಶ್‌, ಗುತ್ತಿಗೆದಾರರೊಬ್ಬರ ಲೈನ್‌ಮೆನ್‌ ಆಗಿ ಬಳಿ ಕೆಲಸ ಮಾಡುತ್ತಿದ್ದರು.

ಎರಡು ಪ್ರದೇಶಗಳಿಗೆ ವಿದ್ಯುತ್‌ ಪೂರೈಕೆಯಾಗುತ್ತಿದ್ದ ಎರಡು ವಿದ್ಯುತ್‌ ತಂತಿ ಒಂದೇ ಕಂಬದಲ್ಲಿ ಇದ್ದವು. ಈ ಪೈಕಿ, ಒಂದು ತಂತಿಯಲ್ಲಿ ವಿದ್ಯುತ್‌ ಪ್ರವಹಿಸುತ್ತಿರಲಿಲ್ಲ. ಮತ್ತೊಂದರಲ್ಲಿ ಪ್ರವಹಿಸುತ್ತಿತ್ತು. ಇದನ್ನು ಖಚಿತಪಡಿಸಿಕೊಳ್ಳದೆ ಗುತ್ತಿಗೆದಾರರು ಲೈನ್‌ಮೆನ್‌ ಕಾರ್ಮಿಕನನ್ನು ವಿದ್ಯುತ್‌ ಕಂಬ ಹತ್ತಿಸಿದ್ದಾರೆ.

ಈ ವೇಳೆ ತಂತಿಯನ್ನು ಸ್ಪರ್ಶಿಸಿದ ಪ್ರಕಾಶ್‌ ವಿದ್ಯುತ್‌ ಶಾಕ್‌ ಹೊಡೆದು ವಿಲ ವಿಲ ಒದ್ದಾಡುತ್ತಾ ತಂತಿಗಳ ನಡುವೆ ಸಿಲುಕಿಕೊಂಡರು. ಬಳಿಕ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್‌ ಮುಖಂಡನಿಂದ ಅತ್ಯಾ​ಚಾರ: ಶಿಕ್ಷಕಿ ಆರೋಪ...

ಯುವಕನ ಕೆಳಗಿಳಿಸಲು ಹರಸಾಹಸ:  ಕಾಲಿಗೆ ಶೂ, ಕೈಗೆ ಗ್ಲೌಸ್‌ ಸೇರಿದಂತೆ ಯಾವುದೇ ಮುನ್ನೆಚ್ಚರಿಕಾ ಕ್ರಮ ಅನುಸರಿಸದೆ ಪ್ರಕಾಶ್‌ ವಿದ್ಯುತ್‌ ತಂತಿ ರಿಪೇರಿಗೆ ತೆರಳಿದ್ದರು. ವಿದ್ಯುತ್‌ ಸ್ಪರ್ಶದಿಂದ ಒದ್ದಾಡುತ್ತಿದ್ದರಿಂದ ತಕ್ಷಣ ಸ್ಥಳೀಯರೆಲ್ಲಾ ಸೇರಿ ದಾರಿಯಲ್ಲಿ ಹೋಗುತ್ತಿದ್ದ ಲಾರಿಯನ್ನು ತಡೆದು ಇಬ್ಬರು ವ್ಯಕ್ತಿಗಳು ಹಗ್ಗದ ಸಹಾಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಕಾಶ್‌ರನ್ನು ಲಾರಿ ಮೇಲೆ ಇಳಿಸಿದರು. ಬಳಿಕ ಕಾರಿನಲ್ಲಿ ಸುಂಕದಕಟ್ಟೆಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗದೆ ಪ್ರಕಾಶ್‌ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಸಂಬಂಧ ಗುತ್ತಿಗೆದಾರನ ವಿರುದ್ಧ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.