ಬೆಳಗಾವಿ:ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಕೆಎಸ್ಆರ್‌ಪಿ ಮೈದಾನದಲ್ಲಿ ನಡೆಯುತ್ತಿದ್ದ ಹೋಮ್‌ಗಾರ್ಡ್ ನೇಮಕಾತಿ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. 

ಬೆಳಗಾವಿಯ ಖಾಸಬಾಗದ ಗಾಯತ್ರಿ ನಗರದ ನಿವಾಸಿ ಪ್ರಸಾದ ಅರ್ಜುನ ತಾಳೂಕರ( 25 ) ಮೃತ ಯುವಕ. ಹೋಮ್ ಗಾರ್ಡ್ ನೇಮಕಾತಿಯ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಈ ಯುವಕ ಕೆಎಸ್‌ಆರ್‌ಪಿ ಮೈದಾನದಲ್ಲಿ ಎರಡು ಸುತ್ತು ಓಟ ಮುಗಿಸಿ ಮೂರನೇ ಸುತ್ತು ಓಡುತ್ತಿರುವಾಗ ಕುಸಿದು ಬಿದ್ದಿದ್ದಾನೆ. 

ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಹೋಮ್ ಗಾರ್ಡ್ ಡಿಐಜಿಪಿ ಡಿ.ಸಿ.ರಾಜಪ್ಪ ಮತ್ತು ಎಸಿಪಿ ಎನ್.ವಿ.ಬರಮನಿ ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದರು. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.