ಮಂಡ್ಯ, [ಜೂನ್.04]: ಮಹಿಳೆ ಚಪ್ಪಲಿಯಿಂದ ಹೊಡೆದಳು ಎನ್ನುವ ಕಾರಣಕ್ಕೆ ಮನನೊಂದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್​.ಪೇಟೆ ಪಟ್ಟಣದ ರಾಮಯ್ಯ ಕಾಲೋನಿಯಲ್ಲಿ ನಡೆದಿದೆ.

ಸ್ವತಂತ್ರ (24) ಮೃತ ನೇಣಿಗೆ ಶರಣಾದ ಯುವಕ. ಸ್ವತಂತ್ರ ಮಂಗಳವಾರ ಆಸ್ಪತ್ರೆಗೆ ಹೋಗಿದ್ದು, ಸರತಿ ಸಾಲಿಗೆ ನಿಲ್ಲುವ ಸಂಬಂಧ ಕೊಂಚ ಗಲಾಟೆಯಾಗಿದೆ. ಆ ವೇಳೆ  ಮಹಿಳೆ ಸ್ವತಂತ್ರನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.ಈ ಅವಮಾನ ತಾಳಲಾರದೇ  ಡೆತ್​​ನೋಟ್​​ ಬರೆದಿಟ್ಟು ಸ್ವತಂತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗನ ಸಾವಿನಿಂದ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿನ ಕುರಿತು ಡೆತ್​ನೋಟ್​ ಬರೆದಿಟ್ಟಿರುವ ಸ್ವತಂತ್ರ, ತನ್ನ ಸಾವಿಗೆ ತಾನೇ ಕಾರಣ ಎಂದು ತಿಳಿಸಿದ್ದಾನೆ.ಈ ಪ್ರಕರಣ ಕೆ.ಆರ್​​ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಯುವಕ ಬರೆದಿರುವ ಡೆತ್​​ನೋಟ್  ಇಂತಿದೆ
"ಅಮ್ಮ ನಾನು ಮಧ್ಯಾಹ್ನ ಆಸ್ಪತ್ರೆಗೆ ಹೋಗಿದ್ದೆ. ಸರತಿ ಸಾಲಿನಲ್ಲಿ ಒಬ್ಬ ಹೆಂಗಸು ನನ್ನ ಮುಂದೆ ಬಂದು ನಿಂತಳು. ಆಗ ನಾನು ಅಕ್ಕ ನಾನು ಮೊದಲು ನಿಂತಿದ್ದು ಹಿಂದೆ ಹೋಗಿ ಎಂದು ಸ್ವಲ್ಪ ತಳ್ಳಿದೆ. 

ಆ ಹೆಂಗಸು ಮದ್ಯಪಾನ ಮಾಡಿದ್ದಳು ಅನಿಸುತ್ತೆ. ಆ ಕಾರಣಕ್ಕೆ ಎಲ್ಲರ ಮುಂದೆ ನನಗೆ ಚಪ್ಪಲಿಯಲ್ಲಿ ಹೊಡೆದಳು. ನನಗೆ ಬಹಳ ಅಪಮಾನವಾಯಿತು. ಅದಕ್ಕೆ ನಾನು ಈ ನಿರ್ಧಾರ ತೆಗೆದುಕೊಂಡೆ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನು ದೂಷಿಸಬೇಡಿ. ಮಿಸ್​​ ಯು ಅಮ್ಮ" ಎಂದು ಯುವಕ ಡೆತ್​ ನೋಟ್​​ನಲ್ಲಿ ಬರೆದಿದ್ದಾನೆ.