ಬೆಂಗಳೂರು: ಸ್ನೇಹಿತೆಯನ್ನು ಕೂರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ರೀತಿ ವ್ಹೀಲಿಂಗ್ ಮಾಡಿದ್ದ ಯುವಕನನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳ ನಿವಾಸಿ ನೂರ್ ಅಹಮದ್ (21 ) ಬಂಧಿತ ಯುವಕ. ಆರೋಪಿಯಿಂದ ವ್ಹೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.

ಯಲಹಂಕದ ಸರ್ಕಾರಿ ಕಾಲೇಜಿನಲ್ಲಿ ನೂರ್ ಅಹಮದ್ ಬಿ.ಕಾಂ ಪದವಿ ಪೂರ್ಣ ಗೊಳಿಸಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಇತ್ತೀಚೆಗೆ ಸ್ನೇಹಿತ ಇಮ್ರಾನ್ ಎಂಬಾತನ ಬಳಿ ದ್ವಿಚಕ್ರ ವಾಹನ ಪಡೆದು ಸ್ನೇಹಿತೆ ಜತೆ ನಂದಿಬೆಟ್ಟಕ್ಕೆ ಹೋಗಿದ್ದ. ನಂದಿ ಬೆಟ್ಟದಿಂದ ಹಿಂದಿರುಗುವಾಗ ದೇವನಹಳ್ಳಿ ಸಮೀಪ ದ್ವಿಚಕ್ರ ವಾಹನದಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡಿದ್ದ.

ವ್ಹೀಲಿಂಗ್ ಮಾಡಿರುವ ವಿಡಿಯೋವನ್ನು ಸೋನು ಎಂಬ ಯುವತಿ ‘ಹಲೋ’ ಆ್ಯಪ್ ನಲ್ಲಿ ವಿಡಿಯೋ ಹಾಕಿಕೊಂಡಿದ್ದಳು. ಅಪಾಯಕಾರಿ ಯಾಗಿರುವ ಈ ವ್ಹೀಲಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಂಚಾರ ಪೊಲೀಸರು ಸ್ವಯಂಪ್ರೇರಿತ (ಸುಮೊಟೋ) ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದರು.

ಭಾನುವಾರ ಹೆಬ್ಬಾಳ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗಪೊಲೀಸರನ್ನು ಕಂಡು ಇಮ್ರಾನ್ ಪರಾರಿಯಾಗಿದ್ದ. ಸ್ಕೂಟರ್  ನಂಬರ್ ಬರೆದುಕೊಂಡಿದ್ದ ಪೊಲೀಸರು, ಈ ಬಗ್ಗೆ ತನಿಖೆ ನಡೆಸಿದಾಗ ಸ್ಕೂಟರ್ ಇಮ್ರಾನ್ ತಾಯಿ ಜೀನತ್ ಎಂಬುವವರ ಹೆಸರಿನಲ್ಲಿತ್ತು. ಇತ್ತೀಚೆಗೆ ವೈರಲ್ ಆಗಿದ್ದ ವ್ಹೀಲಿಂಗ್ ವಿಡಿಯೋದಲ್ಲಿದ್ದ ಸ್ಕೂಟರ್‌ಗೂ ಇದಕ್ಕೂ ಹೋಲಿಕೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಮ್ರಾನ್ ಅನ್ನು ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಈ ಮಾಹಿತಿ ಆಧರಿಸಿ ಆರೋಪಿ ನೂರ್ ಅಹಮದ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.