ಬೆಂಗಳೂರು [ಡಿ.03]:  ಹೊಸ ವರ್ಷ ಆಚರಣೆಯ ರಾತ್ರಿ ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ಕಾನ್ಸ್‌ಟೇಬಲ್‌ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಆರೋಪಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ಜೀವನ್‌ ಬೀಮಾನಗರ ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್‌ ಮೂಲದ ನಿಶ್ಚಯ್‌ ನಿರ್ಮಲ್‌(25) ಬಂಧಿತ ಆರೋಪಿ. ಸಿಎಆರ್‌ ಕಾನ್ಸ್‌ಟೇಬಲ್‌ ಪ್ರಭುಲಿಂಗ ಜೋಳದ್‌ ಹಲ್ಲೆಗೊಳಗಾದವರು.

ಪ್ರಭುಲಿಂಗ ಅವರು ಆಡುಗೋಡಿಯಲ್ಲಿ ಸಿಎಆರ್‌ ಕಾನ್ಸ್‌ಟೇಬಲ್‌ ಆಗಿದ್ದು, ಡಿ.31ರಂದು ರಾತ್ರಿ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಜೆ.ಬಿ.ನಗರ ಠಾಣಾ ವ್ಯಾಪ್ತಿಯಲ್ಲಿನ ಇಂದಿರಾ ನಗರದ 100 ಅಡಿ ರಸ್ತೆಯ 14ನೇ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಅಂದು ರಾತ್ರಿ ಒಂದು ಗಂಟೆ ಸುಮಾರಿಗೆ ನಿಶ್ಚಯ್‌, ನಡು ರಸ್ತೆಯಲ್ಲಿ ಚೀರಾಡಿಕೊಂಡು ಅವ್ಯಾಚ ಶಬ್ದಗಳನ್ನು ಕೀರುಚುತ್ತಿದ್ದ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್‌ ಪ್ರಭುಲಿಂಗ್‌ ಆರೋಪಿಯನ್ನು ಆ ರೀತಿ ಕೆಟ್ಟದಾಗಿ ಮಾತನಾಡಬೇಡಿ ಮನೆಗೆ ಹೋಗಿ ಎಂದು ಹೇಳಿದ್ದರು. ಇಷ್ಟಕ್ಕೆ ಕೋಪಗೊಂಡ ಆರೋಪಿ ಅವಾಚ್ಯ ಶಬ್ಧದಿಂದ ಸಿಬ್ಬಂದಿಯನ್ನು ನಿಂದಿಸಿ ಅಲ್ಲಿಯೇ ಇದ್ದ ಕಲ್ಲಿನಿಂದ ಹಲ್ಲೆ ನಡೆಸಿದ್ದ. ಪರಿಣಾಮ ಕಾನ್ಸ್‌ಟೇಬಲ್‌ ತಲೆಯಲ್ಲಿ ರಕ್ತಸ್ರಾವವಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಮಾಹಹಿತಿ ನೀಡಿದರು.

ಆರೋಪಿ ಕೆಲ ವರ್ಷಗಳ ಹಿಂದೆ ಜಾರ್ಖಂಡ್‌ನಿಂದ ನಗರಕ್ಕೆ ಬಂದು ಕೋರಮಂಗಲ ಸಮೀಪದ ತಾವರೆಕೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾನೆ. ಆತನ ವೃತ್ತಿ ಬಗ್ಗೆ ಕೇಳಿದರೆ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ತಿಳಿಸಿದರು.