ಲೋಕಾಪುರ(ಸೆ.30): ಇಷ್ಟವಿಲ್ಲದ ಮದುವೆಗೆ ಹೆತ್ತವರು ಒತ್ತಾಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಯುವಕ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಸಮೀಪ ಹೆಬ್ಬಾಳ ಗ್ರಾಮದಲ್ಲಿ ಶನಿವಾರ ನಡೆದಿದೆ. 

ಸಂಗಮೇಶ ಹೊಳೆ ನ್ನವರ(22) ಕಾಣೆ ಯಾಗಿರುವ ಯುವಕ. ಚಿಂಚಖಂಡಿ ಕೆ.ಡಿ. ಘಟಪ್ರಭಾ ನದಿ ಸೇತುವೆ ಬಳಿ ಶನಿವಾರ ರಾತ್ರಿ ಯುವಕನ ಬೈಕ್ ಪತ್ತೆಯಾಗಿದೆ. ನದಿಗೆ ಹಾರಿ ಸಂಗಮೇಶ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಂಗಮೇಶ ಹೊಳೆನ್ನವರ ಸಮೀಪದ ಹೆಬ್ಬಾಳ ಗ್ರಾಮದ ನಿವಾಸಿ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈತನಿಗೆ ಇಷ್ಟವಿಲ್ಲದಿದ್ರೂ ಅಕ್ಕನ ಮಗಳ ಜೊತೆ ಮದುವೆ ಮಾಡಿಸಲು ಮನೆಯವರು ಮುಂದಾಗಿದ್ದು, ಹೀಗಾಗಿ ತನ್ನ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಡೆತ್‌ನೋಟ್ ಹಾಕಿದ್ದ. ನನಗೆ ಈಗಲೇ ಮದುವೆ ಇಷ್ಟವಿರಲಿಲ್ಲ. ನನ್ನ ಯಾವುದೇ ಕೆಲಸಕ್ಕೂ ಹೆತ್ತವರಿಂದ ನನಗೆ ಸಪೋರ್ಟ್ ಸಿಕ್ಕಿಲ್ಲ. ಪ್ರತಿ ಕೆಲಸದಲ್ಲೂ ಹೆತ್ತವರೇ ನನ್ನನ್ನು ಹೀಯಾಳಿಸುತ್ತಿದ್ದರು. ನನಗೆ ನೋವಾಗಿದೆ ಎಂದು ಸಂಗಮೇಶ ಡೆತ್ ನೋಟ್‌ನಲ್ಲಿ ಬರೆದಿದ್ದಾನೆ ಎನ್ನಲಾಗಿದೆ. 

ಇನ್ನು ಸಂಗಮೇಶ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಡೆತ್‌ನೋಟ್ ಮೂಲಕ ಯುವಕ ಪ್ರೀತಿ ವಿಷಯ ಬಹಿರಂಗವಾಗಿದೆ. ಮಿಸ್ ಯೂ, ಸಾರಿ ಚೆನ್ನಾಗಿರೋ. ನಾ ನಿನ್ನ ಜೊತೆಲೆ ಇರ್ತೀನಿ. ನಾನು ವಾಪಸ್ ಬರಲ್ಲ. ಸಾರಿ ಬೈ ಅಂತಾ ಡೆತ್‌ನೋಟ್‌ನಲ್ಲಿ ಪ್ರೇಯಿಸಿ ಕುರಿತು ಸಂದೇಶವಿದೆ. ಸದ್ಯ ಲೋಕಾಪುರ ಪೊಲೀಸರು ಹಾಗೂ ಈಜು ತಜ್ಞರು ಬಂದು ಯುವಕನಿಗೆ ಹುಡುಕಾಟ ನಡೆಸುತ್ತಿದ್ದಾರೆ.