ಚಿಕ್ಕಮಗಳೂರು ನಗರದ ನೆಹರೂ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕಟ್ಟಡದ ಮೇಲೇರಿ ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಆತಂಕ ಸೃಷ್ಟಿಸಿದ್ದ. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಹೈಡ್ರಾಮಾದಲ್ಲಿ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಯಶಸ್ವಿಯಾಗಿ ರಕ್ಷಿಸಿದರು.
ಚಿಕ್ಕಮಗಳೂರು (ಜ.03): ಕಾಫಿನಾಡು ಚಿಕ್ಕಮಗಳೂರು ನಗರದ ನೆಹರೂ ರಸ್ತೆಯಲ್ಲಿ ಇಂದು ಮಧ್ಯಾಹ್ನ ವ್ಯಕ್ತಿಯೊಬ್ಬ ಕಟ್ಟಡದ ಮೇಲೇರಿ ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಹೈಡ್ರಾಮಾವನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸಿ, ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ಹಾಸನ ಜಿಲ್ಲೆಯ ಬೇಲೂರು ಮೂಲದ ಗಣೇಶ್ ಎಂಬ ವ್ಯಕ್ತಿ ಚಿಕ್ಕಮಗಳೂರು ನಗರದ ನೆಹರೂ ರಸ್ತೆಯಲ್ಲಿರುವ ಎರಡು ಅಂತಸ್ತಿನ ಕಟ್ಟಡದ ಮೇಲೇರಿ ಈ ಆತ್ಮ*ಹತ್ಯೆಯ ನಾಟಕವಾಡಿದ್ದಾನೆ. ಕೈಯಲ್ಲಿ ಇಟ್ಟಿಗೆ ಹಾಗೂ ಮನೆ ಒರೆಸುವ ಮಾಪ್ ಕೋಲು ಹಿಡಿದುಕೊಂಡಿದ್ದ ಈತ, ತನ್ನ ಹತ್ತಿರ ಯಾರೇ ಬಂದರೂ ಹೊಡೆಯುವುದಾಗಿ ಮತ್ತು ಕೆಳಕ್ಕೆ ಜಿಗಿಯುವುದಾಗಿ ಪೊಲೀಸರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಎಚ್ಚರಿಕೆ ನೀಡುತ್ತಿದ್ದನು.
ಸಿನಿಮೀಯ ಶೈಲಿಯ ಕಾರ್ಯಾಚರಣೆ
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಆತನನ್ನು ಕೆಳಕ್ಕೆ ಇಳಿಸಲು ಹರಸಾಹಸ ಪಟ್ಟರು. ಆದರೆ ಗಣೇಶ್ ಮಾತ್ರ ತನ್ನ ಹತ್ತಿರ ಯಾರೂ ಬರದಂತೆ ಧಮ್ಕಿ ಹಾಕುತ್ತಿದ್ದನು. ಈ ವೇಳೆ ಸಮಯಪ್ರಜ್ಞೆ ಮೆರೆದ ಅಧಿಕಾರಿಗಳು ಒಂದು ಕಡೆಯಿಂದ ಪೊಲೀಸರು ಆತನ ಜೊತೆ ಮಾತನಾಡುತ್ತಾ ಆತನ ಗಮನ ಬೇರೆಡೆ ಸೆಳೆದರು. ಅದೇ ಸಮಯದಲ್ಲಿ ಕಟ್ಟಡದ ಮತ್ತೊಂದು ಭಾಗದಿಂದ ಸದ್ದಿಲ್ಲದೆ ಮೇಲೇರಿದ ಅಗ್ನಿಶಾಮಕ ಸಿಬ್ಬಂದಿಗಳು ಹಠಾತ್ತನೆ ಆತನನ್ನು ಹಿಡಿದು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.
ನಗರದ ಅತ್ಯಂತ ಜನನಿಬಿಡ ರಸ್ತೆಯಲ್ಲಿ ನಡೆದ ಈ ಘಟನೆಯನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು. ವ್ಯಕ್ತಿಯನ್ನು ಯಶಸ್ವಿಯಾಗಿ ಕೆಳಗಿಳಿಸಿದ ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದು, ಈ ಕೃತ್ಯಕ್ಕೆ ನಿಖರವಾದ ಕಾರಣವೇನು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


