ಮಯೂರ ಹೆಗಡೆ

ಹುಬ್ಬಳ್ಳಿ(ಏ.23): ಕೊರೋನಾ ಕಾರಣದಿಂದ ಕೂಳಿಲ್ಲದೆ ಕನಲಿರುವ ಬೀದಿ ನಾಯಿಗಳಿಗೆ, ಬಿಡಾಡಿ ದನಗಳಿಗೆ ಇಲ್ಲೊಬ್ಬ ಯುವಕ ಆಸರೆಯಾಗಿದ್ದಾನೆ. ಸ್ನೇಹಿತರ ನೆರವಲ್ಲಿ ಕಳೆದ 20 ದಿನಗಳಿಂದ ನೂರಾರು ನಾಯಿಗಳಿಗೆ ಊಟ ನೀಡುತ್ತ, ರಾಸುಗಳಿಗೆ ಮೇವು ನೀಡುತ್ತ ಹಸಿವು ನೀಗಿಸುತ್ತಿದ್ದಾನೆ.

ಈತ ನಿಖಿಲೇಶ ಕುಂದಗೋಳ. ಕೇಶ್ವಾಪುರ ಬಳಿಯ ನಕ್ಷತ್ರ ಕಾಲನಿ ನಿವಾಸಿ. ಕಳೆದ ಆಗಸ್ಟ್‌ನಲ್ಲಿ ನೆರೆ ಉಕ್ಕೇರಿದಾಗ ಬೀದಿ ಬದಿಯ ಜಾನುವಾರುಗಳು ತತ್ತರಿಸಿ ಹೋಗಿದ್ದವು. ಆಗಲೂ ಅವುಗಳ ನೆರವಿಗೆ ಧಾವಿಸಿದ್ದ. ಈಗಲೂ ಅದೇ ಭಾವುಕತೆಯಿಂದ, ಪ್ರಾಣಿಗಳ ಮೇಲಿನ ಪ್ರೀತಿಯಿಂದ ಅವುಗಳಿಗೆ ಪ್ರತಿನಿತ್ಯ ಆಹಾರ ಒದಗಿಸುತ್ತಿದ್ದಾನೆ.

ಕೊರೋನಾ ವಾರಿಯರ್ಸ್‌ ಅಂತರಾಳದ ಮಾತು: 'ಒಂದೇ ಮನ್ಯಾಗಿದ್ರೂ ಅಪರಿಚಿತರಂತೆ ಇರ್ತೇನ್ರಿ'

ಏಪ್ರಿಲ್ ನಿಂದ ಪ್ರತಿನಿತ್ಯ 60 ಶ್ವಾನಗಳಿಗೆ, ಹತ್ತಾರು ದನಗಳಿಗೆ ಮೇವು ಒದಗಿಸುತ್ತಿದ್ದಾನೆ. ಇಲ್ಲಿವರೆಗೆ ಒಂದು ಕ್ವಿಂಟಲ್ ಶ್ವಾನಗಳಿಗೆ ಆಹಾರ ನೀಡಿದ್ದಾರೆ. ಒಂದು ಟ್ರ್ಯಾಕ್ಟರ್ ಮೇವನ್ನು ಸ್ನೇಹಿತರಾದ ಮಹ್ಮದ ಮಲಘನ್, ಸುನೀಲ್ ಪಾಟೀಲ್, ನಾಭಿರಾಜ ಹಾಗೂ ಗೌತಮ ಸಹಕಾರದಿಂದ ಪಡೆದು ಒದಗಿಸಿದ್ದಾನೆ.

ಈ ಬಗ್ಗೆ ಮಾತನಾಡಿದ ನಿಖಿಲೇಶ, ಮೊದಲಿಂದಲೂ ಶ್ವಾನಗಳ ಮೇಲೆ ಪ್ರೀತಿ ಹೆಚ್ಚು. ಪ್ರತಿದಿನ ಸಂಜೆ 4ಕ್ಕೆ ಕಾರಿನಲ್ಲಿ ಹೊರಟು ರಾತ್ರಿ 11 ಗಂಟೆವರೆಗೆ ನಗರದಲ್ಲಿ ಸುತ್ತಾಡಿ ನಾಯಿಗಳು ಇರುವೆಡೆ ಆಹಾರ ನೀಡಿ‌ ಅವು ತಿಂದು ಮುಗಿಸುವವರೆಗೂ ಇದ್ದು ಬರುತ್ತೇನೆ. ಕುಸುಗಲ್ ರಸ್ತೆಯಿಂದ ಆರಂಭಿಸಿ ಗೋಕುಲ, ಗಬ್ಬೂರು, ನೇಕಾರ ನಗರ, ಹಳೆ ಹುಬ್ಬಳ್ಳಿ, ಧಾರವಾಡ ರಸ್ತೆಯಲ್ಲಿರುವ ನಾಯಿಗಳಿಗೆ ಪೆಡಿಗ್ರಿ ರೀತಿಯ ಆಹಾರ ನೀಡುತ್ತಿದ್ದೇನೆ ಎಂದು ಶ್ವಾನ ಪ್ರೀತಿ ವ್ಯಕ್ತಪಡಿಸುತ್ತಾನೆ.

ನಾವು ನಾಯಿ ಸಾಕುವುದು ಎಂದ ತಕ್ಷಣ ಹೆಚ್ಚು ಹಣ ನೀಡಿ ಬ್ರೀಡ್ ಗಳನ್ನು ತಂದು ಪಾಲಿಸುತ್ತೇವೆ. ಆದರೆ ನಮ್ಮ ದೇಸಿಯವಾಗಿ 12 ಬಗೆಯ ತಳಿಗಳಿವೆ. ಇವು ಬ್ರೀಡ್ ಗಳಿಗಿಂತ ಹೆಚ್ಚು ಉತ್ತಮ. ಆದರೆ ಅವುಗಳನ್ನು ಸಾಕುವವರು ಕಡಿಮೆ ಆಗುತ್ತಿದ್ದಾರೆ. ಹೀಗಾಗಿ ಬೀದಿನಾಯಿ ಎನಿಸಿಕೊಳ್ಳುತ್ತಿವೆ. ಅವುಗಳ ಉಳಿಯಬೇಕಿದೆ. ಹೀಗಾಗಿ ಇಂತ ಸಂದಿಗ್ಧ ಸಮಯದಲ್ಲಿ ಅವಕ್ಕೆ ಆಹಾರ ಒದಗಿಸುತ್ತಿದ್ದೇನೆ ಎನ್ನುತ್ತಾನೆ.
ಇಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಮನುಷ್ಯನಿಗೆ ತನ್ನ ಕಷ್ಟ ಹೇಳಿಕೊಂಡು ಬದುಕಲು ಅವಕಾಶ ಇದೆ. ಆದರೆ ಪ್ರಕೃತಿ ವಿರುದ್ಧ ಎಂದೂ ಹೋಗದ ಪ್ರಾಣಿಗಳು ಬಲಿಯಾಗುತ್ತವೆ. ಅವುಗಳಿಗೆ ನನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದೇನೆ ಎಂದು ನಿಖಿಲೇಶ ಕುಂದಗೋಳ ಅವರು ಹೇಳಿದ್ದಾರೆ.