ಪ್ರಯಾಣಿಕರ ಆಗ್ರಹಕ್ಕೆ ಮಣಿದಿರುವ ನಮ್ಮ ಮೆಟ್ರೋ ನಗರದ ಆರ್‌.ವಿ. ರಸ್ತೆ - ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಪ್ರತಿ ಸೋಮವಾರ ರೈಲು ಸಂಚಾರವನ್ನು ಬೆಳಗಿನ ಜಾವದಲ್ಲಿ ಆರಂಭಿಸಲು ನಿರ್ಧರಿಸಿದ್ದು, ಬೆಳಗ್ಗೆ 5.5 ಮತ್ತು 5.35ಕ್ಕೆ ಎರಡು ರೈಲು ಸೇವೆ ಒದಗಿಸಲು ಮುಂದಾಗಿದೆ.

ಬೆಂಗಳೂರು : ಪ್ರಯಾಣಿಕರ ಆಗ್ರಹಕ್ಕೆ ಮಣಿದಿರುವ ನಮ್ಮ ಮೆಟ್ರೋ ನಗರದ ಆರ್‌.ವಿ. ರಸ್ತೆ - ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಪ್ರತಿ ಸೋಮವಾರ ರೈಲು ಸಂಚಾರವನ್ನು ಬೆಳಗಿನ ಜಾವದಲ್ಲಿ ಆರಂಭಿಸಲು ನಿರ್ಧರಿಸಿದ್ದು, ಬೆಳಗ್ಗೆ 5.5 ಮತ್ತು 5.35ಕ್ಕೆ ಎರಡು ರೈಲು ಸೇವೆ ಒದಗಿಸಲು ಮುಂದಾಗಿದೆ.ಈವರೆಗೆ ಬೆಳಿಗ್ಗೆ 6 ಗಂಟೆಗೆ ರೈಲು ಸೇವೆ ಆರಂಭವಾಗುತ್ತಿತ್ತು.

ಪ್ರಯಾಣಿಕರು ಪ್ರತಿಭಟಿಸಿದ ಹಿನ್ನೆಲೆ

ಕಳೆದ ವಾರ ರೈಲು ಸಂಚಾರ ವಿಳಂಬ ಪ್ರಶ್ನಿಸಿ ಪ್ರಯಾಣಿಕರು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಈ ನಿರ್ಧಾರಕ್ಕೆ ಬಂದಿದೆ. ಸೋಮವಾರ ಬಿಟ್ಟು ಉಳಿದ ದಿನ ಬೆಳಗ್ಗೆ 6 ಗಂಟೆಗೆ ಹಾಗೂ ಭಾನುವಾರ ಬೆಳಗ್ಗೆ 7 ಗಂಟೆಗೆ ರೈಲುಸೇವೆ ಆರಂಭವಾಗಲಿದೆ. ಸಮಯ ಬದಲಾವಣೆ ಬಗ್ಗೆ ನಿಲ್ದಾಣಗಳ ಫಲಕದಲ್ಲಿ ಮಾಹಿತಿ ನೀಡಲಾಗುತ್ತಿದೆ. ಹಸಿರು, ನೇರಳೆ ಮೆಟ್ರೋ ಮಾರ್ಗದಲ್ಲಿ ಪ್ರತಿದಿನ 5.5 ಗಂಟೆಗೆ ಮೆಟ್ರೋ ಸೇವೆ ಪ್ರಾರಂಭವಾಗುತ್ತದೆ.

ಹಳದಿ ಮಾರ್ಗದಲ್ಲೂ ಸೇವೆ ಒದಗಿಸುವಂತೆ ಪ್ರಯಾಣಿಕರು ಆಗ್ರಹ

ಅದರಂತೆ ಹಳದಿ ಮಾರ್ಗದಲ್ಲೂ ಸೇವೆ ಒದಗಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದರು. ಸೋಮವಾರ ಹಸಿರು ಮಾರ್ಗದ ಮೂಲಕ ಬರುವ ಪ್ರಯಾಣಿಕರು ಆರ್‌.ವಿ. ರಸ್ತೆ ಇಂಟರ್‌ಚೇಂಜ್‌ ನಿಲ್ದಾಣಕ್ಕೆ ಬೇಗ ತಲುಪುತ್ತಾರೆ. ಆದರೆ ಮೂರನೇ ಪ್ಲಾಟ್‌ಫಾರ್ಮ್‌ನಲ್ಲಿ ಬರುವ ಹಳದಿ ಮಾರ್ಗದ ರೈಲಿಗಾಗಿ ಅರ್ಧ ಗಂಟೆ ಕಾಯಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಪ್ರಯಾಣಿಕರು ಹಳದಿ ಮಾರ್ಗದಲ್ಲೂ ಬೇಗ ರೈಲು ಆರಂಭಿಸುವಂತೆ ಒತ್ತಾಯಿಸಿದ್ದರು.