ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎಂಬ ಮಾತು ಕೇಳಿಬಂದಿದ್ದ ಶಾಸಕರೊಬ್ಬರು ಈಗ ಕಾಂಗ್ರೆಸ್ ನ ಹಿರಿಯ ಸಚಿವರೊಬ್ಬರ ಆಶೀರ್ವಾದ ಬೇಕು ಎಂದಿದ್ದಾರೆ. ಇವರ ಮಾತಿನ ಹಿಂದಿನ ಮರ್ಮ ಮಾತ್ರಬಲ್ಲವರು ಯಾರೂ ಇಲ್ಲ.

ಶಿರಸಿ [ಸೆ.28]  ಸಚಿವ ಆರ್.ವಿ. ದೇಶಪಾಂಡೆ ನನ್ನ ತಂದೆ ಸ್ಥಾನದಲ್ಲಿರುವವರು. ಹಾಗಾಗಿ ಅವರೇ ನಿಂತು ನನ್ನನ್ನು ಮಂತ್ರಿ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ರಫೇಲ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಶಿರಸಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ದೇಶಪಾಂಡೆಯವರು ಕಾರವಾರದಲ್ಲಿ ದೇವರ ಆಶೀರ್ವಾದದ ಬಗ್ಗೆ ಮಾತನಾಡಿದ್ದಾರೆ. ದೇಶಪಾಂಡೆ ಅವರಿಗೆ ದೇವರ ಆಶೀರ್ವಾದ ಸಿಕ್ಕಂತೆ ನನಗೂ ದೇವರು ಆಶೀರ್ವದಿಸಿದ್ದಾನೆ.

ಆದ್ದರಿಂದಲೆ ಮತದಾರರ ಆಶಯದಂತೆ ಆಯ್ಕೆಯಾಗಿದ್ದೇನೆ. ಈಗಾಗಲೆ ದೇವರ ಆಶೀರ್ವಾದ ಲಭ್ಯವಾಗಿದ್ದರಿಂದ, ಈಗ ದೇಶಪಾಂಡೆಯವರ ಆಶೀರ್ವಾದಕ್ಕೆ ಕಾದಿರುವೆ.ಅವರೊಬ್ಬರ ಆಶೀರ್ವಾದ ಸಿಕ್ಕಿದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದರು.