ಸಂಪುಟ ವಿಸ್ತರಣೆ: ' ಶಾ ನನ್ನ ಹೆಸರು ಯಾಕೆ ಆಯ್ಕೆ ಮಾಡಿಕೊಂಡಿದ್ದಾರೊ ಗೊತ್ತಿಲ್ಲ’
ಹೈ. ಕ ಭಾಗಕ್ಕೆ ಪ್ರಾತಿನಿಧ್ಯ ಸಿಗಲಿ ಎನ್ನುವುದು ಎಲ್ಲರ ಅಪೇಕ್ಷೆ| ನನ್ನ ಹೆಸರು ಸಚಿವರ ಪಟ್ಟಿಯಲ್ಲಿ ಬರುವುದನ್ನು ಮಾಧ್ಯಮದಲ್ಲಿ ನೋಡಿದ್ದೇನೆ| ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಯಡಿಯೂರಪ್ಪ, ರಾಷ್ಟ್ರೀಯ ನಾಯಕರಿಗೆ ಬಿಟ್ಟದ್ದು|
ಕೊಪ್ಪಳ[ಜ.31]: ನಾನು ಸಚಿವ ಸ್ಥಾನವನ್ನು ಕೇಳಿ ಪಡೆಯೋದಿಲ್ಲ. ಪಕ್ಷದವರು ಸಚಿವ ಸ್ಥಾನ ನೀಡಿದರೆ ಮಾತ್ರ ತೆಗೆದುಕೊಳ್ಳುತ್ತೇನೆ. ಹಿರಿಯರು ಏನು ವಿಚಾರ ಮಾಡಿದ್ದಾರೋ ಗೊತ್ತಿಲ್ಲ. ನಾನು ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ಸಿಗಲಿ ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ ಎಂದು ಜಿಲ್ಲೆಯ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೇಳಿದ್ದಾರೆ.
ಸಂಪುಟ ಸೇರ್ಪಡೆ ವಿಚಾರದ ಸಂಬಂಧ ಶುಕ್ರವಾರ ನಗರದಲ್ಲಿ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಹೈ. ಕ ಭಾಗಕ್ಕೆ ಪ್ರಾತಿನಿಧ್ಯ ಸಿಗಲಿ ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ. ಇದನ್ನು ನಾವು ವರಿಷ್ಠರಿಗೆ ಹೇಳಿದ್ದೇವೆ. ನನ್ನ ಹೆಸರು ಸಚಿವರ ಪಟ್ಟಿಯಲ್ಲಿ ಬರುವುದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ರಾಷ್ಟ್ರೀಯ ನಾಯಕರಿಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ.
ನಾನು ದೆಹಲಿ ಸೇರಿದಂತೆ ಎಲ್ಲಿಗೂ ಹೋಗಿಲ್ಲ. ಹೈ ಕ ಭಾಗದಲ್ಲಿ ಜಾತಿಯ ಪ್ರಶ್ನೆನೇ ಇಲ್ಲ. ಬಿಜೆಪಿಯಲ್ಲಿ ಜಾತಿಗೆ ಹೆಚ್ಚು ಮಹತ್ವವಿಲ್ಲ. ಅಮಿತ್ ಶಾ ಅವರು ನನ್ನ ಹೆಸರನ್ನು ಯಾವ ಕಾರಣಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೊ ಗೊತ್ತಿಲ್ಲ. ಸಚಿವ ಸ್ಥಾನಕ್ಕಾಗಿ ನಾನು ಕನಸು ಇಟ್ಟುಕೊಂಡವನೂ ನಾನಲ್ಲ, ಅಷ್ಟೊಂದು ಮಹತ್ವಾಂಕ್ಷಿಯೂ ನಾನಲ್ಲ.ನಮ್ಮ ರಾಷ್ಟ್ರೀಯ ನಾಯಕರು ಬಟ್ಟು ಮಾಡಿ ಏನು ತೋರಿಸುತ್ತಾರೋ ಅದನ್ನ ತೆಲೆ ಮೇಲೆ ಹೊತ್ತುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.