ಶರಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಪ್ಪ, ಮಕ್ಕಳು ಅಧಿಕಾರ ಮಾಡುತ್ತಿದ್ದಾರೆ ಬಿಟ್ಟರೆ ಸಂತ್ರಸ್ತರ ಪರವಾಗಿ ಒಮ್ಮೆಯೂ ಧ್ವನಿ ಎತ್ತುವ ಕೆಲಸವನ್ನು ಬಿ.ಎಸ್‌.ಯಡಿಯೂರಪ್ಪರಾಗಲಿ, ಸಂಸದ ಬಿ.ವೈ.ರಾಘವೇಂದ್ರರಾಗಲಿ ಮಾಡಿಲ್ಲ ಎಂದು ಮಲೆನಾಡು ರೈತರ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್‌ ಆರೋಪಿಸಿದರು.

ಶಿವಮೊಗ್ಗ (ಡಿ.11) : ಶರಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಪ್ಪ, ಮಕ್ಕಳು ಅಧಿಕಾರ ಮಾಡುತ್ತಿದ್ದಾರೆ ಬಿಟ್ಟರೆ ಸಂತ್ರಸ್ತರ ಪರವಾಗಿ ಒಮ್ಮೆಯೂ ಧ್ವನಿ ಎತ್ತುವ ಕೆಲಸವನ್ನು ಬಿ.ಎಸ್‌.ಯಡಿಯೂರಪ್ಪರಾಗಲಿ, ಸಂಸದ ಬಿ.ವೈ.ರಾಘವೇಂದ್ರರಾಗಲಿ ಮಾಡಿಲ್ಲ ಎಂದು ಮಲೆನಾಡು ರೈತರ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್‌ ಆರೋಪಿಸಿದರು.

ಇಲ್ಲಿನ ಪ್ರೆಸ್‌ ಟ್ರಸ್ಟ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಕ್ಷೇತ್ರದಲ್ಲೇ 25 ಸಾವಿರ ಬಗರ್‌ ಹುಕುಂ ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಇದೇ ರೈತರ ಪರವಾಗಿ ಇವರು ಪಾದಯಾತ್ರೆ ಮಾಡಿದ್ದನ್ನು ಮರೆತುಬಿಟ್ಟಿದ್ದಾರೆ ಎಂದು ಹರಿಹಾಯ್ದರು.

ಸಂತ್ರಸ್ತರ ಪರ ಪಾರ್ಲಿಮೆಂಟಲ್ಲಿ ಮಾತಾಡುವ ತಾಕತ್ತು ಇಲ್ವಾ? ಸಂಸದರ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರು ವಿಧಾನಸಭೆಯಲ್ಲಿ ಕಳೆದ ವರ್ಷ ನ.10ರಂದು ಸಭೆ ನಡೆಸಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ರೈತರು ಹಕ್ಕು ಪಡೆಯಲು ರೈತರು 75 ವರ್ಷದ ದಾಖಲೆ ಕೊಡಬೇಕಾದುದನ್ನು 25 ವರ್ಷಕ್ಕೆ ಇಳಿಸುತ್ತೇನೆ. ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುತ್ತೇನೆ ಎಂದು ಹೇಳಿದ್ದರು. ಮೊನ್ನೆ ಜಿಲ್ಲೆಗೆ ಬಂದಾಗ 20 ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದವರು ಈಗ ಚಕಾರವೇ ಎತ್ತುತ್ತಿಲ್ಲ. ಯಡಿಯೂರಪ್ಪ ಅವರಾದಿಯಾಗಿ ಜಿಲ್ಲೆಯ ಬಿಜೆಪಿ ಶಾಸಕರು ಯಾರು ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತಿಲ್ಲ ಎಂದು ಟೀಕಿಸಿದರು.

ಯಡಿಯೂರಪ್ಪ ಅವರ ಪೆಸಿಟ್‌ ಕಾಲೇಜ್‌ ಕೂಡ ವನ್ಯಜೀವಿ ವಲಯದಲ್ಲೇ ಇದೆ. ಆದರೆ, ಅವರಿಗೆ ರಾಜ್ಯ ಸರ್ಕಾರದಿಂದಾಗಲೀ, ಅರಣ್ಯ ಇಲಾಖೆಯಿಂದಾಗಲೀ ಯಾವ ನೋಟಿಸ್‌ ನೀಡಿಲ್ಲ. ಬಡಪಾಯಿಗಳು ಅರ್ಧ ಎಕರೆ ಸಾಗುವಳಿ ಮಾಡಿದರೆ ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಾರೆ, ಕಿರುಕುಳ ನೀಡುತ್ತಾರೆ. ಜೊತೆಗೆ ಕೇಸ್‌ ಕೂಡ ಹಾಕುತ್ತಾರೆ. ಇಷ್ಟರ ಮಧ್ಯೆಯೂ ಯಡಿಯೂರಪ್ಪ ಅವರು ಕಾಲೇಜಿನ ಜಾಗವನ್ನು ಅರಣ್ಯ ವ್ಯಾಪ್ತಿಯಿಂದ ಬಿಡಲು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಸಾಗರ ತಾಲೂಕಿನ ಸಿಗಂದೂರಿನ ದೇವಸ್ಥಾನವನ್ನೂ ಸಹ ಕೆಡವಲು ನೋಟಿಸ್‌ ನೀಡುತ್ತಾರೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಸಿಗಂದೂರು ಹಿಂದುಳಿದ ವರ್ಗಗಳ ದೇವಸ್ಥಾನ ಎಂದೇ ಪ್ರಖ್ಯಾತಿ ಪಡೆದಿದೆ. ರಾಜ್ಯಾದ್ಯಂತ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಇಂತಹ ದೇವಸ್ಥಾನ ಕೆಡವಲು ಅರಣ್ಯಾಧಿಕಾರಿಗಳು ನೋಟಿಸ್‌ ಕೊಡುತ್ತಾರೆ. ಆದರೆ ಯಡಿಯೂರಪ್ಪನವರ ಕಾಲೇಜೀಗೇಕೆ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಾಗರ ತಾಲೂಕು ಅಧ್ಯಕ್ಷ ಧರ್ಮೇಂದ್ರ ಬಿ. ಶಿರವಾಳ, ಹಬೀಬ್‌, ರಾಘವೇಂದ್ರ ಮತ್ತಿತರರು ಇದ್ದರು.

ಅಧಿಕಾರ ಇದ್ದಾಗ ಕಾಂಗ್ರೆಸ್‌ ಭೂಮಿಹಕ್ಕು ಏಕೆ ಕೊಡಲಿಲ್ಲ?: ಸಂಸದ ರಾಘವೇಂದ್ರ

ಶಾಸಕರ ಅಣಕು ಶವಯಾತ್ರೆ

ಶರಾವತಿ ಸಂತ್ರಸ್ಥರ ಸಮಸ್ಯೆಯನ್ನು ಮುಂಬರುವ ಅಧಿವೇಶನದಲ್ಲಿ ಬಗೆಹರಿಸದಿದ್ದರೆ ಮಲೆನಾಡು ಶಾಸಕರ ವರ್ತನೆಯನ್ನು ಖಂಡಿಸಿ ಅವರ ಅಣಕು ಶವಯಾತ್ರೆ ನಡೆಸಲಾಗುವುದು. ಕಾಂಗ್ರೆಸ್‌ ವಿರೋಧ ಪಕ್ಷದ ನಾಯಕರು ಮುಂಬರುವ ಅಧಿವೇಶನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಕೈಗೆತ್ತಿಕೊಳ್ಳಲಿದ್ದಾರೆ. ಇದರ ಜೊತೆಗೆ ಮಲೆನಾಡಿನ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತಲಿದ್ದಾರೆ. ಇಷ್ಟಾದರೂ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸಲು ವಿಫಲರಾದರೆ ಅವರ ಅಣಕು ಶವಯಾತ್ರೆ ನಡೆಸಲಾಗುವುದು ಎಂದು ತೀ.ನಾ. ಶ್ರೀನಿವಾಸ್‌ ತಿಳಿಸಿದರು.