ಯಡಿಯೂರಪ್ಪ ಆಪ್ತ ಕಾಪುಸಿ ಭೇಟಿಯಾಗಿ ಬೆಂಬಲ ಕೋರಿದ ವಿ. ಸೋಮಣ್ಣ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ, ವರುಣ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿದ್ದ, ಈ ಬಾರಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು. ಸಿದ್ಧಲಿಂಗಸ್ವಾಮಿ ಅವರ ಮೈಸೂರಿನ ನಿವಾಸಕ್ಕೆ ವಸತಿ ಸಚಿವ ಹಾಗೂ ವರುಣ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ವಿ. ಸೋಮಣ್ಣ ಅವರು ಶುಕ್ರವಾರ ಭೇಟಿ ನೀಡಿ, ಬೆಂಬಲ ಕೋರಿದರು.
ಮೈಸೂರು : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ, ವರುಣ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿದ್ದ, ಈ ಬಾರಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು. ಸಿದ್ಧಲಿಂಗಸ್ವಾಮಿ ಅವರ ಮೈಸೂರಿನ ನಿವಾಸಕ್ಕೆ ವಸತಿ ಸಚಿವ ಹಾಗೂ ವರುಣ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿ ವಿ. ಸೋಮಣ್ಣ ಅವರು ಶುಕ್ರವಾರ ಭೇಟಿ ನೀಡಿ, ಬೆಂಬಲ ಕೋರಿದರು.
ನಿನ್ನ ಬಗ್ಗೆ ನಾನು ಏನು ಅಂದು ಕೊಂಡಿಲ್ಲ. ನನ್ನನ್ನ ಬೆಂಬಲಿಸು. ನೀನೇ ನನ್ನ ಸೈನ್ಯದ ಕಮಾಂಡರ್ ಆಗಿ ಕೆಲಸ ಮಾಡು. ನಿನ್ನ ನಂಬಿದ್ದೇನೆ, ದಯಮಾಡಿ ಕೈ ಬಿಡಬೇಡ ಎಂದು ವಿ. ಸೋಮಣ್ಣ ಕೈ ಮುಗಿದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾ.ಪು. ಸಿದ್ದಲಿಂಗಸ್ವಾಮಿ ಅವರು, ನಮ್ಮ ಮನೆಯಿಂದಲೇ ಪ್ರಚಾರ ಕಾರ್ಯ ಪ್ರಾರಂಭಿಸಬೇಕು ಎಂದು ಪೂಜೆ ಇಟ್ಟುಕೊಂಡಿದ್ದೇನೆ. ಬೆಳಗ್ಗೆಯೇ ನಿಮ್ಮ ಹೆಸರಲ್ಲಿ ಪೂಜೆ ನಡೆದಿದೆ. ನಿಮ್ಮ ನಕ್ಷತ್ರಕ್ಕೆ ಪೂಜೆ ಮಾಡಿಸಿದ್ದೇವೆ, ಈ ಬಾರಿ ನೀವು ಗೆಲ್ಲುತ್ತೀರಿ ಎಂದು ಹೇಳಿದರು. ಬಳಿಕ ಕಾ.ಪು. ಸಿದ್ದಲಿಂಗಸ್ವಾಮಿ ಅವರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ವಿ. ಸೋಮಣ್ಣ ಅವರು, ನಂತರ ಕಾ.ಪು. ಸಿದ್ದಲಿಂಗಸ್ವಾಮಿ ಅವರ ಮನೆಯಲ್ಲಿ ತಿಂಡಿ ತಿಂದರು.
ಕಾಪುಸಿಗೆ ಜವಾಬ್ದಾರಿ ನೀಡಿದ್ದೇನೆ
ನಂತರ ಸಚಿವ ವಿ. ಸೋಮಣ್ಣ ಮಾತನಾಡಿ, ಕಾ.ಪು. ಸಿದ್ದಲಿಂಗಸ್ವಾಮಿ ನನ್ನ ಸಹೋದರ ಇದ್ದ ಹಾಗೆ. ಯಾವುದೊ ಜನ್ಮದಲ್ಲಿ ಅಣ್ಣನ್ನಾಗಿಯೋ, ತಮ್ಮನಾಗಿಯೂ ಹುಟ್ಟಿದ್ದೆವು ಅನಿಸುತ್ತೆ. ಸಿದ್ದಲಿಂಗಸ್ವಾಮಿಗೆ ಕೆಲವು ಜವಾಬ್ದಾರಿ ನೀಡಿದ್ದೇನೆ. ವರುಣಗೆ ಯಡಿಯೂರಪ್ಪ, ಸಿಎಂ, ಛಲವಾದಿ ನಾರಾಯಣಸ್ವಾಮಿ ಬರಲಿದ್ದು. ಆ ಎಲ್ಲಾ ಜವಾಬ್ದಾರಿ ಸಿದ್ದಲಿಂಗಸ್ವಾಮಿಗೆ ನೀಡಿದ್ದೇನೆ ಎಂದು ಹೇಳಿದರು.
ಇಂದಿನಿಂದ ವರುಣದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಒಂದು ವಾರದ ಬಳಿಕ ಕ್ಷೇತ್ರದ ವಾತಾವರಣ ತಿಳಿಯುತ್ತದೆ. ವರುಣವನ್ನ ಮತ್ತೊಂದು ಗೋವಿಂದರಾಜನಗರ ಮಾಡುವ ಗುರಿ ಹೊಂದಿದ್ದೇನೆ ಎಂದು ಅವರು ತಿಳಿಸಿದರು.
ಬಿಜೆಪಿ ನಾಯಕ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿ. ಸೋಮಣ್ಣ ಅವರು, ಲಕ್ಷ್ಮಣ್ ಸವದಿಗೆ ಗುಡ್ ಲಕ್ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ, ಮಾಜಿ ಸದಸ್ಯ ಸದಾನಂದ ಮೊದಲಾದವರು ಇದ್ದರು.
ಮುಂದಿನ ಸಿಎಂ ಸೋಮಣ್ಣ ಘೋಷಣೆ!
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಕಾ.ಪು. ಸಿದ್ದಲಿಂಗಸ್ವಾಮಿ ಅವರ ಮೈಸೂರಿನ ನಿವಾಸಕ್ಕೆ ಸಚಿವ ವಿ. ಸೋಮಣ್ಣ ಅವರು ಭೇಟಿ ನೀಡಿದ ವೇಳೆ ಅವರ ಅಭಿಮಾನಿಗಳು ‘ಮುಂದಿನ ಮುಖ್ಯಮಂತ್ರಿ ಸೋಮಣ್ಣ’ ಎಂದು ಘೋಷಣೆ ಕೂಗಿದ ಪ್ರಸಂಗ ಜರುಗಿತು.