ಬೆಂಗಳೂರು [ಜ.15]:  ಮುಂಬರುವ 2020-21ನೇ ಸಾಲಿನ ಆಯವ್ಯಯದಲ್ಲಿ ಮಾಗಡಿ ರಸ್ತೆಯಲ್ಲಿ ಮೆಟ್ರೋ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಮೀಸಲಿಡುವಂತೆ ಯಶವಂತಪುರ ಕ್ಷೇತ್ರದ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ತಾವರೆಕೆರೆವರೆಗೆ ಸುಮಾರು 16 ಕಿ.ಮೀ ದೂರವಿದೆ. ಕಾಮಾಕ್ಷಿಪಾಳ್ಯ, ಸುಮ್ಮನಹಳ್ಳಿ ಜಂಕ್ಷನ್‌, ಸುಂಕದಕಟ್ಟೆ, ಅಂಜನಾ ನಗರ, ನೈಸ್‌ ರಸ್ತೆ ಜಂಕ್ಷನ್‌ ಮತ್ತು ಚನ್ನೇನಹಳ್ಳಿ ಸೇರಿದಂತೆ ತಾವರೆಕೆರೆ ವರೆಗೆ ಅನೇಕ ಬಡಾವಣೆಗಳಿವೆ. ವಿಶ್ವೇಶ್ವರಯ್ಯ ಮತ್ತು ಕೆಂಪೇಗೌಡ ಸೇರಿದಂತೆ ಹಲವು ಖಾಸಗಿ ಬಡಾವಣೆಗಳಿಂದ ಮೆಜೆಸ್ಟಿಕ್‌, ರೈಲ್ವೆ ನಿಲ್ದಾಣ ಹಾಗೂ ಕೆ.ಆರ್‌.ಮಾರುಕಟ್ಟೆಗೆ ಸೇರಿದಂತೆ ನಗರದ ವಿವಿಧ ಭಾಗಗಳಿಗೆ ಪ್ರತಿ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಹೀಗಾಗಿ ಮಾಗಡಿ ಟೋಲ್‌ಗೇಟ್‌ನಿಂದ ತಾವರೆಕೆರೆ ವರೆಗೆ ಮೆಟ್ರೋ ರೈಲು ಸಂಚಾರವನ್ನು ಪ್ರಾರಂಭಿಸುವುದು ಅಗತ್ಯವಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಹ ಮನವಿ ಸಲ್ಲಿಸುವಂತೆ ಕೋರಿದ್ದಾರೆ.

ಬೆಂಗಳೂರು : ಮಾರ್ಚ್ ವೇಳೆಗೆ ಮೆಟ್ರೋ ಸುರಂಗ ಕಾಮಗಾರಿ?...

ಅದೇ ರೀತಿ ಮಾಗಡಿ ರಸ್ತೆಯ ವ್ಯಾಪ್ತಿಯಲ್ಲಿ ಸುಮ್ಮನಹಳ್ಳಿ ವೃತ್ತದಿಂದ ಗೊಲ್ಲರಹಟ್ಟಿ- ನೈಸ್‌ ಜಂಕ್ಷನ್‌ವರೆಗೆ ಸುಂಕದಕಟ್ಟೆ, ಅಂಜನಾ ನಗರ, ಬ್ಯಾಡರಹಳ್ಳಿ ನೈಸ್‌ ರಸ್ತೆ ಜಂಕ್ಷನ್‌ ಮಾರ್ಗದಲ್ಲಿ ವಾಹನ ಸಂಚಾರ ಪ್ರತಿ ನಿತ್ಯ ಹೆಚ್ಚಾಗಿದ್ದು, ಈ ರಸ್ತೆ ಮೂಲಕವೇ ಮಾಗಡಿಯಿಂದ ತಾವರೆಕೆರೆ ಮಾರ್ಗದ ಜನರು ನಗರಕ್ಕೆ ಬರುತ್ತಾರೆ. 

ಮಾಗಡಿ ರಸ್ತೆಯೇ ವಿಶ್ವೇಶ್ವರಯ್ಯ ಮತ್ತು ಕೆಂಪೇಗೌಡ ಬಡಾವಣೆಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಹಿನ್ನೆಲೆಯಲ್ಲಿ ಸುಮನಹಳ್ಳಿ ಜಂಕ್ಷನ್‌ನಿಂದ ಗೊಲ್ಲರಹಟ್ಟಿ- ನೈಸ್‌ ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಾಣ ಮಾಡುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.