ಡೋಂಗಿ ಪರಿಸರವಾದಿಗಳಿಂದ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ವಿಫಲ: ರಾಮು ನಾಯ್ಕ
ಯೋಜನೆಗೆ ಮತ್ತೊಮ್ಮೆ ಗ್ರಹಣ ಬಡಿದಿರುವುದು ಬೇಸರದ ಸಂಗತಿ. ಕೆಲವು ಢೋಂಗಿ ಪರಿಸರವಾದಿಗಳು ಈ ಯೋಜನೆಗೆ ಆರಂಭದಿಂದಲೇ ಅಡ್ಡಗಾಲು ಹಾಕುತ್ತಾ ಬಂದಿದ್ದರು. ಕೆಲವು ಆಶಾದಾಯಕ ಬೆಳವಣಿಗೆಗಳಿಂದ ಈ ವರ್ಷವಾದರೂ ಯೋಜನೆಗೆ ಹಸಿರು ನಿಶಾನೆ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಪರಿಸರ ಮಂಡಳಿ ಪುನಃ ಜನರ ನಂಬಿಕೆಯನ್ನು ಹುಸಿ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ ರಾಮು ನಾಯ್ಕ
ಯಲ್ಲಾಪುರ(ಆ.20): ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಹಿನ್ನಡೆಗೆ ಡೋಂಗಿ ಪರಿಸರವಾದಿಗಳೇ ಕಾರಣ ಎಂದು ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಯೋಜನೆಗೆ ಮತ್ತೊಮ್ಮೆ ಗ್ರಹಣ ಬಡಿದಿರುವುದು ಬೇಸರದ ಸಂಗತಿ. ಕೆಲವು ಢೋಂಗಿ ಪರಿಸರವಾದಿಗಳು ಈ ಯೋಜನೆಗೆ ಆರಂಭದಿಂದಲೇ ಅಡ್ಡಗಾಲು ಹಾಕುತ್ತಾ ಬಂದಿದ್ದರು. ಕೆಲವು ಆಶಾದಾಯಕ ಬೆಳವಣಿಗೆಗಳಿಂದ ಈ ವರ್ಷವಾದರೂ ಯೋಜನೆಗೆ ಹಸಿರು ನಿಶಾನೆ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಪರಿಸರ ಮಂಡಳಿ ಪುನಃ ಜನರ ನಂಬಿಕೆಯನ್ನು ಹುಸಿ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
1999ರಲ್ಲಿ ಆರಂಭವಾಗಿದ್ದ ಈ ರೈಲು ಯೋಜನೆಗೆ 2005ರಲ್ಲಿ ಪ್ರಥಮ ತಕರಾರು ಮಾಡಿದವರೇ ಈ ಪರಿಸರವಾದಿಗಳು. ಕಳೆದ 17 ವರ್ಷಗಳಿಂದೀಚೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ರೈಲು ಯೋಜನೆಯ ಆರಂಭಕ್ಕಾಗಿ ಮಾಡುತ್ತಿರುವ ಎಲ್ಲ ಪ್ರಯತ್ನಗಳೂ ಪರಿಸರವಾದಿಗಳ ಪ್ರಭಾವದಿಂದ ವಿಫಲವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಇದೊಂದು ಭಂಡತನದ ರಾಜಕೀಯ' ಹೆಬ್ಬಾರ್ ಘರ್ ವಾಪ್ಸಿಗೆ ಶಾಸಕ ಭೀಮಣ್ಣ ನಾಯ್ಕ್ ಕಿಡಿ
ಪರಿಸರ ಮಂಡಳಿ ಪರಿಸರವಾದಿಗಳ ಕೈಗೊಂಬೆಯಂತೆ ವರ್ತಿಸುತ್ತಿದೆ. ಪರಿಸರ ಮಂಡಳಿಯಿಂದ ಈ ವರೆಗೆ ಒಂದಾದರೂ ಸ್ಪಷ್ಟನೆ ದೊರೆತಿಲ್ಲ. ಆದರೆ ಮಾತೆತ್ತಿದರೆ ಯೋಜನೆಯಿಂದ ಪಶ್ಚಿಮ ಘಟ್ಟದ ಪರಿಸರ ವಿನಾಶಗೊಳ್ಳುತ್ತದೆ ಎಂಬ ಕಾರಣ ನೀಡುತ್ತಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದರು.
25 ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ನಡುವೆಯೇ ನಿರ್ಮಿಸಲಾದ ಕೊಂಕಣ ರೈಲ್ವೆ ಯೋಜನೆಗೆ ಪರಿಸರ ಮಂಡಳಿ ಹೇಗೆ ಅನುಮತಿ ಕೊಡಲು ಸಾಧ್ಯವಾಯಿತು? ದಟ್ಟಾರಣ್ಯದ ನಡುವೆ ನಿರ್ಮಿಸಿದ ನೂರಾರು ಸೇತುವೆ, ಕಿಮೀ ದೂರದ ಸುರಂಗ ಮಾರ್ಗ ನಿರ್ಮಾಣದಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗಲಿಲ್ಲವೇ ಎಂದು ಪ್ರಶ್ನಿಸಿರುವ ಇವರು, ನಮ್ಮ ಜಿಲ್ಲೆಯ ಪಶ್ಚಿಮ ಘಟ್ಟದ ಒಡಲಿನಿಂದ ಸಿದ್ದಾಪುರದಲ್ಲಿ ತಾಳಗುಪ್ಪ ರೈಲು, ದಾಂಡೇಲಿಯ ಅಭಯಾರಣ್ಯದ ನಡುವೆ ಅಂಬೇವಾಡಿ ರೈಲು, ಜೋಯಿಡಾದ ಕಾಡಿನಲ್ಲಿ ಕ್ಯಾಸಲ್‌ರಾಕ್ ರೈಲು ಸಂಚರಿಸುತ್ತಿದೆ. ಇಲ್ಲಿ ಪರಿಸರ ಹಾನಿಯಾಗಿಲ್ಲವೇ? ಎಂದು ಕೇಳಿರುವ ರಾಮು ನಾಯ್ಕ ಇದೀಗ ತಾಳಗುಪ್ಪ-ಹುಬ್ಬಳ್ಳಿ (ಸಿದ್ದಾಪುರ, ಶಿರಸಿ, ಮುಂಡಗೋಡ ಮಾರ್ಗ) ರೈಲು ಯೋಜನೆಗೆ ಚಾಲನೆ ದೊರಕಿದ್ದು, ಈ ಕುರಿತಾಗಿ ಪರಿಸರವಾದಿಗಳು ಏಕೆ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಉತ್ತರ ಕನ್ನಡ: ಒಂದೇ ಒಂದು ಮೇಸೆಜ್‌ಗೆ 32 ಗ್ರಾಮೀಣ ಬಸ್ ನಿಲ್ದಾಣ ಸ್ವಚ್ಛ..!
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಜಾರಿಗೊಂಡರೆ ಯಲ್ಲಾಪುರದ ಕೋಳೀಕೇರಿಯ ಸಮೀಪ ಕಾಡಾನೆಗಳ ನೈಸರ್ಗಿಕ ಓಡಾಟಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಈ ಯೋಜನೆಯನ್ನು ತಡೆಹಿಡಿದಿರುವ ಮಂಡಳಿಗೆ, ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ನಡುವೆಯೇ ಕಾಡಾನೆಗಳ ನಿರ್ಗಮನದ ಪಥವೂ ಇದೆ ಎಂಬ ಪರಿಕಲ್ಪನೆ ಇಲ್ಲವೇ? ಎಂದೂ ಪ್ರಶ್ನಿಸಿದ್ದಾರೆ.
ನಾವು ಯೋಜನೆಯ ಆರಂಭಕ್ಕೆ ಒತ್ತಾಯಿಸುತ್ತೇವೆಯೇ ಹೊರತು, ಬೇರೆ ಪ್ರದೇಶದ ಯೋಜನೆಗಳ ವಿರೋಧಿಗಳಾಗಿಲ್ಲ. ಒಂದೇ ಜಿಲ್ಲೆಯಲ್ಲಿದ್ದರೂ, ಒಂದೇ ಪರಿಸರದಲ್ಲಿದ್ದರೂ ಒಬ್ಬೊಬ್ಬರಿಗೆ ಒಂದೊಂದು ಬಗೆಯ ನ್ಯಾಯ? ಇಂತಹ ತಾರತಮ್ಯವೇಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.