ಮಂಗಳೂರು(ಮೇ.03): ಯಕ್ಷಗಾನ ರಂಗಸ್ಥಳದಲ್ಲಿ ಮುಂಡಾಸು ಸುತ್ತಿ ಪದ್ಯ ಹೇಳಲು ಕುಳಿತರೆ ಚಪ್ಪಾಳೆ ಸುರಿಮಳೆ. ರಂಗದಲ್ಲಿ ಪ್ರತಿ ವೇಷವನ್ನೂ ಕುಣಿಸುತ್ತಿದ್ದ ಬಡಗು ತಿಟ್ಟಿನ ಪೆರ್ಡೂರು ಮೇಳದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್‌ ಜನ್ಸಾಲೆ ಈಗ ಲಾಕ್‌ಡೌನ್‌ ಕಾರಣಕ್ಕೆ ಮನೆಯಲ್ಲೇ ಇದ್ದಾರೆ.

ಸದಾ ತಾಳ ಹಿಡಿದು ಕಲಾವಿದರನ್ನು ಕುಣಿಸುತ್ತಿದ್ದ ಅವರ ಕೈಯಲ್ಲಿ ಈಗ ಗರಗಸದ ವರಸೆ ಹಿಡಿದಿದ್ದಾರೆ. ಅಂದರೆ ಕುಲಕಸುಬು ಮರಗೆಲಸವನ್ನು ಕೂಡ ಮನೆಯಲ್ಲೇ ಮಾಡುತ್ತಿದ್ದಾರೆ. ಮಳೆಗಾಲಕ್ಕೆ ಬೇಕಾದ ಸೌದೆಯನ್ನು ಸಂಗ್ರಹಿಸುವುದರಲ್ಲಿ ನಿರತರಾಗಿದ್ದಾರೆ. ದಿನವೂ ಸಂಜೆ ಹೊತ್ತು ಗರಗಸ ಹಿಡಿದುಕೊಂಡು ಮುರಿದುಬಿದ್ದ ಮರದ ರೆಂಬೆ, ಕೊಂಬೆಗಳನ್ನು ಕಡಿದು ಉರುವಲು ಮಾಡುತ್ತಿದ್ದಾರೆ. ಅದನ್ನು ತಲೆಯಲ್ಲಿ ಹೊತ್ತು ತಂದು ಮನೆಗೆ ಹಾಕುವುದು ಇವರೇ. ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ತನ್ನ ಮನೆ ಕುಂದಾಪುರ ಸಮೀಪ ಜನ್ಸಾಲೆಯಲ್ಲಿ ಇದ್ದ ರಾಘವೇಂದ್ರ ಆಚಾರ್ಯರು ಈಗ ಪತ್ನಿಯ ಮನೆ ಹೆಮ್ಮಾಡಿಗೆ ಬಂದಿದ್ದಾರೆ.

ಮಹಾಮಾರಿ ಕೊರೋನಾ ಭಯಕ್ಕೆ ತರಕಾರಿ ಚರಂಡಿಗೆ ಚೆಲ್ಲಿದ ಜನ!

ಅಡುಗೆ ಕೆಲಸ ಅಚ್ಚುಮೆಚ್ಚು: ಮೇಳದ ತಿರುಗಾಟದ ಬಳಿಕ ಮಳೆಗಾಲದಲ್ಲಿ ಮನೆಯಲ್ಲಿ ಹಂಡೆಗೆ ನೀರು ಹಾಕಿ ಒಲೆಗೆ ಬೆಂಕಿ ಹಾಕಿ ಸ್ನಾನಕ್ಕೆ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯಗೆ ಮನೆ ಕೆಲಸ ಹೊಸದಲ್ಲ. ಮನೆಯಲ್ಲಿದ್ದಾಗ ಅಡುಗೆ ಇವರ ಅಚ್ಚುಮೆಚ್ಚಿನ ಹವ್ಯಾಸವಂತೆ.

ನಾನು ಚಿಕ್ಕವನಿದ್ದಾಗ ತಾಯಿ ಕೆಲಸಕ್ಕೆ ಹೋಗುತ್ತಿದ್ದರು. ನಾನೊಬ್ಬನೇ ಮಗನಾದ್ದರಿಂದ ಎಲ್ಲ ಮನೆಕೆಲಸವನ್ನೂ ತಿಳಿದುಕೊಂಡಿದ್ದೇನೆ. ನೆಲ ಒರೆಸುವುದರಿಂದ ತೊಡಗಿ ಪಾತ್ರೆ ತೊಳೆಯುವುದನ್ನೂ ಮಾಡುತ್ತಿದ್ದೆ. ಅದನ್ನು ಈಗ ಮುಂದುವರಿಸುತ್ತಿದ್ದೇನೆ ಎನ್ನುತ್ತಾರೆ. ಅನ್ನ, ಸಾಂಬಾರ್‌, ಪಲ್ಯ, ಪಾಯಸ ಸೇರಿದಂತೆ ವಿವಿಧ ಅಡುಗೆಯನ್ನು ಸ್ವಾದಿಷ್ಟವಾಗಿ ಮಾಡುವುದರಲ್ಲಿ ಕರಗತ ಎನ್ನುವ ರಾಘವೇಂದ್ರ ಆಚಾರ್ಯರು, ಈಗಲೂ ಪತ್ನಿ ಜೊತೆಗೆ ಅಡುಗೆಗೆ ಸಾಥ್‌ ನೀಡುತ್ತಾರೆ. ತಾನೇ ಕೈಯಾರೆ ಕೈರುಚಿ ಮಾಡುತ್ತಾರೆ. ಕನಿಷ್ಠ 25 ಮಂದಿಗೆ ಅಡುಗೆ ಸಿದ್ಧಪಡಿಸಬಲ್ಲೆ ಎನ್ನುತ್ತಾರೆ.

ಬೇಸಿಗೆಯಲ್ಲಿ ಕೊಬ್ಬರಿ ಸೀಸನ್‌. ಒಣ ತೆಂಗಿನ ಕಾಯಿಯನ್ನು ಮಿಲ್‌ಗೆ ನೀಡಿ ಎಣ್ಣೆ ಸಂಗ್ರಹಿಸುವ ಸಮಯ. ರಾಘವೇಂದ್ರ ಆಚಾರ್ಯರು ಒಂದು ವಾರದಿಂದ ನಿತ್ಯವೂ ತೆಂಗಿನ ಕಾಯಿ ಸುಲಿದು, ಅದನ್ನು ಒಣಗಿಸಿ, ಕೊಬ್ಬರಿ ಸಿದ್ಧಮಾಡಿಟ್ಟುಕೊಂಡಿದ್ದಾರೆ. ಲಾಕ್‌ಡೌನ್‌ ಮುಗಿದ ಕೂಡಲೇ ತೆಂಗಿನ ಎಣ್ಣೆ ಮಿಲ್‌ಗೆ ನೀಡುವ ಯೋಚನೆ. ಇದೇ ರೀತಿ ಅಡುಗೆಗೆ ಬೇಕಾದ ತೆಂಗಿನ ಕಾಯಿ ಸುಲಿದು ಕೊಡುವ ಕೆಲಸವೂ ಇವರದ್ದೇ.

ಈಗ ಬಿಡುವಿನಲ್ಲಿ ರಾಮಾಯಣ, ಮಹಾಭಾರತ ಗ್ರಂಥಗಳನ್ನು ಓದುತ್ತಿರುವ ರಾಘವೇಂದ್ರ ಆಚಾರ್ಯರು, ಯಕ್ಷಗಾನ ಪ್ರದರ್ಶನದಲ್ಲಿ ಕೆಲವು ದೃಶ್ಯಗಳಿಗೆ ಹೊಸ ಟಚ್‌ ನೀಡುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.

ಕೊರೋನಾ ಸೋಂಕಿತ ಬಾಲಕನನ್ನ ಹಿಡಿದಿಟ್ಟುಕೊಳ್ಳುವುದೇ ವೈದ್ಯರಿಗೆ ಸವಾಲಿನ ಕೆಲಸ..!

ಪ್ರಸಂಗ ಪುಸ್ತಕಗಳನ್ನು ಓದುತ್ತಾ ಮನನ ಮಾಡುತ್ತಿದ್ದೇನೆ. ಯಕ್ಷಗಾನ ಪ್ರದರ್ಶನದಲ್ಲಿ ಹೊಸತನ ತೋರಿಸಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ಜೊತೆಗೆ ಮನೆಗೆಲಸದಲ್ಲೂ ನಿರತನಾಗಿರುತ್ತೇನೆ ಎಂದು ಪೆರ್ಡೂರು ಮೇಳದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ತಿಳಿಸಿದ್ದಾರೆ.

-ಆತ್ಮಭೂಷಣ್‌