ಆನಂದ್ ಎಂ. ಸೌದಿ

ಯಾದಗಿರಿ(ಮೇ.18): ಲಾಕ್‌ಡೌನ್‌ನ ಆರಂಭದಿಂದ ಸಡಿಲಿಕೆವರೆಗೆ, ಸುಮಾರು 45 ದಿನಗಳ ಕಾಲ ಯಾವುದೇ ಸೋಂಕಿತರಿಲ್ಲದ ‘ಗ್ರೀನ್ ಝೋನ್’ ಹೆಮ್ಮೆಗೆ ಕಾರಣವಾಗಿದ್ದ ಜಿಲ್ಲೆಯಲ್ಲಿ, ಕಳೆದ ವಾರ ಗುಜರಾತಿನ ಅಹ್ಮದಾಬಾದಿನಿಂದ ಆಗಮಿಸಿದ್ದ ಇಬ್ಬರಲ್ಲಿ (ಪಿ-867 ಹಾಗೂ ಪಿ-868) ಸೋಂಕು ದೃಢಪಟ್ಟ ಮೊದಲ ಪ್ರಕರಣ ನಂತರ, ಇದೀಗ ಜಿಲ್ಲೆಯಲ್ಲಿ ಮುಂ‘ಭಯ’ (ಮುಂಬೈ ಭಯ) ಶುರುವಾಗಿದೆ.

ಮಹಾರಾಷ್ಟ್ರದ ಮುಂಬೈ ಹಾಗೂ ಥಾಣೆಯಿಂದ ಜಿಲ್ಲೆಯ ಶಹಾಪೂರಕ್ಕೆ ವಾಪಸ್ಸಾಗಿದ್ದ ಮೂವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. 30 ವರ್ಷದ ಪುರುಷ (ಪಿ-1139), 22 ವರ್ಷದ ಪುರುಷ (ಪಿ-1140) ಹಾಗೂ 34 ವರ್ಷದ ಪುರುಷ (ಪಿ-1141) ರಲ್ಲಿ ಕೋವಿಡ್ ದೃಢಪಟ್ಟಿದೆ. 

ಯಾದಗಿರಿಗೆ ಕೊರೋನಾಘಾತ: ಸೋಂಕಿತರ ಟ್ರಾವೆಲ್ ಹಿಸ್ಟರಿಯೇ ಮಿಸ್ಟರಿ..!

ಇವರನ್ನು ಶಹಾಪುರ ತಾಲೂಕಿನ ಕನ್ಯೆ ಕೋಳೂರಿನ ಮೆಟ್ರಿಕ್ ಪೂರ್ವ ಅಲ್ಪಸಂಖ್ಯಾತರ ವಸತಿ ನಿಲಯ ಹಾಗೂ ಬೇವಿನಹಳ್ಳಿ (ಜೆ) ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ‘ಇನ್ಸಟ್ಯೂಟಷನಲ್ ಕ್ವಾರಂಟೈನ್’ (ಸ್ವಾಸ್ಥಿಕ ಸಂಪರ್ಕ ತಡೆ ಕೇಂದ್ರ) ಮಾಡಲಾಗಿತ್ತು. ಇವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಶನಿವಾರ ಸಂಜೆ ಇವರಿಗೆ ಸೋಂಕು ತಗುಲಿರುವುದು ಖಚಿತ (ಪಾಸಿಟಿವ್) ಪಡಿಸಿದ ನಂತರ, ಭಾನುವಾರ ನಸುಕಿನ ಜಾವದಲ್ಲೇ ಯಾದಗಿರಿ ನಗರದ ಕೋವಿಡ್ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ.

ಈ ಮೂವರಿಗೆ ಸೋಂಕು ತಗುಲಿರುವುದನ್ನು ಖಚಿತ ಪಡಿಸಿದ ಜಿಲ್ಲಾಽಕಾರಿ ಎಂ. ಕೂರ್ಮಾರಾವ್, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಇನ್ನೂ ಅನೇಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಲಾಕ್‌ಡೌನ್ ಆರಂಭದಿಂದಲೂ ಈವರೆಗೆ ಒಂದೂವರೆ ಲಕ್ಷ ಜನರು ಯಾದಗಿರಿಗೆ ಮರಳಿದ್ದಾರೆನ್ನಲಾಗಿದ್ದು, ಕಳೆದೊಂದು ವಾರದ ಅವಧಿಯಲ್ಲಿ ಅನ್ಯ ರಾಜ್ಯಗಳಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ಜನರು ವಾಪಸ್ಸಾಗಿದ್ದಾರೆ. . ಮಹಾರಾಷ್ಟ್ರದ ಮುಂಬೈ, ಧಾರಾವಿ, ಸಾತಾರಾ, ಪುಣೆ, ಸೋಲಾಪೂರ, ಭಿವಂಡಿ, ಸಿಂಧುದುರ್ಗ, ಬಾಂದ್ರಾ ಮುಂತಾದ ಪ್ರದೇಶಗಳಿಂದ ಬಹುತೇಕರು ಆಗಮಿಸಿದ್ದಾರೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಿಂದ 14 ಸಾವಿರ ಜನರ ಲಾಕ್ ಡೌನ್.3 ಸಡಿಲಿಕೆ ನಂತರ ವಾಪಸ್ಸಾಗಿದ್ದರು.

ಭಾನುವಾರ ಮಧ್ಯಾಹ್ನ ಯಾದಗಿರಿಗೆ ಮಹಾರಾಷ್ಟ್ರದ ಸಿಂಧುದುರ್ಗದಿಂದ ವಿಶೇಷ ರೈಲು ಮೂಲಕ ಯಾದಗಿರಿಗೆ 1400 ಜನರು ಪಸ್ಸಾಗಿದ್ದಾರೆ. ಯಾದಗಿರಿ ಜಿಲ್ಲೆ ಸೇರಿದಂತೆ ನೆರೆಯ ಕಲಬುರಗಿ, ವಿಜಯಪುರ, ರಾಯಚೂರು, ಬೀದರ್ ಮುಂತಾದ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಎಲ್ಲರ ಜ್ವರ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ.