ಕೋವಿಡ್ ನಿಯಂತ್ರಣ: ಯಾದಗಿರಿ ಜಿಲ್ಲಾಡಳಿತದ ಅಂಕಿ ಅಂಶ, ಮರೆಯಾಗಿದೆ ವಾಸ್ತವಾಂಶ

ಊಪರ್ ಶೇರ್‌ವಾನಿ, ಅಂದರ್ ಪರೇಶಾನಿ| ಸತ್ತವರ ಲೆಕ್ಕ ಮಣ್ಣು ಪಾಲು : ಮೃತಪಟ್ಟವರ ಸಂಬಂಧಿಕರ ಗೋಳು ಹೇಳತೀರದು| ಕೋವಿಡ್ ಸಂಕಷ್ಟದಲ್ಲಿ ಹತ್ತಾರು ಸಾವು: ಜಿಲ್ಲಾಡಳಿತ ಜಾಣ ಕುರುಡು| ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ| ಜಿಲ್ಲಾಡಳಿತಕ್ಕೂ ಇದು ಸವಾಲಾಗಿ ಪರಿಣಮಿಸಿದೆ| ಸರ್ಕಾರದ ಆದೇಶಗಳನ್ನು ಪಾಲಿಸದ ಸಾರ್ವಜನಿಕರು|

Yadgir District Administration did not Proper Maintain in Coronavirus

ಆನಂದ್ ಎಂ. ಸೌದಿ

ಯಾದಗಿರಿ(ಆ.01):  ಕೋವಿಡ್-19 ನಿಯಂತ್ರಣ ಹಾಗೂ ವ್ಯವಸ್ಥೆಯಲ್ಲಿ ಯಾದಗಿರಿ ಜಿಲ್ಲಾಡಳಿತದ ಕಾರ್ಯವೈಖರಿ ರಾಜ್ಯಕ್ಕೇ ಮಾದರಿ ಎಂದು ಕೆಲವು ದಿನಗಳ ಹಿಂದಷ್ಟೇ ರಾಜ್ಯಮಟ್ಟದ ಅಧಿಕಾರಿಗಳ ತಂಡವೊಂದು ಹೇಳಿ ಹೋಗಿತ್ತು. ಕೊರೋನಾ ಸಂಕಷ್ಟದ ಸಮಯದಲ್ಲಿ ಹಗಲೂ ರಾತ್ರಿ ದುಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಲಯದಲ್ಲಿ ಇದು ಒಂದಿಷ್ಟು ಚೇತೋಹಾರಿಯೂ ಆಗಿತ್ತು. ಆದರೆ, ಈ ವಿಚಾರದಲ್ಲಿ ಜಿಲ್ಲಾಡಳಿತದ ಅಂಕಿ-ಅಂಶಗಳು ಹಾಗೂ ವಾಸ್ತವಾಂಶಗಳನ್ನು ನೋಡಿದರೆ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ವ್ಯವಸ್ಥೆ ಎನ್ನುವುದು ‘ಊಪರ್ ಶೇರ್‍ವಾನಿ, ಅಂದರ್ ಪರೇಶಾನಿ..’ ಅನ್ನೋ ಮಾತುಗಳು ಇದೀಗ ಸಾರ್ವಜನಿಕ ವಲಯದಲ್ಲಿ ಗುಸುಗುಡುತ್ತಿದೆ.

ಕೊರೋನಾ ಸಂಕಷ್ಟದ ಆರಂಭದ ದಿನಗಳಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿ ಸಾಕಷ್ಟು ಶ್ಲಾಘನೆಗೆ ಪಾತ್ರವಾಗಿತ್ತು. ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ವಿಚಾರದಲ್ಲಿ ಒಂದಿಷ್ಟ ಅವ್ಯವಸ್ಥೆ ಕಂಡುಬಂದರೂ, ಕೊನೆಗೆ ಉತ್ತಮವಾಗಿ ನಿರ್ವಹಿಸಿತು ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ, ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲ ಎಲ್ಲೋ ಕೈಮೀರಿದಂತಹ ಭಾವಕ್ಕೊಳಗಾದಂತಾದ ಆಡಳಿತ, ಅಂಕಿ ಅಂಶಗಳಲ್ಲಿ ಮಾತ್ರ ಹೆಚ್ಚಿನ ಗಮನ ಹರಿಸೀತೆ ಎಂಬ ಅನುಮಾನಗಳು ಜನರನ್ನು ಕಾಡತೊಡಗಿದವು.

ಕೊರೋನಾ ಅಟ್ಟಹಾಸ: ಚಿಕಿತ್ಸೆ ಸಿಗದೇ ಇಬ್ಬರು ಮಹಿಳೆಯರ ಸಾವು

Yadgir District Administration did not Proper Maintain in Coronavirus

ಆಘಾತಕಾರಿ ಅಂಶ ಎಂದರೆ, ಜಿಲ್ಲೆಯಲ್ಲಿ ಕೊರೋನಾ ಹಾಗೂ ಕೊರೋನಾದಿಂದ ಅಲ್ಲದ (ನಾನ್ ಕೋವಿಡ್) ಅನ್ಯ ರೋಗಗಳಿಂದ ಮೃತಪಟ್ಟವರ ಮಾಹಿತಿಯನ್ನೂ ನೀಡುವಲ್ಲಿ ಮೀನಾಮೇಷ ಎಣಿಸಿದಂತಿದೆ. ಕಳೆದೊಂದ ತಿಂಗಳ ಅವಽಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮೃತಪಟ್ಟವರ ಮಾಹಿತಿಗಳನ್ನು ಗಮನಿಸಿದರೆ ನಿಜಕ್ಕೂ ಆಘಾತ ಮೂಡಿಸುತ್ತದೆ. ಜಿಲ್ಲಾಡಳಿತದ ವರದಿಗಳೂ ಹಾಗೂ ಸಾವಿನ ಸಂಖ್ಯೆಗಳ ಗಮನಿಸಿದರೆ, ಒಂದು ರೀತಿಯಲ್ಲಿ ಭಾರಿ ಗೊಂದಲಕ್ಕೆ ಕಾರಣವಾಗಿ, ಕೋವಿಡ್ ಹಾಗೂ ನಾನ್ ಕೋವಿಡ್‌ನಿಂದಾಗಿ ಮೃತಪಟ್ಟವರ ಅಂತ್ಯಸಂಸ್ಕಾರ ವಿಚಾರವಿರಲಿ, ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಕಷ್ಟವೆನಿಸಿತ್ತು ಎಂಬುದು ಜನರ ಅಂಬೋಣ.

ಹದಿನೈದು ದಿನಗಳ ಹಿಂದೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಮನೆಯ ಕೂಗಳತೇ ದೂರದಲ್ಲಿರುವ ನಗರದ ಅಜೀಜಿಯಾ ಕಾಲೋನಿಯಲ್ಲಿ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬೆನ್ನಲ್ಲೇ, ಹತ್ತು ದಿನಗಳೊಳಗಾಗಿ ಅಲ್ಲಿ ನಾಲ್ವರು ಮೃತಪಟ್ಟರು. ಕಂಟೇನ್ಮೆಂಟ್ ಝೋನ್‌ನಲ್ಲಿ ಸಾವು ಸಂಭವಿಸುತ್ತಿದ್ದರೂ ಏನೂ ಆಗಿಯೇ ಇಲ್ಲವೆಂಬ ವಾತಾವರಣ ಜಿಲ್ಲಾಡಳಿತದ ಅಂಕಿ ಅಂಶಗಳಲ್ಲಿತ್ತು. ಯಾದಗಿರಿ ಜಿಲ್ಲೆಯ ಹಿರಿಯ ರಾಜಕಾರಣಿಗಳು, ಸಾಹಿತಿಗಳು, ಸಮುದಾಯವೊಂದರ ಹಿರಿಯ ಪ್ರಮುಖರಿಬ್ಬರ ಸಾವು, ಈವೆಲ್ಲವೂ ಕೋವಿಡ್ ಅಥವಾ ನಾನ್ ಕೋವಿಡ್ ಭಾಗದಲ್ಲೂ ಕಾಣಲಿಲ್ಲ.

Yadgir District Administration did not Proper Maintain in Coronavirus

ಕಲಬುರಗಿ ಅಥವಾ ರಾಯಚೂರಿನಲ್ಲಿ ಮೃತಪಟ್ಟಿದ್ದಾರೆಂದು ಅಲ್ಲಿನ ಲೆಕ್ಕದಲ್ಲಿ ಸೇರಿಸಲಾಗುತ್ತದೆ ಎಂಬ ಆಡಳಿತದ ಮಾತುಗಳು ವಿಚಿತ್ರವಾಗಿತ್ತು. ಯಾದಗಿರಿ ಆಸ್ಪತ್ರೆಯಿಂದ ಅಲ್ಲಿಗೆ ಕಳುಹಿಸಲಾಗಿತ್ತು ಅನ್ನೋ ವಿಚಾರವೇ ಮರೆತಂತಿತ್ತು. ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಾಯಿತೆಂದರೆ, ಸೋಂಕಿನಿಂದಲ್ಲದ ಮೃತಪಟ್ಟ ವ್ಯಕ್ತಿಗಳ ಅಂತ್ಯಕ್ರಿಯೆ ರಾತೋರಾತ್ರಿ ಸದ್ದುಗದ್ದಲವಿಲ್ಲದೆ ನಡೆದರೆ, ಈ ಬಗ್ಗೆ ಮಾತನಾಡಲೂ ಅನೇಕರು ಹಿಂಜರಿದರು. ಮೃತಪಟ್ಟ ವ್ಯಕ್ತಿಗಳ ಹಿನ್ನೆಲೆಯೇನು ? ಸೋಂಕಿತರೆ ? ಅಥವಾ ಏನಾಗಿತ್ತು ? ಎಂಬ ಕನಿಷ್ಠ ಮಾಹಿತಿಗಳೂ ತಿಳಿಯದಾದವು. ಪ್ರಮುಖ ರಸ್ತೆಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಫೋಟೋ ಹಾಕಿದ್ದೇ ಅಧಿಕೃತ ಎನ್ನುವಂತಾಗಿ, ಜನ ಬೆಚ್ಚಿ ಬಿದ್ದರು.

ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ಸೋಂಕಿತರ ಬಿಡುಗಡೆ ವಿಚಾರ, ಕಂಟೇನ್ಮೆಂಟ್ ಝೋನ್‌ಗಳ ನಿರ್ವಹಣೆ, ಇವೆಲ್ಲವೂ ಜನಮಾನಸದಲ್ಲಿ ಕೊರೋನಾ ಸೋಂಕಿಗಿಂತಲೂ ಭೀಕರವಾಗಿ ಕಂಡಿತ್ತು ಎನ್ನಲಾಗಿದೆ. ಪಾಸಿಟಿವ್ ಬಂದಿದ್ದರಿಂದ ಆಸ್ಪತ್ರೆ ಅಥವಾ ಕೇರ್ ಸೆಂಟರಗಳಲ್ಲಿ ಅನುಭವಿಸಿದ್ದು ನರಕಯಾತನೆ ಎಂದು ಖುದ್ದು ಅನೇಕ ಸರ್ಕಾರಿ ಅಽಕಾರಿಗಳೇ ಅಲವತ್ತುಗೊಂಡಿದ್ದರು. ಇನ್ನು, ಜನ ಸಾಮಾನ್ಯರ ಮಾತನ್ನು ಕೇಳುವವರ್‍ಯಾರು ?

ನಿಜ, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲಾಡಳಿತಕ್ಕೂ ಇದು ಸವಾಲಾಗಿ ಪರಿಣಮಿಸಿದೆ. ಬಹುತೇಕ ಸಾರ್ವಜನಿಕರೂ ಸಹ ಸರ್ಕಾರದ ಆದೇಶಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ, ಸೋಂಕು ನಿಯಂತ್ರಿಸುವಲ್ಲಿ ಹೆಣಗಾಡುತ್ತಿರುವ ಜಿಲ್ಲಾಡಳಿತದ ಇಂತಹ ನಡೆ ಅಚ್ಚರಿಗೆ ಕಾರಣವಾಗಿದೆ. ದಾಖಲೆಗಳ ಪ್ರಕಾರ ಎಲ್ಲವೂ ಸರಿಯಿದ್ದರೆ, ವಾಸ್ತವಾಂಶವೇ ಬೇರೆ ಅನ್ನೋ ಮಾತುಗಳಿಗೆ ಜಿಲ್ಲಾಡಳಿತ ಕಿವಿಗೊಟ್ಟು, ಪರಿಶೀಲಿಸಬೇಕಿದೆ. ವಿವಿಧ ಇಲಾಖೆಗಳಲ್ಲಿನ ನೌಕರರು ಅನುಭವಿಸಿದ ‘ನರಕಯಾತನೆ’ಯ ಬಗ್ಗೆಯಾದರೂ ಅರಿತರೆ ಸಾರ್ವಜನಿಕರ ಸಮಸ್ಯೆ ಬಗೆಹರಿದಂತೆ.
 

Latest Videos
Follow Us:
Download App:
  • android
  • ios