ಬಹಿರ್ದೆಸೆಗೆ ಹೋದಾಗ ಕರಡಿ ಡೆಡ್ಲಿ ಅಟ್ಯಾಕ್, ಸೆಣಸಾಡಿ ಪ್ರಾಣ ರಕ್ಷಸಿಕೊಂಡ ರುದ್ರಪ್ಪ!
* ರುದ್ರಪ್ಪ ಎಂಬಾತನ ಮೇಲೆ ದಾಳಿ ನಡೆಸಿದ ಕರಡಿ
* ಕರಡಿ ದಾಳಿಯಿಂದ ಗಂಭೀರ ಗಾಯ
* ಕರಡಿ ಜೊತೆ ಸೆಣಸಾಡಿ ಪ್ರಾಣ ಉಳಿಸಿಕೊಂಡ ರುದ್ರಪ್ಪ
ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ(ಜೂ.27): ಯಾದಗಿರಿ: ಕರಡಿ ಜೊತೆ ಸೆಣಸಾಡಿ ವ್ಯಕ್ತಿಯೊಬ್ಬ ಪ್ರಾಣ ರಕ್ಷಣೆಮಾಡಿಕೊಂಡಿದ್ದಾನೆ. ಕರಡಿಯು ವ್ಯಕ್ತಿಯೊರ್ವನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದು, ರುದ್ರಪ್ಪನ ಮೇಲೆ ಅಟ್ಯಾಕ್ ಮಾಡಿ ಗಂಭೀರ ಗಾಯಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕೂಡ ರುದ್ರಪ್ಪ ಕರಡಿ ಜೊತೆ ಸೆಣಸಾಡಿದ್ದಾನೆ. ಕರಡಿ ಬಾಯಿಯೊಳಗೆ ಟಾವಲ್ ಇಟ್ಟು ರುದ್ರಪ್ಪ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾನೆ.ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ್ 12ರ ಜಂಪಾರದೊಡ್ಡಿಯಲ್ಲಿ ಈ ಘಟನೆ ಜರುಗಿದೆ.
ಬಹಿರ್ದೆಸೆಗೆ ಹೋದಾಗ ಅಟ್ಯಾಕ್ ಮಾಡಿದ ಜಾಂಬವ
ನಸುಕಿನ ಜಾವ ಜಂಪಾರದೊಡ್ಡಿಯ ನಿವಾಸಿ ರುದ್ರಪ್ಪ ಎಂದಿನಂತೆ ಬಹಿರ್ದೆಸೆಗೆ ತೆರಳುತ್ತಿರುವಾಗ ಎದುರಿಗೆ ಬಂದ ಕರಡಿಯು ದಾಳಿ ಮಾಡಿದೆ. ಈ ವೇಳೆ ಕೆಲ ಕ್ಷಣ ಕರಡಿ ಜೊತೆ ಸೆಣಸಾಡಿ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಕರಡಿ ಬಾಯಿಯೊಳಗೆ ಟಾವಲ್ ಇಟ್ಟು ರಕ್ಷಣೆ ಮಾಡಿಕೊಂಡಿದ್ದಾನೆ. ನಂತರ ಸ್ಥಳೀಯರು ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿ ಕರಡಿಯನ್ನು ಓಡಿಸಿದ್ದಾರೆ. ಗಂಭೀರ ಗಾಯಗೊಂಡ ರುದ್ರಪ್ಪನನ್ನು ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಜಿಲ್ಲೆಯ ಲಿಂಗಸೂಗುರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಕೊಡೇಕಲ್ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಗೊಂಡ ರುದ್ರಪ್ಪ ಮಾತನಾಡಿ ಕರಡಿ ದಾಳಿ ಮಾಡಿ ತಲೆಗೆ ಕಚ್ಚಿದೆ ನಂತರ ನಾನು ರಕ್ಷಣೆ ಮಾಡಿಕೊಳ್ಳಲು ಪ್ರಯತ್ನ ಮಾಡಿದೆ. ಸ್ಥಳೀಯರು ಬಂದು ಕರಡಿಯನ್ನು ಓಡಿಸಿ ರಕ್ಷಣೆ ಮಾಡಿದ್ದಾರೆ ಎಂದರು.
ಕರಡಿ ದಾಳಿಯಿಂದ ಬೆಚ್ಚಿ ಬಿದ್ದ ಕಕ್ಕೇರಾ ಜನ..!
ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿರುವ, ಕೃಷ್ಣಾ ನದಿ ತೀರದಲ್ಲಿರುವ ಜಂಪಾರದೊಡ್ಡಿ ಸುತ್ತಲು ಬೆಟ್ಟವಿದೆ. ಇದೇ ಮೊದಲ ಬಾರಿಗೆ ಕರಡಿ ದಾಳಿ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಕರಡಿ ದಾಳಿಯಿಂದ ಜನರು ಆತಂಕಗೊಂಡಿದ್ದು, ಕರಡಿ ದಾಳಿಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಮಕ್ಕಳು, ವೃದ್ಧರು, ಯುವಕರು ಪ್ರತಿಯೊಬ್ಬರೂ ಮನೆಯಿಂದ ಭಯಪಡುವಂತಾಗಿದೆ. ಈ ಬಗ್ಗೆ ನಿವಾಸಿ ಶಿವರಾಜ ಮಾತನಾಡಿ, ರುದ್ರಪ್ಪನ ಮೇಲೆ ಕರಡಿ ದಾಳಿಯಾಗಿದ್ದು ನಮಗೆ ಆತಂಕವಾಗಿದೆ. ಇದೆ ಮೊದಲ ಬಾರಿ ಇಂತಹ ಘಟನೆ ಜರುಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಕರಡಿ ಹಿಡಿದುಕೊಂಡು ಹೋಗಬೇಕೆಂದರು.
ಕರಡಿಯನ್ನು ಸ್ಥಳಾಂತರ ಮಾಡಲು ಸ್ಥಳೀಯರ ಆಗ್ರಹ
ಜಂಪಾರದೊಡ್ಡಿ ನಿವಾಸಿಗಳು ಕರಡಿ ದಾಳಿಯಿಂದ ನೆಮ್ಮದಿ ಕಳೆದುಕೊಂಡಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕರಡಿಯನ್ನು ರಕ್ಷಣೆ ಮಾಡಿ ಕರಡಿಯನ್ನು ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಈಗ ಕೃಷಿ ಚಟುವಟಿಕೆ ಗರಿಗೆದರಿದ್ದು ಒಂದು ವೇಳೆ ಕರಡಿಯನ್ನು ಹಿಡಿದುಕೊಂಡು ಹೋಗದಿದ್ದರೆ ಮತ್ತೆ ಕರಡಿ ದಾಳಿ ಪ್ರಕರಣಗಳು ಹೆಚ್ಚಾಗಲಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳು ಎಚ್ಚೆತ್ತು ಕರಡಿಯನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡಿ ಜನರಲ್ಲಿರುವ ಆತಂಕ ನಿವಾರಣೆ ಮಾಡಬೇಕಿದೆ.