ಅಡಕೆ ದಾಸ್ತಾನು ಲೆಕ್ಕದಲ್ಲಿ ಭಾರೀ ಗೋಲ್‌ಮಾಲ್... ಏನಿದೆ ಇದರ ಹಿಂದೆ?

https://static.asianetnews.com/images/authors/b348a094-0bef-5801-a1f6-61e57071185f.jpg
First Published 18, Jul 2018, 6:05 PM IST
wrong Information in Shimoga Arecanut Market Stock Details
Highlights

ಶಿವಮೊಗ್ಗದಿಂದ ಹೊರಬಿದ್ದಿರುವ ಈ ಸುದ್ದಿ ಅಡಕೆ ಬೆಳೆಗಾರರನ್ನು ಒಂದು ಕ್ಷಣ ದಿಗ್ಭ್ರಾಂತರನ್ನಾಗಿ ಮಾಡಿಸುತ್ತದೆ. ಅಡಕೆ ದಾಸ್ತಾನು ಲೆಕ್ಕದಲ್ಲಿ ಭಾರೀ ಪ್ರಮಾಣದ ಸುಳ್ಳು ಲೆಕ್ಕ ತೋರಿಸಲಾಗುತ್ತಿದೆ. ಯಾಕಾಗಿ..? ಈ ಸ್ಟೋರಿ ಸಂಪೂರ್ಣ ಓದಿ...

ಗೋಪಾಲ್ ಯಡಗೆರೆ
ಶಿವಮೊಗ್ಗ[ಜು.18] 
ನೂರಾರು ಲೋಡ್‌ಗಳಷ್ಟು ತೆರಿಗೆ ತಪ್ಪಿಸಿ ಅಡಕೆ ಸಾಗಾಣಿಕೆ ಮಾಡುತ್ತಿರುವ ವರದಿಯ ಬೆನ್ನಲ್ಲೇ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಇರುವ ಒಟ್ಟಾರೆ ಅಡಕೆ ದಾಸ್ತಾನಿನಲ್ಲಿಯೇ ದೊಡ್ಡ ಗೋಲ್‌ಮಾಲ್ ನಡೆದಿದೆ ಎಂಬ ಸುದ್ದಿ ಹರಡಿದೆ.  ಇದರ ಮೊತ್ತ ಸುಮಾರು ₹420 ಕೋಟಿ ಎಂದು ಅಂದಾಜಿಸಲಾಗಿದೆ.

ಇದರಿಂದ ಅಡಕೆ ಮಾರುಕಟ್ಟೆ ತಲ್ಲಣಗೊಂಡಿದೆ.  ಬೆನ್ನಲ್ಲೇ ಎಪಿಎಂಸಿ ಇದನ್ನು ನಿರಾಕರಿಸಿದೆ.  ಆದರೆ ಇಡೀ ಮಾರುಕಟ್ಟೆಯಲ್ಲಿ ಅಡಕೆ ದಾಸ್ತಾನಿನ ನಿಖರ ಲೆಕ್ಕ ಪತ್ತೆ ಹಚ್ಚಲು ತಕ್ಷಣಕ್ಕೇ ಮುಂದಾಗಿದೆ.  ಇಲ್ಲಿನ ಎಪಿಎಂಸಿಯ ದಾಖಲೆಯ ಲೆಕ್ಕದಲ್ಲಿ ತೋರಿಸಲಾಗುತ್ತಿರುವ ದಾಸ್ತಾನು ಮತ್ತು ವಾಸ್ತವವಾಗಿ ಇರುವ ದಾಸ್ತಾನಿನ ನಡುವೆ ಸುಮಾರು 2 ಲಕ್ಷ ಅಡಕೆ ಚೀಲದಷ್ಟು ವ್ಯತ್ಯಾಸವಿದೆ ಎನ್ನಲಾಗಿದೆ.

ಈಗಾಗಲೇ ಎಪಿಎಂಸಿ ಮಾರುಕಟ್ಟೆ ಅಡಕೆ ವಲಯದಲ್ಲಿ ಈ ಸುದ್ದಿ ಹರಡಿದ್ದು, ಸಾಕಷ್ಟು ವರ್ತಕರು ಇದನ್ನು ಅನುಮೋದಿಸುತ್ತಿದ್ದಾರೆ.  ಈ ರೀತಿ ಅಡಕೆ ಚೀಲ ಇಲ್ಲದೆ ಕೇವಲ ಲೆಕ್ಕದಲ್ಲಿ ಮಾತ್ರ ‘ಭಾರೀ ಪ್ರಮಾಣದ ಅಡಕೆ ಚೀಲಗಳನ್ನು ತೋರಿಸಲಾಗುತ್ತದೆ.  ಈ ವ್ಯತ್ಯಾಸದ ಅಡಕೆ ಎಂದೂ ಮಾರಾಟವಾಗುವುದೇ ಇಲ್ಲ.  ಇದು ಪ್ರತಿವರ್ಷ ಲೆಡ್ಚರ್‌ಗಳಲ್ಲಿ ಮುಂದುವರಿದುಕೊಂಡೇ ಬರುತ್ತದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟ ಉಂಟಾಗುತ್ತಿದೆ.  ಎಪಿಎಂಸಿಗೆ ಕೂಡ ದೊಡ್ಡ ಮೊತ್ತದ ತೆರಿಗೆ ನಷ್ಟವಾಗುತ್ತಿದೆ.

‘ಎ’ ಬಿಲ್‌ಗಳಲ್ಲಿ ಇವೆಲ್ಲವೂ ದಾಖಲಾಗಿಯೇ ಎಪಿಎಂಸಿ ಒಳಗೆ ಅಡಕೆ ಬಂದಿರುತ್ತದೆ.  ಬಳಿಕ ಇದು ಇಲ್ಲಿಂದ ಕಣ್ಮರೆಯಾಗುತ್ತದೆ ಎಂಬುದು ಅಡಕೆ ವರ್ತಕ ವಲಯದ ಮೂಲಗಳೇ ಹೇಳುತ್ತವೆ.  ಇದೆಲ್ಲ ಎಲ್ಲಿ ಹೋಗುತ್ತದೆ ಮತ್ತು ಹೇಗೆ ಹೋಗುತ್ತದೆ ಎಂಬುದನ್ನು ಎಪಿಎಂಸಿ ಅಧಿಕಾರಿಗಳು ಹೇಳಬೇಕು.

ಎಪಿಎಂಸಿ ದಾಖಲೆ ಏನು ಹೇಳುತ್ತದೆ?
ಸದ್ಯ ಎಪಿಎಂಸಿ ದಾಖಲೆಯ ಪ್ರಕಾರ ಇಲ್ಲಿನ ಮಾರುಕಟ್ಟೆಯಲ್ಲಿ ಸುಮಾರು 4  ಲಕ್ಷ ಚೀಲ ಅಡಕೆ ಇದೆ.  ಆದರೆ ಇತ್ತೀಚೆಗೆ ಕೆಲ ವರ್ತಕರು ತಮ್ಮ ಬಳಿಯಿರುವ ದಾಸ್ತಾನು ಪಟ್ಟಿಯನ್ನು ತೆಗೆದಿದ್ದಾರೆ.  ಇಲ್ಲಿನ ಎಪಿಎಂಸಿ ಆವರಣದಲ್ಲಿ ವ್ಯವಹಾರ ನಡೆಸುತ್ತಿರುವ ಸುಮಾರು 140 ಅಡಕೆ ಮಂಡಿಗಳಿವೆ.  ಇವುಗಳಲ್ಲಿ ಸುಮಾರು 85-90 ವರ್ತಕರು ನೀಡಿರುವ ದಾಸ್ತಾನು ಪಟ್ಟಿಯನ್ನು ನೋಡಿದರೆ ಸುಮಾರು 2 ರಿಂದ 2.20 ಲಕ್ಷದಷ್ಟು ಅಡಕೆ ಮೂಟೆಗಳ ವ್ಯತ್ಯಾಸ ಕಾಣುತ್ತಿದೆ.

ಧಾರಣೆ ಮೇಲೆ ನೇರ ಪರಿಣಾಮ: 
ಈ ರೀತಿ ಇಲ್ಲದ ದಾಸ್ತಾನನ್ನು ಇದೆ ಎಂದು ತೋರಿಸುವ ಮೂಲಕ ಬೇಡಿಕೆಯನ್ನು ತಗ್ಗಿಸುವ ಮತ್ತು ತನ್ಮೂಲಕ ಅಡಕೆ ಧಾರಣೆ ಕುಸಿಯುವಂತೆ ಮಾಡುವ ತಂತ್ರಗಾರಿಕೆ ಇಲ್ಲಿದೆ ಎಂಬುದು ಕೇಳಿ ಬರುತ್ತಿರುವ ಆರೋಪ. ಇಲ್ಲಿನ ದಾಸ್ತಾನಿನ ಸರಿಯಾದ ಲೆಕ್ಕ ಸಿಕ್ಕಿದರೆ ಖಂಡಿತವಾಗಿಯೂ ಅಡಕೆ ಧಾರಣೆ ಕನಿಷ್ಠ 5-7 ಸಾವಿರಷ್ಟು ಏರುತ್ತದೆ ಎಂಬ ಲೆಕ್ಕಾಚಾರವನ್ನು ಮುಂದಿಡಲಾಗುತ್ತಿದೆ. ಇಲ್ಲಿನ ಕೆಲವು ವರ್ತಕರು ಉತ್ತರ ಭಾರತದ ಕಡೆಯಿಂದ ದೊಡ್ಡ ಪ್ರಮಾಣದ ಅಡಕೆ ಪೂರೈಕೆ ಆದೇಶವನ್ನು ಪಡೆದಿದ್ದಾರೆ. ಈ ರೀತಿ ಧಾರಣೆ ಇಳಿಸುವುದರಿಂದ ಅವರಿಗೆ ಲಾಭ ವಾಗುತ್ತದೆ. ಹೀಗಾಗಿ ದಿನದಿಂದ ದಿನಕ್ಕೆ ಅಡಕೆ ಧಾರಣೆ ಇಳಿಸುವ ಪ್ರಯತ್ನ ನಡೆಯುತ್ತಿದೆ. ಧಾರಣೆ ಇಳಿಯಲು ಇಲ್ಲಿನ ದಾಸ್ತಾನು ಪ್ರಮಾಣವನ್ನು ಮುಂದಿಡಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸರಿಯಾದ ಲೆಕ್ಕವೆ ಗೊತ್ತಿಲ್ಲ:
ಈ ರೀತಿ ಇಲ್ಲದ ಲೆಕ್ಕವನ್ನು ಮುಂದಿಡುತ್ತಿರುವ ಕುರಿತು ಅನೇಕ ವರ್ತಕರಲ್ಲಿ ತೀವ್ರ ಅಸಮಾಧಾನವಿದೆ.  ಆದರೆ ಚಿಕ್ಕಪುಟ್ಟ ವರ್ತಕರು ಏನೂ ಮಾಡದ ಸ್ಥಿತಿಯಲ್ಲಿದ್ದಾರೆ. ಈ ಕುರಿತು ಎಪಿಎಂಸಿ ಸರಿಯಾದ ಲೆಕ್ಕ ತೆಗೆಸಿದರೆ ಸರ್ಕಾರಕ್ಕೆ ಸುಮಾರು ₹35 ಕೋಟಿ ತೆರಿಗೆ ಹರಿದುಬರುತ್ತದೆ ಎಂಬ ಲೆಕ್ಕಾಚಾರ ಇಲ್ಲಿದೆ.  ಇದರ ಜೊತೆಗೆ ಎಪಿಎಂಸಿಗೆ ಕೂಡ ತೆರಿಗೆ ಬರುತ್ತದೆ.

ಧಾರಣೆ ಕುಸಿಯೋ ಆಟ
ಶಿವಮೊಗ್ಗ ಅಡಕೆ ಮಾರುಕಟ್ಟೆಯ ಧಾರಣೆ ತಮಿಳುನಾಡು, ಅಸ್ಸಾಂ ಸೇರಿದಂತೆ ಅನೇಕ ಪ್ರದೇಶಗಳ ಅಡಕೆ ಮಾರುಕಟ್ಟೆಯ ಧಾರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.  ಇಲ್ಲಿನ ಧಾರಣೆ ಕ್ವಿಂಟಲ್‌ಗೆ ರಾಶಿಇಡಿ ₹35 ಸಾವಿರದಿಂದ ₹25 ಸಾವಿರಕ್ಕೆ ಕುಸಿದರೆ ಅತ್ತ ಅಸ್ಸಾಂ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ₹15- ₹20 ಸಾವಿರಕ್ಕೆ ಕುಸಿಯುತ್ತದೆ.  ಇಂತಹ ವೇಳೆಯನ್ನು ಬಳಸಿಕೊಂಡು ದೊಡ್ಡ ದೊಡ್ಡ ಅಡಕೆ ದಾಸ್ತಾನುಗಾರರು ಅಡಕೆ ಖರೀದಿಸುತ್ತಾರೆ.

ಎಪಿಎಂಸಿ ಅಧ್ಯಕ್ಷ ಜ್ಯೋತಿಪ್ರಕಾಶ್ ಸಭೆ
ಎಪಿಎಂಸಿ ಮಾರುಕಟ್ಟೆಯಲ್ಲಿ ಇಲ್ಲದ ಅಡಕೆಯನ್ನು ಇದ್ದಂತೆ ತೋರಿಸಲಾಗುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಮಂಗಳವಾರ ಸಂಜೆ ಎಪಿಎಂಸಿ ಅಧ್ಕ್ಷಯ ಜ್ಯೋತಿ ಪ್ರಕಾಶ್ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಅಡಕೆ ವರ್ತಕರ ಸಂಘದ ಪದಾಧಿಕಾರಿಗಳು, ರೈತ ಮೋರ್ಚಾದ ಸದಸ್ಯರು, ಸಹಕಾರಿ ಸಂಸ್ಥೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.  ಎಪಿಎಂಸಿ ಜಂಟಿ ನಿರ್ದೇಶಕರಾದ ಶ್ರೀನಿವಾಸ್ ಕೂಡ ಉಪಸ್ಥಿತರಿದ್ದರು.  ಅಡಕೆ ದಾಸ್ತಾನಿನ ಕುರಿತು ವಿಶೇಷ ಚರ್ಚೆ ನಡೆಯಿತು.  ಜೊತೆಗೆ ಅಡಕೆ ಧಾರಣೆ ಕುಸಿಯುತ್ತಿರುವ ಕುರಿತು ಕೂಡ ಚರ್ಚೆ ನಡೆಯಿತು.

ಈ ಕುಸಿತವನ್ನು ತಡೆಯಲು ಎಪಿಎಂಸಿ ಅಧಿಕಾರಿಗಳು ನಿಜವಾದ ದಾಸ್ತಾನನ್ನು ತೆಗೆಸಬೇಕು. ಈ ರೀತಿ ಮಾಡುತ್ತಿರುವರ ವಿರುದ್ಧ ಕ್ರಮ ಕೂಡ ಜರುಗಿಸಬೇಕು ಎಂದು ಒತ್ತಾಯಿಸಲಾಯಿತು. ಈ ಬಗ್ಗೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಜ್ಯೋತಿ ಪ್ರಕಾಶ್ ಮತ್ತು ಜಂಟಿ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ತನಿಖೆ ನಡೆಸಲು ನಾವು ಸಿದ್ಧರಿದ್ದೇವೆ. ಇಲ್ಲಿ ರೈತರಿಗೆ ಅನುಕೂಲವಾಗಬೇಕು.  ಅದೇ ರೀತಿ ವ್ಯಾಪಾರಿಗಳಿಗೂ ತೊಂದರೆಯಾಗಬಾರದು ಎಂಬುದು ತಮ್ಮ ಉದ್ದೇಶ ಎಂದರು.

15 ದಿನ ಅಡಕೆ ವಹಿವಾಟು ಸ್ಥಗಿತಕ್ಕೆ ಚಿಂತನೆ
ಅಡಕೆ ಧಾರಣೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವಾರ ಅಥವಾ 15 ದಿನಗಳ ಕಾಲ ಅಡಕೆ ವಹಿವಾಟು ನಿಲ್ಲಿಸಲು ಚಿಂತನೆ ನಡೆಸಲಾಗುತ್ತಿದೆ.  ಬಹುತೇಕ ಇನ್ನೆರಡು ದಿನಗಳಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಜ್ಯೋತಿಪ್ರಕಾಶ್ ಹೇಳಿದ್ದಾರೆ.  ಧಾರಣೆ ಕುಸಿಯುತ್ತಿರುವ ಸಂದರ್ಭದಲ್ಲಿ ಅಡಕೆ ವಹಿವಾಟು ನಿಲ್ಲಿಲೇಬೇಕಾಗುತ್ತದೆ.  ಇಲ್ಲದಿದ್ದರೆ ಮಾರುಕಟ್ಟೆಯ ಹೊರಗೆ ನಡೆಯುವ ಕೈ ವ್ಯವಹಾರದಲ್ಲಿ ಇದಭ ಧಾರಣೆ ಫಿಕ್ಸ್ ಆಗುತ್ತದೆ.  ಹೀಗಾಗಿ ಈ ಸಂಬಂಧ ವರ್ತಕರು, ಸಹಕಾರಿ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಹಿಂದೆ ಕೂಡ ಧಾರಣೆ ಕುಸಿದ ವೇಳೆ ಅಡಕೆ ವಹಿವಾಟನ್ನು ನಿಲ್ಲಿಸಲಾಗಿತ್ತು.

loader