ಬೆಂಗಳೂರು(ಫೆ.23):  ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡುವುದು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಹೋರಾಟ ನಡೆಸುವವರನ್ನು ಜೈಲಿಗೆ ಹಾಕುವ ಮೂಲಕ ಪ್ರಸ್ತುತ ದೇಶದಲ್ಲಿ ‘ಒಂದು ಕಡೆ ಭಾರತ ಸೇಲ್‌, ಮತ್ತೊಂದೆಡೆ ಭಾರತ ಜೈಲ್‌’ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾಹಿತಿ ದೇವನೂರು ಮಹಾದೇವ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೊಡ್‌ವಾಡ್‌ ಭವನದಲ್ಲಿ ಕೆನರಾ ಬ್ಯಾಂಕ್‌ ಸ್ಟಾಫ್‌ ಫೆಡರೇಷನ್‌ (ಸಿಬಿಎಸ್‌ಎಫ್‌) ಆಯೋಜಿಸಿದ್ದ ರಾಷ್ಟ್ರಮಟ್ಟದ 5ನೇ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರ ತಾನು ಉಳಿದುಕೊಳ್ಳಲು ಸಾರ್ವಜನಿಕ ಕ್ಷೇತ್ರದ ಕಂಪನಿಗಳು ಹಾಗೂ ನೈಸರ್ಗಿಕ ಸಂಪತ್ತನ್ನು ಬಿಕರಿ ಮಾಡುತ್ತಿದೆ ಎಂದು ಆರೋಪಿಸಿದರು.

ನೋಟು ಅಮಾನ್ಯಗೊಳಿಸಿದ್ದರಿಂದ ಭಾರತದ ಆರ್ಥಿಕತೆ ಹದಗೆಟ್ಟಿತು. ಜಿಎಸ್‌ಟಿ ಜಾರಿಯಿಂದ ಆರ್ಥಿಕತೆ ಮತ್ತಷ್ಟು ಪಾತಾಳಕ್ಕೆ ಕುಸಿಯಿತು. ಇದೀಗ ದಿನದಿಂದ ದಿನಕ್ಕೆ ಆರ್ಥಿಕತೆ ಕುಸಿಯುತ್ತಲೇ ಇದೆ. ಉದ್ಯೋಗಗಳು ಉದುರಿಹೋಗುತ್ತಿವೆ. ಬೆಲೆಗಳು ಗಗನ ಮುಟ್ಟುತ್ತಿವೆ. ಇದನ್ನು ಪ್ರಶ್ನಿಸುವ ಶಕ್ತಿ ಇಲ್ಲದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಪ್ರಸ್ತುತ ದೇಶ ಸೂತ್ರ ಸರಿಯಿಲ್ಲದ ಪಟದಂತೆ ಹಾರಾಡುತ್ತಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ (ಬಿಪಿಸಿಎಲ್‌) ಕಳೆದ ಐದು ವರ್ಷಗಳಲ್ಲಿ .5 ಸಾವಿರ ಕೋಟಿಗೂ ಹೆಚ್ಚಿನ ಲಾಭ ಗಳಿಸಿದೆ. ಡೆಪಾಸಿಟ್‌, ಡಿವಿಡೆಂಡ್‌ ಸೇರಿದಂತೆ ವಿವಿಧ ರೂಪದಲ್ಲಿ 30 ಸಾವಿರ ಕೋಟಿಗಳನ್ನು ಸರ್ಕಾರಕ್ಕೆ ಸಂದಾಯ ಮಾಡಿದೆ. ಇಂತಹ ಸಂಸ್ಥೆಯನ್ನು ಕೇವಲ 60 ಸಾವಿರ ಕೋಟಿಗೆ ಖಾಸಗೀಕರಣ ಮಾಡುತ್ತಿದೆ. ಇದೇ ಪರಿಸ್ಥಿತಿಯನ್ನು ಎಲ್‌ಐಸಿ, ಬಿಎಸ್‌ಎನ್‌ಎಲ್‌, ಬಿಎಚ್‌ಇಎಲ್‌ ಸೇರಿದಂತೆ ಅನೇಕ ಸಾರ್ವಜನಿಕ ಸಂಸ್ಥೆಗಳಿಗೆ ತರುತ್ತಿದೆ ಎಂದರು.

ಇಂತಹ ಪರಿಸ್ಥಿತಿಯನ್ನು ದೇಶದ ಜನರಿಗೆ ಕಾಣದಂತೆ ಮಾಡಲು ಏನು ಮಾಡಬೇಕೆಂಬುದು ಸರ್ಕಾರಕ್ಕೆ ದೊಡ್ಡ ಚಿಂತೆಯಾಗಿದೆ. ಬಹುಶಃ ಇದಕ್ಕಾಗಿಯೇ ಎನ್‌ಆರ್‌ಸಿ, ಎನ್‌ಪಿಆರ್‌ ಹಾಗೂ ಸಿಎಎ ಜಾರಿಗೆ ಮುಂದಾಗಿದೆ. ಭಾರತದ ಪೌರರಾಗಿದ್ದರೆ ಮಾತ್ರ ಇಂತಹ ಕಾನೂನುಗಳನ್ನು ಪ್ರಶ್ನಿಸಲು ಸಾಧ್ಯವೆಂದು ತಿಳಿದಿರುವ ಸರ್ಕಾರ, ಪೌರರಾಗುವುದಕ್ಕೇ ವರ್ಷಾನುಗಟ್ಟಲೆ ಸಂಕಷ್ಟದಲ್ಲಿ ಮುಳುಗಿರಬೇಕಾದ ಸ್ಥಿತಿಯನ್ನು ತನ್ನನ್ನು ಆಯ್ಕೆ ಮಾಡಿದ ಪ್ರಜೆಗಳಿಗೆ ಉಣಬಡಿಸುತ್ತಿದೆ. ಇದರ ಪರಿಣಾಮವೇ ದೇಶ ಒಂದು ಕಡೆ ಸೇಲ್‌, ಮತ್ತೊಂದೆಡೆ ಜೈಲ್‌ ಸ್ಥಿತಿಯಾಗಿದೆ ಎಂದು ಹೇಳಿದರು.

ಭಾರತವನ್ನು ಸೇಲ್‌ ಆಗುವಂತೆ ಮಾಡುತ್ತಿರುವ ಗುಲಾಮಗಿರಿ ಆರ್‌ಬಿಐ ಕಾಯ್ದೆ 45(ಇ) ರದ್ದತಿಗೆ ಹಾಗೂ ಖಾಸಗಿ ಕಡಿವಾಣಕ್ಕೆ ಕಾರ್ಮಿಕ ಸಂಘಟನೆಗಳು ಹೋರಾಟ ಮಾಡಬೇಕಿದೆ. ಇನ್ನು ಸಂವಿಧಾನದ ಪ್ರಸ್ತಾವನೆಗಳ ಆಶಯಕ್ಕೆ ಕಳಂಕ ತಂದಿರುವ ಪೌರತ್ವ ತಿದ್ದುಪಡಿ ಮೂಲಕ ಜೈಲಿಗೆ ಹಾಕುತ್ತಿರುವ ಕಾಯ್ದೆಯನ್ನು ಹಿಂಪಡೆಯುವಂತೆ ಇಡೀ ದೇಶದ ಜನರು ಕೂಗಿ ಹೇಳಬೇಕಿದೆ ಎಂದು ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಮಾತನಾಡಿ, ಪ್ರಸ್ತುತ ದೇಶದಲ್ಲಿ ಕೇವಲ ಬ್ಯಾಂಕ್‌ ಉದ್ಯಮ ಮಾತ್ರ ಸಂಕಷ್ಟಕ್ಕೆ ಸಿಲುಕಿಲ್ಲ. ಸಂವಿಧಾನ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರವೂ ಒಳಗೊಂಡಿದೆ. ರಾಜ್ಯಗಳ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಮೊಟಕುಗೊಳಿಸುವ ಕೆಲಸವನ್ನು ಕೈಬಿಡಬೇಕು. ನೋಟುಗಳನ್ನು ಅಮಾನ್ಯಗೊಳಿಸುವುದರಿಂದ ದೇಶದಲ್ಲಿ ಕಪ್ಪುಹಣ ತಡೆಗಟ್ಟಲು ಸಾಧ್ಯವಿಲ್ಲವೆಂದು ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿದ್ದರು. ಆದರೂ ಜಾರಿಗೆ ತರುವ ಮೂಲಕ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದರು ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಪಂಜಾಬ್‌ ಸಂಸದ ಭಗವಂತ್‌ ಮಾನ್‌, ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌. ಹಿರೇಮಠ, ಸಿಬಿಎಸ್‌ಎಫ್‌ ಅಧ್ಯಕ್ಷ ಜೆ.ಎಸ್‌.ವಿಶ್ವನಾಥ್‌ ಉಪಸ್ಥಿತರಿದ್ದರು.