Asianet Suvarna News Asianet Suvarna News

'ದ್ವಿರಾಷ್ಟ್ರ ಪರಿಕಲ್ಪನೆ ಹುಟ್ಟುಹಾಕಿ ದೇಶ ವಿಭಜನೆಗೆ ನಾಂದಿ ಹಾಡಿದ್ದೇ ಹಿಂದೂ ಮಹಾಸಭಾ'

ತಿಳಿವಳಿಕೆ ಇಲ್ಲದ, ಅರೆ ಜ್ಞಾನಿ ಶಾಸಕರು ಹಾಗೂ ಸಂಸದರು ಇಲ್ಲ ಸಲ್ಲದ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ| ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ | ದೊರೆಸ್ವಾಮಿ ಕುರಿತು ಯತ್ನಾಳ ಹೇಳಿಕೆ ಖಂಡನೆ| ಧರ್ಮ, ಕೋಮು ಹೆಸರಲ್ಲಿ ವಿಭಜನೆಗೆ ಹುನ್ನಾರ| 

Writer Basavaraj Sulibhavi Talks Over Hindu Mahasabha
Author
Bengaluru, First Published Mar 6, 2020, 11:48 AM IST

ಗದಗ(ಮಾ.06): ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂದು ಮಹಾಸಭಾ, ಜನಸಂಘ ಹಾಗೂ ಆರ್‌ಎಸ್‌ಎಸ್ ಪಾತ್ರವೇನು? ಸ್ವಾತಂತ್ರ್ಯ ನಂತರ ದ್ವಿರಾಷ್ಟ್ರ ಪರಿಕಲ್ಪನೆಯನ್ನು ಹುಟ್ಟುಹಾಕಿ ದೇಶ ವಿಭಜನೆಗೆ ನಾಂದಿ ಹಾಡಿದ್ದೇ ಹಿಂದೂ ಮಹಾಸಭಾ ಚರಿತ್ರೆಯಾಗಿದೆ ಎಂದು ಪ್ರಗತಿಪರ ಚಿಂತಕ, ಸಾಹಿತಿ ಬಸವರಾಜ ಸೂಳಿಭಾವಿ ಆರೋಪಿಸಿದ್ದಾರೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ರಾಷ್ಟ್ರ ಭಕ್ತಿ ಕುರಿತು ಮಾತನಾಡುವವರು ಇತ್ತೀಚಿನ ದಿನಗಳಲ್ಲಿ ಧರ್ಮ ಕೋಮು ಹೆಸರಿನಲ್ಲಿ ವಿಭಜನೆಗೆ ಹುನ್ನಾರ ನಡೆಸುತ್ತಿರುವ ಕುರಿತು ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕಿದೆ. ಕಳೆದ ಐದಾರು ವರ್ಷಗಳಿಂದ ದೇಶದಲ್ಲಿ ಸಂವಿಧಾನ ಮತ್ತು ಸ್ವಾತಂತ್ರ್ಯ ಚಳವಳಿಯ ಕುರಿತು ತಿಳಿವಳಿಕೆ ಇಲ್ಲದ, ಅರೆ ಜ್ಞಾನಿ ಶಾಸಕರು ಹಾಗೂ ಸಂಸದರು ಇಲ್ಲ ಸಲ್ಲದ ಬೇಕಾಬಿಟ್ಟಿ ಹೇಳಿಕೆ ನೀಡುವ ಮೂಲಕ ಸ್ವಾತಂತ್ರ್ಯ ಚಳವಳಿಗಾರರನ್ನು ಅವಮಾನಿಸುತ್ತಿರುವುದು ಬಿಜೆಪಿ ಅಧಿಕಾರವಧಿಯಲ್ಲಿ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ವಾತಂತ್ರ್ಯ ನಂತರ ಹುಟ್ಟಿಕೊಂಡ ಬಿಜೆಪಿ ಪಕ್ಷಕ್ಕೆ ಸ್ವಾತಂತ್ರ್ಯದ ಅರಿವು ಹೇಗೆ ಬರಲು ಸಾಧ್ಯ, ಇತ್ತೀಚಿಗೆ ನಾಡಿನ ಸಾಕ್ಷಿ ಪ್ರಜ್ಞೆಯಾದ ಹಿರಿಯ ಜೀವಿ ಎಚ್.ಎಸ್. ದೊರೆಸ್ವಾಮಿ ಅವರ ಕುರಿತು ವಿಜಯಪುರ ಶಾಸಕ ಯತ್ನಾಳ ನೀಡಿದ ಹೇಳಿಕೆ, ಪ್ರತಿಯೊಬ್ಬರ ಖಂಡಿಸಬೇಕಾಗಿದೆ. ದೇಶದ ಚರಿತ್ರೆ ಚಳವಳಿ, ಪರಂಪರೆ ಅರಿವಿಲ್ಲದ ಹಾಗೂ 23 ಕ್ಕೂ ಅಧಿಕ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಯತ್ನಾಳ ಅವರ ಹೇಳಿಕೆಯನ್ನು ಬಿಜೆಪಿಯಲ್ಲಿನ ಹಲವಾರು ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಯತ್ನಾಳ ಗುಂಡು ಹಾರಿಸುವ ಕುರಿತು ಮಾತನಾಡುತ್ತಾರೆ, ಇವರ ಈ ಹೇಳಿಕೆ ಬಹಿರಂಗವಾಗಿ ಕೊಲೆಗೆ ವ್ಯವಸ್ಥಿತವಾಗಿ ಪ್ರಚೋದನೆ ನೀಡುತ್ತದೆ. ಸಂವಿಧಾನ ಪ್ರಕಾರ ಶಾಸಕನಾಗಿ ಆಯ್ಕೆಯಾಗಿರುವ ಇವರ ಹೇಳಿಕೆ ಖಂಡನಾರ್ಹವಾಗಿದೆ ಎಂದು ಹೇಳಿದ್ದಾರೆ. 

ತಕ್ಷಣವೇ ಹೈಕೋರ್ಟ ಸುಮೋಟೋ ಪ್ರಕರಣ ದಾಖಲಿಸಿ ಯತ್ನಾಳ್ ಅವರ ಮೇಲೆ ಕ್ರಮ ಜರುಗಿಸಬೇಕಿದೆ. ನ್ಯಾಯಾಂಗ ಇದನ್ನು ಗಂಭೀರವಾಗಿ ಪರಿಗಣಿಸಿದಾಗ ಮಾತ್ರ ಈ ರೀತಿಯ ಹುಚ್ಚು ಘೋಷಣೆಗಳು ಕಡಿಮೆಯಾಗಲಿವೆ. ನಮ್ಮ ಸಂಘಟನೆಯ ಮೂಲಕ ನಾವು ಯತ್ನಾಳ ಅವರಿಗೆ ಬಹಿರಂಗವಾಗಿ ಸವಾಲು ಹಾಕುತ್ತೇವೆ, ತಾಕತ್ತಿದ್ದರೆ ವಿಧಾನಸಭೆಯಲ್ಲಿ ಈ ಕುರಿತು ಖಾಸಗಿ ಮಸೂದೆ ಮಂಡಿಸಲಿ ಎಂದರು. 
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಪೂಜಾರ, ಶರೀಷ್ ಬಿಳೆಯಲಿ, ಮುತ್ತು ಬಿಳಿಯಲಿ ಹಾಜರಿದ್ದರು.
 

Follow Us:
Download App:
  • android
  • ios