Asianet Suvarna News Asianet Suvarna News

ಬಾಗಲಕೋಟೆ: ಕುಸ್ತಿ ಕಿಂಗ್‌ ದಾವಲ್‌ಸಾಬಗೆ ಬೇಕಿದ ಸರ್ಕಾರ ನೆರವು..!

ನೆರೆಯ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಕುಸ್ತಿ ಪಂದ್ಯಾವಳಿಯಲ್ಲಿ ದಾವಲ್‌ಸಾಬ್ ಕುಸ್ತಿ ಎಂದರೆ ಜನಸ್ತೋಮವೇ ಕೂಡುತ್ತಿತ್ತು. ಇವರು ಬೆಂಗಳೂರು, ಮೈಸೂರು, ಮುಂಬೈ, ಪುಣೆಗಳಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸೆಣಸಿ ಕುಸ್ತಿ ಪ್ರೇಮಿಗಳ ಮನಸೆಳೆದ ಮಲ್ಲ. ಧರ್ಮೇಂದ್ರ, ಜೀತೇಂದ್ರ, ಅಮ್ಜದ್‌ಖಾನ್, ಅಮಿತಾಭ ಬಚ್ಚನ್‌ ರಂಥ ಬಾಲಿವುಡ್ ಖ್ಯಾತ ನಟರೂ ಸಹ ಕುಸ್ತಿ ಕಣದಲ್ಲಿ ದಾವಲ್‌ ಸಾಬ್‌ ನ ಢಾವ್‌ಗಳಿಗೆ ಮಾರುಹೋಗಿದ್ದಾರೆ.

Wrestling king Davalsaab Needs Government Assistance at Rabakavi Banahatti in Bagalkot grg
Author
First Published Feb 1, 2024, 9:14 PM IST

ಶಿವಾನಂದ.ಪಿ.ಮಹಾಬಲಶಟ್ಟಿ

ರಬಕವಿ-ಬನಹಟ್ಟಿ(ಫೆ.01): ಕುಸ್ತಿ ಆರಂಭಕ್ಕೆ ಕಹಳೆ ಊದುವುದಷ್ಟೇ ತಡ ಎದುರಾಳಿಯನ್ನು ಕ್ಷಣಾರ್ಧದಲ್ಲಿ ಮಣ್ಣು ಮುಕ್ಕಿಸಿ ಕುಸ್ತಿ ಕಣ್ತುಂಬಿಕೊಳ್ಳಲು ಸೇರಿದ ಅಭಿಮಾನಿಗಳು ಕಣ್ಣು ಪಿಳುಕಿಸುವುದರೊಳಗೆ ಎದುರಾಳಿ ಚಿತ್‌ ಆಗಿರುತ್ತಿದ್ದ. ಕುಸ್ತಿಪಟು ದಾವಲ್‌ಸಾಬ್‌ ಅಥಣಿ ಕುಸ್ತಿ ಪಂದ್ಯಾವಳಿಯಲ್ಲಿ ಎದುರಾಳಿಯನ್ನು ಮಣಿಸುವ ಪರಿಯೇ ರೋಚಕ. ಇಂತಹ ಪೈಲ್ವಾನ್‌ನನಿಗೆ ಇದೀಗ ಸರ್ಕಾರದ ನೆರವು ಅವಶ್ಯಕವಾಗಿದೆ.

ಹೌದು, ನೆರೆಯ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಕುಸ್ತಿ ಪಂದ್ಯಾವಳಿಯಲ್ಲಿ ದಾವಲ್‌ಸಾಬ್ ಕುಸ್ತಿ ಎಂದರೆ ಜನಸ್ತೋಮವೇ ಕೂಡುತ್ತಿತ್ತು. ಇವರು ಬೆಂಗಳೂರು, ಮೈಸೂರು, ಮುಂಬೈ, ಪುಣೆಗಳಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸೆಣಸಿ ಕುಸ್ತಿ ಪ್ರೇಮಿಗಳ ಮನಸೆಳೆದ ಮಲ್ಲ. ಧರ್ಮೇಂದ್ರ, ಜೀತೇಂದ್ರ, ಅಮ್ಜದ್‌ಖಾನ್, ಅಮಿತಾಭ ಬಚ್ಚನ್‌ ರಂಥ ಬಾಲಿವುಡ್ ಖ್ಯಾತ ನಟರೂ ಸಹ ಕುಸ್ತಿ ಕಣದಲ್ಲಿ ದಾವಲ್‌ ಸಾಬ್‌ ನ ಢಾವ್‌ಗಳಿಗೆ ಮಾರುಹೋಗಿದ್ದಾರೆ.
೧೯೬೨ರ ರಬಕವಿಯಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯದಲ್ಲಿ ಮಹಾರಾಷ್ಟ್ರದ ಸಾಂಗಲಿ ಕ್ಷೇತ್ರದ ಮಾಜಿ ಶಾಸಕ ಸಂಭಾಜಿ ಪವಾರ ಪೈಲ್ವಾನರ ನಡುವೆ ಮಲ್ಲಯುದ್ಧ ನಡೆದಾಗ ಧಾಂಡಿಗ ಸಂಭಾಜಿ ಜೊತೆ ಪೇಲವ ದಾವಲ್‌ರನ್ನು ಕಂಡಾಗ ಪ್ರೇಕ್ಷಕರು ಹುಲಿಯ ಬಾಯಿಗೆ ಜಿಂಕೆ ಹಾಕಿದಾಂಗ ಆತ ನೋಡ್ರಪಾ.. ಎಂದು ಮರುಗಿದ್ದರು. ಆಗ ಚಿಗುರು ಗಡ್ಡದ ದಾವಲ್‌ಸಾಬ ಕುಸ್ತಿಯ ಮೈದಾನದಲ್ಲಿ ಖಡಲ್ ಖಡಲ್ ಎಂದು ತೊಡೆ ತಟ್ಟುತ್ತಾ ಅಂತಾರಾಷ್ಟ್ರೀಯ ಪೈಲ್ವಾನ್ ಎದುರು ಸರಿಸಮನಾಗಿ ಸೆಣಸಿದಾಗ ಎಲ್ಲರಿಗೂ ಅಚ್ಚರಿ. ಅಂದಿನಿಂದ ಹುಲಿಗೆ ಸಮನಾದ ಸಿಂಹ ನೀನೇ ಎಂದು `ಆಸಂಗಿಯ ಸಿಂಹ’ ಎಂಬ ಬಿರುದನ್ನು ಕುಸ್ತಿ ಪ್ರೇಮಿಗಳು ನೀಡಿದರು.

ಜಗದೀಶ ಶೆಟ್ಟರ್‌ಗೆ ಯಾವುದೋ ಭಯ ಇರಬೇಕು: ಸಚಿವ ತಿಮ್ಮಾಪುರ

ಈ ಕುಸ್ತಿ ಪಟು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ 1950ರಲ್ಲಿ ಜನಿಸಿದರು. ತಂದೆ ಲಾಲ್‌ಸಾಬ್‌ . ಆರನೇ ತರಗತಿವರೆಗೆ ಕಲಿತು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದರು. ನಂತರ ಗರಡಿ ಮನೆಯೇ ಶಾಲೆಯಾಗಿ ಪರಿವರ್ತನೆಯಾಯಿತು. ಆಸಂಗಿ, ಬನಹಟ್ಟಿ, ಕೊಲ್ಲಾಪುರಗಳಲ್ಲಿ ಸಾತರಕರ ಉಸ್ತಾದ್‌ ಗುರುಗಳಿಂದ ತಾಲೀಮು ಪಡೆದರು. ೧ನೇ ವಯಸ್ಸಿನಲ್ಲಿ ಲಾಂಗು, ಹನುಮಾನ ಚಡ್ಡಿ ಧರಿಸಿ ಊರಿನ ಸುತ್ತಮುತ್ತ ಜಾತ್ರೆ ಸಂದರ್ಭದಲ್ಲಿ ನಡೆಯುತ್ತಿದ್ದ ಕುಸ್ತಿಗಳಲ್ಲಿ ಪಾಲ್ಗೊಂಡು ಸಾಕಷ್ಟು ಪಳಗಿದ್ದ ದಾವಲ್‌ಸಾಬ ೧೯೬೦ರಲ್ಲಿ ಮೊದಲ ಬಾರಿಗೆ ಕುಲಹಳ್ಳಿಯಲ್ಲಿ ಬಯಲು ಕುಸ್ತಿ ಅಖಾಡಕ್ಕೆ ಧುಮುಕಿದರು. ೧೯೬೫ರಲ್ಲಿ ಹೆಸರಾಂತ ಜಟ್ಟಿ ಅಜ್ಜಪ್ಪ ಪೈಲ್ವಾನ್ ಹಂಚನಾಳನನ್ನು ಚಿತ್‌ ಮಾಡಿದ್ದು ಭಾರೀ ಜನಪ್ರೀಯತೆ ತಂದುಕೊಟ್ಟಿತು. ನೇಕಾರರು, ಕಾರ್ಮಿಕರು, ರೈತರು ರಬಕವಿ-ಬನಹಟ್ಟಿ, ನಾವಲಗಿ, ಜಗದಾಳ, ಆಸಂಗಿ, ಮಹಿಷವಾಡಗಿ, ಮಹಾಲಿಂಗಪುರ, ತೇರದಾಳ ಸುತ್ತಲಿನ ಕುಸ್ತಿ ಪ್ರೇಮಿಗಳು ಮೈದಾನದಲ್ಲಿ ಹಾಜರಾಗುತ್ತಿದ್ದರು.

ಮಹಾರಾಷ್ಟ್ರದ ಇಂಚಲಕರಂಜಿಯ ಪಾರೀಸ್‌ ಪೈ. ಲೋಕೂರ ಕುಸ್ತಿಗೆ ಮತ್ತೊಂದು ಹೆಸರು ಎಂಬಂತಿದ್ದರು. ಈ ಬಲಿಷ್ಠ ಪೈಲ್ವಾನನಿಗೆ ಸರಿಸಮನಾಗಿ ಆಡಿದ್ದು ಜೀವನದ ಮರೆಯಲಾರದ ಪಂದ್ಯವೆಂದು ಈಗಲೂ ದಾವಲ್‌ಸಾಬ ನೆನಪಿಸಿಕೊಳ್ಳುತ್ತಾರೆ. ೬೦ ವರ್ಷಗಳ ತಾಲೀಮಿನಲ್ಲಿ ಪ್ರತಿ ದಿನ ಎರಡು ಡಜನ್ ಬಾಳೆಹಣ್ಣು, 2-3 ಲೀಟರ್‌ ಹಾಲು, ತುಪ್ಪ, ಬದಾಮಿ, ಮೊಟ್ಟೆ, ಮಾಂಸ ತಿನ್ನುತ್ತಿದ್ದಾಗಿ ಹೇಳುತ್ತಾರೆ ದಾವಲ್.

ಗಣಪತಿ ತ್ರಿಪಣಕರ, ವಿಷ್ಣು ಮಾನೆ, ಹುಕುಂ ಎಕ್ಕಾ, ಅಜ್ಜಪ್ಪ ಹಂಚಿನಾಳ, ಚಂಬಾ ಮುತ್ನಾಳ, ತವನಪ್ಪ ಅಳವಾಡ, ಶಿವಾ ಚೌಗಲೆ, ಪಾರೀಸ್‌ ಲೋಕೂರ, ದಾದೂ ಚೌಗಲೆ(ಹಿಂದ್ ಕೇಸರಿ), ಲಕ್ಷ್ಮಣ ವಡ್ಡರ(ಮಹಾರಾಷ್ಟ್ರ ಕೇಸರಿ), ಅಗ್ನಿವಲ್ ನಿಗ್ರೋ, ಪರಸಪ್ಪ ಗಂಟಿಚವಡಿ, ತಾನಾಜಿ ಪವಾರ್‌, ಅರ್ಜುನ ಹಂತವಾಡ, ತುಕಾರಮ ಸಿಂಧೆ, ದಾದಾ ಮಾನೆ, ಭಗತಸಿಂಗ್ ಹರಿಯಾಣರಂಥ ಅತಿರಥ ಮಹಾರಥರೊಡನೆ ಸೆಣಸಿದ ಕೀರ್ತಿ ದಾವಲ್‌ಸಾಬರದ್ದು.
ದಾವಲ್‌ಸಾಬ ಈಗಲೂ ಕುಸ್ತಿ ಕ್ರೀಡೆಗಳಲ್ಲಿ ಅದೇ ಉತ್ಸಾಹ ಉಳಿಸಿಕೊಂಡಿದ್ದಾರೆ. ಸುತ್ತಲಿನ ಗ್ರಾಮಗಳಲ್ಲಿ ನಡೆಯುವ ಕುಸ್ತಿ ಅಖಾಡಗಳಲ್ಲಿ ತಪ್ಪದೆ ಹಾಜರಾಗಿ ಉಸ್ತಾದ್‌ರಾಗಿ ಕೆಲಸ ನಿರ್ವಹಿಸುತ್ತಾರೆ. ಕುಸ್ತಿ ಆಸಕ್ತರು ೯೮೪೪೧-೧೧೦೮೬ ನಂಬರ್‌ಗೆ ಸಂಪರ್ಕಿಸಬಹುದು.

ಮುಧೋಳ ಕ್ಷೇತ್ರದ ಜನತೆಯ ಋುಣ ಮರೆಯಲಾರೆ: ಮಾಜಿ ಡಿಸಿಎಂ ಗೋವಿಂದ ಕಾರಜೋಳ

ಸರ್ಕಾರದ ಸೌಲಭ್ಯಗಳು ಮರೀಚಿಕೆ

ಅಂದಿನ ಜನಪ್ರಿಯ ಮುಖ್ಯಮಂತ್ರಿ ದಿ. ದೇವರಾಜ ಅರಸು ಇವರ ಆಟದ ವೈಖರಿ ಕಂಡು ಬೆಂಗಳೂರಿನಲ್ಲಿ ನಿವೇಶನ ಕೊಡುವುದಾಗಿ ಹೇಳಿದಾಗ ನಾನು ಉತ್ತರ ಕರ್ನಾಟಕದ ಹಳ್ಳಿಯವ ಬೆಂಗಳೂರಾಗ ನನಗ್ಯಾಕ್ರಿ ಮನಿ ಎಂದು ನಿರಾಕರಿಸಿದ್ದ ದಾವಲ್ ಈಗ ಸರ್ಕಾರ ಕೊಡುವ ಮಾಸಾಶನಕ್ಕೆ ದೈನೇಸಿಯಂತೆ ಕೈಚಾಚಿ ನಿಲ್ಲಬೇಕಾಗಿದೆ. ದಾವಲ್‌ಸಾಬಗೆ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆ ಮಾನವೀಯತೆ ನೆರವು ನೀಡಲು ಮುಂದಾಗಬೇಕೆಂಬುದು ಕುಸ್ತಿ ಆಸಕ್ತರ ಆಗ್ರಹವಾಗಿದೆ.

ಸಾಹೇಬ್ರ ನಂಗ್ ಈಗ ೮೦ ವರ್ಷ ವಯಸ್ಸಾಗ್ಯಾವ್ರೀ... ಈಗ್ಲೂ ಹೂಂ ಅಂದ್ರ ನಲವತ್ತರ ಪೈಲ್ವಾನ ಜೋಡಿ ಕುಸ್ತಿ ಆಡಾಕ್ ತಯಾರದನ್ರೀ...’ ಕುಸ್ತಿ ನನ್ನ ಪ್ರಾಣ ಇದ್ದಂಗ್ರಿ,, ನಮ್ಮ ಗ್ರಾಮೀಣ ಕ್ರೀಡೆ ಜನಪ್ರೀಯವಾಗಬೇಕ್ರಿ.. ಆದ್ರ ಈಗಿನ ಹುಡಗರು ಕುಸ್ತಿಯಂಥ ಆಟಗಳಿಂದ ದೂರಾಗಿ ಕುಡಿತ, ಕುಟ್ಕಾದಂಥ ಚಟಗಳಿಂದ ಹಾಳಾಗುತ್ತಿರೋದನ್ನ ನೋಡಿದ್ರ ಮನಸ್ಸಿಗ ಭಾಳ ಬೇಜಾಗತೈತ್ರಿ ಎಂದು ಖ್ಯಾತ ಕುಸ್ತಿಪಟು ದಾವಲ್‌ ಸಾಬ ಅಥಣಿ ತಿಳಿಸಿದ್ದಾರೆ. 

Follow Us:
Download App:
  • android
  • ios