ಹುಬ್ಳೀಲಿ ಝಗಮಗಿಸಿದ ಜಗಜಟ್ಟಿಗಳ ಕಾದಾಟ: ಕುಸ್ತಿಪಟುಗಳ ಆರ್ಭಟ..!
* ದಾರವತಿ ಆಂಜನೇಯ ದೇವಸ್ಥಾನದಲ್ಲಿ ಉತ್ಸವ
* ಅವತಾರ ಪುರುಷ ಆಂಜನೇಯನ ಅದ್ಧೂರಿ ಜಾತ್ರೆ
* ಚಪ್ಪಾಳೆ ಹೊಡೆದು ಸಂಭ್ರಮಪಟ್ಟ ಜನತೆ
ಹುಬ್ಬಳ್ಳಿ(ಮೇ.18): ಅದು ಅವತಾರ ಪುರುಷ ಆಂಜನೇಯನ ಅದ್ಧೂರಿ ಜಾತ್ರೆ. ಆ ಜಾತ್ರೆ ತನ್ನದೇ ಆದಂತಹ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಜಾತ್ರೆಗೆ ಜಗಜಟ್ಟಿಗಳೆಲ್ಲ ಆಗಮಿಸಿ ತಮ್ಮ ಭುಜಬಲ ಪರಾಕ್ರಮ ಪ್ರದರ್ಶನ ನೀಡುತ್ತಾರೆ. ಈ ಜಾತ್ರೆ ಸಾಂಸ್ಕೃತಿಕ ಹಾಗೂ ಜಾನಪದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಲೆ ಜನಾಕರ್ಷಣೆ ಕೇಂದ್ರವಾಯುತ್ತಿದೆ.
ಹುಬ್ಬಳ್ಳಿಯ ಹೊರವಲಯದಲ್ಲಿರುವ ಗೋಕುಲ ಗ್ರಾಮದ ದಾರವತಿ ಆಂಜನೇಯನ ಜಾತ್ರೆಯ ಅಂಗವಾಗಿ ನಡೆದ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಪೈಲ್ವಾನರ ಜಿದ್ದಾಜಿದ್ದಿಗೆ ಪ್ರೇಕ್ಷಕರು ಮನಸೋತರು. ಜಾತ್ರೆ ನಡೆಯುವಾಗ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಇಂತಹ ಸ್ಪರ್ಧೆಗಳು ನಡೆದಿರಲಿಲ್ಲ. ಆದ್ದರಿಂದ ಈ ಬಾರಿ ನಡೆದ ಜಿದ್ದಾಜಿದ್ದಿಗೆ ಸಾವಿರಾರು ಕುಸ್ತಿ ಪ್ರೇಮಿಗಳು ಸಾಕ್ಷಿಯಾದರು. ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯ ಹಾಗೂ ನೆರೆರಾಜ್ಯಗಳ ಕುಸ್ತಿಪಟುಗಳು ಹಾಕಿದ ಪಟ್ಟುಗಳು ಗಮನ ಸೆಳೆದವು. ಎಂಟು ವರ್ಷದ ಬಾಲಕರಿಂದ ಹಿಡಿದು ಪುರುಷರ ತನಕ ವಿವಿಧ ವಯೋಮಾನದ ಪೈಲ್ವಾನರಿಗೆ ಸ್ಪರ್ಧೆಗಳು ನಡೆದವು. ಮೊದಲ ನಾಲ್ಕು ಸಂಖ್ಯೆಗಳ ಕುಸ್ತಿಯ ವೇಳೆ ಸ್ಪರ್ಧಿ ಹಾಗೂ ಪ್ರತಿಸ್ಪರ್ಧಿ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದಾಗ ಜನ ಚಪ್ಪಾಳೆ ಹೊಡೆದು ಸಂಭ್ರಮಿಸಿದರು.
NWKRTC: ವಾಯವ್ಯ ಸಾರಿಗೆ ಒಂದೇ ದಿನ 6 ಕೋಟಿ ಆದಾಯ
ಇನ್ನೂ ಗೋಕುಲ ಗ್ರಾಮದ ಹಿರಿಯ ಪೈಲ್ವಾನರು ಹಾಗೂ ಕುಸ್ತಿ ಪ್ರೇಮಿಗಳು ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿ ಪಂದ್ಯಗಳನ್ನು ಕಟ್ಟಿದರು. ಇದರಿಂದ ಪ್ರತಿ ಸ್ಪರ್ಧೆಗಳು ರಂಗೇರಿದ್ದವು. ಅಲ್ಲದೇ ಸಾಹಸಕ್ಕೆ ಸಾಕ್ಷಿಯಾಗಿರುವ ಆಂಜನೇಯನ ಜಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಹಾಗೂ ಕೇಂದ್ರ ಸಚಿವರು ಚಾಲನೆ ನೀಡಿದ್ದರು. ಮತ್ತಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವ ಜಾತ್ರೆಯಲ್ಲಿ ಕುಸ್ತಿ ಪಟುಗಳು ತಮ್ಮ ಆಟದ ವೈಖರಿಯ ಮೂಲಕ ಜನರ ಮನಸೂರೆಗೊಳಿಸಿದರು.
ಒಟ್ಟಿನಲ್ಲಿ ಹುಬ್ಬಳ್ಳಿ ತಾಲೂಕಿನ ಗೋಕುಲ ಗ್ರಾಮ ದಾರಾವತಿ ಆಂಜನೇಯನ ಜಾತ್ರೆ ಸಂಭ್ರಮ ಕೋವಿಡ್ ನಂತರ ಹೊಸ ಮೆರಗನ್ನು ಪಡೆದುಕೊಂಡಿದೆ. ಕಿಲ್ಲರ್ ಮಹಾಮಾರಿ ಕೊರೊನಾ ಆತಂಕ ದೂರಾದ ಬೆನ್ನಲ್ಲೇ ಜನತೆಗೆ ಜಾತ್ರೆ- ಉತ್ಸವಗಳು ಸಮೀಪವಾಗುತ್ತಿದೆ. ಅಷ್ಟೇ ಅಲ್ಲದೇ ಜಾತ್ರೆ ಹೆಸರಲ್ಲಿ ಸಂಪ್ರದಾಯಿಕ ಕಲೆಗಳು ಮೇಳೈಸಿದ್ದು ಮತ್ತೊಂದು ವಿಶೇಷ.