ಮಲ್ಲಿಕಾರ್ಜುನ ದರಗಾದ 

ಹುನಗುಂದ(ಡಿ.08): ರಾಮದುರ್ಗದಿಂದ ಮಾನ್ವಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-14 ಹುನಗುಂದದಿಂದ ಗುಡೂರ ಎಸ್‌ಸಿವರೆಗೆ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ವಾಹನಗಳು ಇರಲಿ ಪಾದಚಾರಿಗಳು ಕೂಡ ಸಂಚರಿಸುವುದು ದುಸ್ತರವಾಗಿದೆ.

ಈ ಎರಡು ಊರುಗಳ ಮಧ್ಯ ಇರುವ ಸುಮಾರು 20 ಕಿಮೀ ರಸ್ತೆಗೆ ಅದೆಷ್ಟೋ ವರ್ಷಗಳ ಹಿಂದೆ ಮಾಡಿದ ಡಾಂಬರೀಕರಣ ಸಂಪೂರ್ಣ ಕಿತ್ತು ಹೋಗಿ ಎಷ್ಟೋ ವರ್ಷಗಳು ಸಂದಿವೆ. ಇಲಾಖೆ ಅಧಿಕಾರಿಗಳು ರಸ್ತೆಯ ದುರಸ್ತಿಗೆ ಮುಂದಾಗದಿರುವ ಕಾರಣ ರಸ್ತೆಯ ತುಂಬೆಲ್ಲ ದೊಡ್ಡ ಗುಂಡಿಗಳು ಬಿದ್ದು, ರಸ್ತೆ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗುಡೂರ ಎಸ್‌ಸಿ ಸೇರಿ ತಾಲೂಕಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಜನರು ತಾಲೂಕು ಕೇಂದ್ರವಾದ ಹುನಗುಂದ ಪಟ್ಟಣಕ್ಕೆ ನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಇದೇ ಮಾರ್ಗದಿಂದ ಬರುವುದರ ಜೊತೆಗೆ ಐತಿಹಾಸಿಕ ಪ್ರವಾಸಿ ತಾಣಗಳಾದ ಬದಾಮಿ ಮತ್ತು ಪಟ್ಟದಕಲ್ಲು, ಧಾರ್ಮಿಕ ಕ್ಷೇತ್ರ ಶಿವಯೋಗಿ ಮಂದಿರಕ್ಕೂ ಈ ಮಾರ್ಗ ಸಂಪರ್ಕ ಕಲ್ಪಿಸುತ್ತಿರುವುದರಿಂದ ಈ ರಸ್ತೆ ನಿತ್ಯ ವಾಹನ ದಟ್ಟಣೆಯಿಂದ ಕೂಡಿರುತ್ತದೆ.

ವಾಹನ ಚಲಿಸುವುದೇ ಸವಾಲು:

ಈ ರಸ್ತೆಯಲ್ಲಿ ವಾಹನ ಚಲಿಸುವುದೇ ಚಾಲಕರಿಗೆ ಸವಾಲಾಗಿದೆ. ರಸ್ತೆ ಅಷ್ಟೇ ಅಲ್ಲ. ಅದರ ಪಕ್ಕದಲ್ಲಿರುವ ದೊಡ್ಡ ದೊಡ್ಡ ಗುಂಡಿಗಳು ಯಾವ ವಾಹನವನ್ನು ಆಹುತಿ ತೆಗೆದುಕೊಳ್ಳುತ್ತವೆ ಎಂಬುದು ಲೆಕ್ಕಕ್ಕೆ ಸಿಗುತ್ತಿಲ್ಲ. ಒಂದು ಗುಂಡಿಯನ್ನು ತಪ್ಪಿಸಲು ಹೋದರೆ ಮತ್ತೊಂದು ಗುಂಡಿಯಲ್ಲಿ ವಾಹನದ ಚಕ್ರಗಳು ಉರುಳುತ್ತಿರುವುದು ಸರ್ವೆ ಸಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಿದ ನಿದರ್ಶನಗಳು ಸಾಕಷ್ಟಿವೆ. ಸುಮಾರು 20 ಕಿಮೀ ಈ ರಸ್ತೆಯನ್ನು ಕ್ರಮಿಸಬೇಕಾದರೆ ಗರಿಷ್ಠ 20-25 ನಿಮಿಷಗಳು ಸಾಕು. ಆದರೆ ಇಲ್ಲಿ ಹಿಡಿಯುವ ಸಮಯ ಒಂದರಿಂದ ಒಂದೂವರೆ ಗಂಟೆ ಎಂದರೆ ರಸ್ತೆಯ ಸ್ಥಿತಿ ಹೇಗಿರಬಹುದು ಎಂಬುದನ್ನು ನೀವೇ ಊಹಿಸಿ. ಇನ್ನು ಇಲ್ಲಿ ಸಂಚರಿಸುವ ಬೈಕ್‌ ಸವಾರರ ಸ್ಥಿತಿಯಂತೂ ದೇವರಿಗೆ ಪ್ರೀತಿ.

ವರ್ಷವೂ ಖರ್ಚು:

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಈ ರಸ್ತೆ ದುರಸ್ತಿ ನೆಪದಲ್ಲಿ ಪ್ರತಿ ವರ್ಷವು ಹಣ ಖರ್ಚು ಅಧಿಕವಾಗುತ್ತಿದೆ. ರಸ್ತೆಯಲ್ಲಿ ಬಿದ್ದ ಗುಂಡಿಗಳಿಗೆ ಅಲ್ಲಲ್ಲಿ ಹತ್ತಾರು ಟ್ರಿಪ್‌ ಗರಸು ಹಾಕಿದ್ದೆ ಅಧಿಕಾರಿಗಳ ಸಾಧನೆಯಾಗಿದೆ. ಈ ರಸ್ತೆಯ ದುರಸ್ತಿ ಇಲ್ಲವೇ ಮರು ನಿರ್ಮಾಣಕ್ಕೆ ಈ ರಸ್ತೆ ವ್ಯಾಪ್ತಿ ಗ್ರಾಮಗಳ ಗ್ರಾಮಸ್ತರು ಹಲವಾರು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮಾಡಿಕೊಂಡ ಮನವಿ ಗುಡ್ಡಕ್ಕೆ ನಾಯಿ ಬೊಗಳಿದಂತಾಗಿದೆ. ಅಧಿಕಾರಿಗಳ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಅದು ಸುನಾಮಿ ರೀತಿಯಲ್ಲಿ ಸ್ಫೋಟಗೊಂಡರೂ ಆಶ್ಚರ್ಯ ಪಡಬೇಕಿಲ್ಲ.

ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಮೂಲಕ ಪ್ರತಿವರ್ಷವೂ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಐತಿಹಾಸಿಕ ಪ್ರವಾಸಿ ತಾಣಗಳಾದ ಪಟ್ಟದಕಲ್ಲು ಮತ್ತು ಬಾದಾಮಿ, ಧಾರ್ಮಿಕ ಕ್ಷೇತ್ರ ಶಿವಯೋಗಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಇಷ್ಟೊಂದು ಹದಗೆಟ್ಟಿದ್ದರೂ ದುರಸ್ತಿಗೆ ಮುಂದಾಗದಿರುವುದು ಇಲ್ಲಿಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಗೋವಿಂದ ಕಾರಜೋಳ ಅವರ ಬಳಿಯೇ ಲೋಕೋಪಯೋಗಿ ಇಲಾಖೆ ಇರುವುದರಿಂದ ಇತ್ತ ತಿರುಗಿ ನೋಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಒಮ್ಮೆ ಸಂಚರಿಸಿದರೆ ದುರಸ್ತಿ ಪಕ್ಕಾ

ಈ ರಸ್ತೆಯಲ್ಲಿ ವಾಹನ ಒಮ್ಮೆ ಸಂಚರಿಸಿದರೆ ಅದರ ದುರಸ್ತಿ ಪಕ್ಕಾ. ಹೀಗಾಗಿ ಖಾಸಗಿ ವಾಹನಗಳ ಸಂಚಾರ ಇಲ್ಲಿ ಸಂಪೂರ್ಣ ನಿಂತುಹೋಗಿದೆ. ಹುನಗುಂದದಿಂದ ಪಟ್ಟದಕಲ್ಲು ಹಾಗೂ ಬಾದಾಮಿ ಹೋಗುವ ಪ್ರವಾಸಿಗರು ಅಮೀನಗಡ, ಐಹೊಳೆ ಮೂಲಕ ಸುತ್ತುವರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಅನಿರ್ವಾಯವಾಗಿರುವುದರಿಂದ ಅವು ಮಾತ್ರ ಸಂಚರಿಸುತ್ತಿದ್ದು, ಅವುಗಳು ಒಮ್ಮೆ ಬಂದು ಹೋದರೆ ಸಾಕು ಘಟಕದಲ್ಲಿ ದುರಸ್ತಿ ಆಗಲೇಬೇಕು.

ರಂಗಸಮುದ್ರದಿಂದ ಹುನಗುಂದ ತಾಲೂಕು ವ್ಯಾಪ್ತಿ ಬರುತ್ತಿದ್ದು, 8 ಕಿಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಇನ್ನು 3 ಕಿಮೀ ಟೆಂಡರ್‌ ಹಂತದಲ್ಲಿದೆ. ಇನ್ನುಳಿದ ರಸ್ತೆ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಂದ ತಕ್ಷಣ ಸಂಪೂರ್ಣ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹುನಗುಂದ ಇಒ ಪಿಡಬ್ಲ್ಯು ಕೆ.ಎಸ್‌. ಕೊಟಗಿ ಅವರು ಹೇಳಿದ್ದಾರೆ.