ಪೊನ್ನಂಪೇಟೆ(ಸೆ.19): ದಕ್ಷಿಣ ಕೊಡಗಿನ ಪ್ರಮುಖ ರಸ್ತೆ ಹಾಗೂ ಅಂತಾರಾಜ್ಯ ಹೆದ್ದಾರಿಯಾಗಿರುವ ಪೊನ್ನಂಪೇಟೆ- ಕುಟ್ಟ ಹೆದ್ದಾರಿ ನಡುವೆ ಕುಟ್ಟದಿಂದ ಕಾನೂರುವರೆಗೆ ಮುಖ್ಯರಸ್ತೆ ಗುಂಡಿಬಿದ್ದು, ತೀವ್ರ ಹದಗೆಟ್ಟಿದ್ದು, ವಾಹನ ಸಂಚಾರವೇ ದುಸ್ತರವಾಗಿದೆ. 


ಈ ಬಗ್ಗೆ ಕುಟ್ಟಚೂರಿಕಾಡು ಕೊಡವ ವೆಲ್ಫೇರ್‌ ಅಸೋಷಿಯೇಶನ್‌ನ ಅಧ್ಯಕ್ಷ ಬೊಳ್ಳೇರ ರಾಜ ಸುಬ್ಬಯ್ಯ ಮತ್ತು ಪಧಾಧಿಕಾರಿಗಳಾದ ಕಳ್ಳಿಚಂಡ ರತ್ನ, ಅಳಮೇಂಗಡ ಮೋಟಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ರಸ್ತೆಯ ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರವನ್ನು ಸುಗಮಗೊಳಿಸುವಂತೆ ಒತ್ತಾಯಿಸಿದ್ದಾರೆ. ರಸ್ತೆ ದುರಸ್ತಿ ಪಡಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.

ಕುಟ್ಟ- ಕಾನೂರು ನಡುವೆ 10. ಕಿ.ಮೀ. ರಸ್ತೆ ತೀರ ಹದಗೆಟ್ಟಿದ್ದು ಒಂದು ಕಿ.ಮೀ. ವ್ಯಾಪ್ತಿಯಲ್ಲಿ 8- 10 ಗುಂಡಿಗಳು ಎದುರಾಗುತ್ತಿವೆ. ಮಳೆ ಬಿದ್ದರೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗುಂಡಿ ಎಲ್ಲಿದೆ ಎಂಬುದು ಹಾಗೂ ಗುಂಡಿಯ ಆಳ ಗೋಚರವಾಗದೆ ಗುಂಡಿಗಳಿಗೆ ಬಿದ್ದು ವಾಹನಗಳಿಗೆ ಹಾನಿ ಅಗುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ದಿನೇ ದಿನೇ ಗುಂಡಿಗಳು ಹೊಂಡಗಳಾಗಿ ಮಾರ್ಪಾಡಾಗುತ್ತಿವೆ. ಇದರಿಂದ ಬಸ್‌ ಸೇರಿದಂತೆ ಲಘು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಆದ್ದರಿಂದ ಆದಷ್ಟು ಬೇಗ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಲೋಕೋಪಯೋಗಿ ಇಲಾಖೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 


ಒಂದು ವಾರದೊಳಗೆ ಗುಂಡಿ ಮುಚ್ಚುವ ಕಾಮಗಾರಿ ನಡಸದಿದ್ದರೆ ರಸ್ತೆ ಮತ್ತಷ್ಟು ಹದಗೆಟ್ಟು ಹೆಚ್ಚಿನ ಸಂಕಷ್ಟ ಉಂಟಾಗಲಿದೆ. ಆದ್ದರಿಂದ ರಸ್ತೆ ದುರಸ್ತಿ ಪಡಿಸಲು ತ್ವರಿತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.