ಫಿಶರೀಸ್ ಸರ್ವೆ ಆಫ್ ಇಂಡಿಯಾ ನೇತೃತ್ವದಲ್ಲಿ ಓಪನ್ ಹೌಸ್ ಪ್ರೋಗ್ರಾಂ

ಭರತ್‌ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ನ.22): ಅಲ್ಲಿ ಮೀನುಗಾರರು, ವಿವಿಧ ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು ಜಮಾಯಿಸಿದ್ದರು.‌ ಒಂದೆಡೆ ತಂತ್ರಜ್ಞಾನದೊಂದಿಗೆ ಮೀನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ಹೇಗೆ, ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪುವುದು ಹೇಗೆಂದು ಮೀನುಗಾರರಿಗೆ ತಜ್ಞರು ಮಾರ್ಗದರ್ಶನ ನೀಡಿದ್ದರು. ಮತ್ತೊಂದೆಡೆ ಆಳ ಸಮುದ್ರದಲ್ಲಿ ಲಭ್ಯವಿರುವ ಮೀನುಗಳು, ಹಿಡಿಯುವ ವಿಧಾನ, ರೇಡಾರ್‌, ಲಾಂಗ್ ಲೈನರ್ ಬೋಟ್‌ಗಳಲ್ಲಿ ಇರುವ ಸೌಲಭ್ಯ ಮುಂತಾದ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಒದಗಿಸುತ್ತಿದ್ದರು. ಅಷ್ಟಕ್ಕೂ ಆ ಕಾರ್ಯಕ್ರಮ ಆಯೋಜಿಸಿದ್ದಾದ್ರೂ ಯಾಕೆ ಅಂತೀರಾ? ಈ ಸ್ಟೋರಿ ನೋಡಿ....

ವಿಶ್ವ ಮೀನುಗಾರಿಕಾ ದಿನಾಚರಣೆಯ ಪ್ರಯುಕ್ತ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮೀನುಗಾರರು ಹಾಗೂ ಸೈನ್ಸ್ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫಿಶರೀಸ್ ಸರ್ವೆ ಆಫ್ ಇಂಡಿಯಾ ನೇತೃತ್ವದಲ್ಲಿ ಹಾಗೂ ಕರ್ನಾಟಕ ಮೀನುಗಾರಿಕಾ ಇಲಾಖೆ, ಕರ್ನಾಟಕ ಯೂನಿವರ್ಸಿಟಿ ಪಿಜಿ ಸೆಂಟರ್ ಸಹಭಾಗಿತ್ವಲ್ಲಿ ಲಾಂಗ್ ಲೈನರ್ ಫಿಶಿಂಗ್ ಬೋಟ್‌ನಲ್ಲಿ ಓಪನ್ ಹೌಸ್ ಪ್ರೋಗ್ರಾಂ ಹಾಗೂ ಮರೈನ್ ಫಿಶ್ ಎಕ್ಸಿಬಿಷನ್ ಅನ್ನೋ ಒಂದು ದಿನದ‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ‌ ಮೂಲಕ ಮೀನುಗಾರರು ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆಳ ಸಮುದ್ರ ಮೀನುಗಾರಿಗೆ, ಲಭ್ಯವಿರುವ ಮೀನುಗಳು, ಬಳಸುವ ತಂತ್ರಜ್ಞಾನ, ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಸರಕಾರದ ಸೌಲಭ್ಯ ಮುಂತಾದ‌‌ ಹಲವು ಮಾಹಿತಿಗಳನ್ನು ನೀಡಲಾಯಿತು. ಸಾಮಾನ್ಯವಾಗಿ ಕರಾವಳಿಯ ಮೀನುಗಾರರು ಟ್ರಾಲರ್ ಹಾಗೂ ಪರ್ಸೀನ್ ಬೋಟುಗಳನ್ನು ಬಳಸಿಕೊಂಡು ಮೀನುಗಾರಿಕೆ ನಡೆಸುತ್ತಾರೆ. ಆದರೆ, ಲಾಂಗ್ ಲೈನರ್ ಫಿಶಿಂಗ್ ಬೋಟ್ ಮೂಲಕ ಆಳಸಮುದ್ರ ಮೀನುಗಾರಿಕೆಯನ್ನು ನಡೆಸಿ ಸೈಲ್ ಫಿಶ್, ಮಾರ್ಲಿನ್, ಟ್ಯೂನಾ ಮುಂತಾದವುಗಳ ಮೀನುಗಾರಿಕೆ ನಡೆಸಲು ಜನರಿಗೆ ಮಾಹಿತಿ ನೀಡಲಾಯಿತ್ತಲ್ಲದೇ, ಮರೈನ್ ರಿಸೋರ್ಸ್‌ಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಉತ್ತಮ ಮಾಹಿತಿಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಕೂಡಾ ಸಾಕಷ್ಟು ಸಂತೋಷ ಪಟ್ಟಿದ್ದಾರೆ.

ASSEMBLY ELECTION: ಕಾಂಗ್ರೆಸ್‌ನಲ್ಲಿ ಬಿರುಕು; ಜೋರಾದ ಟಿಕೆಟ್ ಫೈಟ್!

ಇನ್ನು ಈ ಕಾರ್ಯಕ್ರಮದ ಮೂಲಕ ಮೀನುಗಾರರು ಅಂತಾರಾಷ್ಟ್ರೀಯ ಮಾರುಕಟ್ಟೆ ಪಡೆಯುವ ಮೂಲಕ ಹೆಚ್ಚು ಲಾಭ ಗಳಿಸುವುದು ಹೇಗೆಂದು ಮಾರ್ಗದರ್ಶನ ಕೂಡಾ ನೀಡಲಾಗಿದೆ. 

ಪ್ರಧಾನಮಂತ್ರಿ ಮತ್ಸ್ಯ ಸಂಪದ‌ ಯೋಜನೆಯಲ್ಲಿ ಸುಮಾರು 45 ಮೀನುಗಾರರು ಆಳ ಸಮುದ್ರ ಮೀನುಗಾರಿಕೆ ನಡೆಸುವ ಯೋಜನೆಯ ಫಲಾನುಭವ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಮೀನುಗಾರರಿಗೆ ಆಳ ಸಮುದ್ರದಲ್ಲಿ ಯಾವ ರೀತಿ ಮೀನುಗಾರಿಕೆ ನಡೆಸುವುದು, ಯಾವ ಪರಿಕರಗಳನ್ನು ಬಳಸುವುದು, ಯಾವ ರೀತಿಯ ಮೀನುಗಳು ದೊರೆಯುತ್ತವೆ ಮುಂತಾದ ಮಾಹಿತಿಗಳನ್ನು ಮೀನುಗಾರರು ಹಾಗೂ ಅವರ ಮುಖಂಡರಿಗೆ ವಿಜ್ಞಾನಿಗಳು ನೀಡಿದ್ದಾರೆ. 
ಅಲ್ಲದೇ, ಆಪರೇಷನ್, ಅದಕ್ಕೆ ಬೇಕಾದ ಸಮಯ, ತಾಂತ್ರಿಕ ವ್ಯವಸ್ಥೆ ಹಾಗೂ ಸರಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಕೂಡಾ ಒದಗಿಸಲಾಗಿದೆ.

ಒಟ್ಟಿನಲ್ಲಿ ವಿಶ್ವ ಮೀನುಗಾರಿಕಾ ದಿನದ ಹಿನ್ನೆಲೆ ಫಿಶರೀಸ್ ಸರ್ವೆ ಆಫ್ ಇಂಡಿಯಾ ಹಾಗೂ ಮೀನುಗಾರಿಕಾ ಇಲಾಖೆಯಿಂದ ನಡೆಸಲಾದ ವಿಶೇಷ ಕಾರ್ಯಾಗಾರದಲ್ಲಿ ತಜ್ಞರ ಮೂಲಕ ಮೀನುಗಾರರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ನೀಡಲಾಗಿದ್ದು, ಮೀನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಮಾರ್ಗದರ್ಶನ ಒದಗಿಸಲಾಗಿದೆ.