ಬೈಲಹೊಂಗಲ(ಡಿ.09): ಊರಿಗೆ ಕಳಿಸದ ಕಾರಣ ಕಬ್ಬು ಕಟಾವು ಗ್ಯಾಂಗ್‌ ಮಾಲೀಕನನ್ನೇ ಕೆಲಸಗಾರರು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ತಾಲೂಕಿನ ಆನಿಗೋಳ ಗ್ರಾಮದ ಹದ್ದಿನಲ್ಲಿ ನಡೆದಿದೆ.

ಮಹಾರಾಷ್ಟ್ರ ರಾಜ್ಯದ ಕೊಲ್ಹಾಪೂರ ಹತ್ತಿರದ ಮಾಜಗಾಂವ ಗ್ರಾಮದ ಕಬ್ಬು ಕಟಾವು ಗ್ಯಾಂಗ್‌ ಮಾಲೀಕ ಪ್ರಕಾಶ ರಾಮಚಂದ್ರ ಮಗದುಮ (40) ಕೊಲೆಗೀಡಾಗಿದ್ದು, ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಗುನಾವರೆ ಗ್ರಾಮದ ರಾಜೇಂದ್ರ ಅಣ್ಣಾಸೊ ಘಾವಡೆ (30) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದ ಅಹ್ಮದನಗರದ ಪಾತರಡಿ ಗ್ರಾಮದ ದತ್ತಾ ಪಾಟಕರ, ಕೈಲಾಸ ಪಾಟಕರ ಕೊಲೆ ಮಾಡಿದವರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಾಲೂಕಿನ ಆನಿಗೋಳ ಸಮೀಪದ ವಕ್ಕುಂದ ರಸ್ತೆಯಲ್ಲಿ ಘಟನೆ ನಡೆದಿದೆ. ಪ್ರಕಾಶ ಮಗದುಮ ಕಬ್ಬು ಕಟವು ಟ್ರ್ಯಾಕ್ಟರ್‌ ಯಂತ್ರ ಹೊಂದಿ ತಾಲೂಕಿನ ಕೊರವಿನಕೊಪ್ಪ ಹದ್ದಿನಲ್ಲಿ ಕಬ್ಬು ಕಟಾವು ಮಾಡಿಸುತ್ತಿದ್ದ. ದತ್ತಾ ಪಾಟಕರ, ಕೈಲಾಸ ಪಾಟಕರ ಕಬ್ಬು ಕಟಾವು ಯಂತ್ರದ ಕೆಲಸಗಾರರಾಗಿದ್ದರು. ಅನೇಕ ದಿನಗಳಿಂದ ಊರಿಗೆ ತೆರಳಲು ರಜೆ ಕೇಳುತ್ತಿದ್ದ ಇವರಿಗೆ ಮಾಲೀಕ ರಜೆ ನೀಡದ್ದರಿಂದ ಭಾನುವಾರ ಬೆಳಗಿನ ಜಾವ 3ಕ್ಕೆ ತಪ್ಪಿಸಿಕೊಂಡು ಬಂದು ಆನಿಗೋಳ ರಸ್ತೆಯಲ್ಲಿ ನಿಂತಿದ್ದರು ಕೆಲಸಗಾರರು ಇಲ್ಲದ್ದನ್ನು ಕಂಡ ಮಾಲೀಕ ಪ್ರಕಾಶ ಕಾರು ತೆಗೆದುಕೊಂಡು ಸ್ಥಳಕ್ಕೆ ಬಂದು ಅವರನ್ನು ಮತ್ತೆ ಕರೆದೊಯ್ಯುತ್ತಿದ್ದಾಗ ರಸ್ತೆ ಮಧ್ಯೆ ಇಬ್ಬರ ಮೊಬೈಲ್ ಇಸಿದುಕೊಂಡಾಗ ರೊಚ್ಚಿಗೆದ್ದ ಇಬ್ಬರೂ ತಮ್ಮಲ್ಲಿದ್ದ ಚಾಕುವಿನಿಂದ ಕಾರು ಚಾಲನೆ ಮಾಡುತ್ತಿದ್ದ ಮಾಲೀಕನನ್ನು ಕುತ್ತಿಗೆ ಭಾಗಕ್ಕೆ ಇರಿದಿದ್ದಾರೆ. ರಕ್ಷಿಸಲು ಹೋದ ರಾಜೇಂದ್ರನಿಗೆ ಮಾರಣಾಂತಿಕವಾಗಿ ಗಾಯಗೊಳಿಸಿ ಪರಾರಿಯಾಗಿದ್ದಾರೆ.

ರಾಜೇಂದ್ರನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಾದ ದತ್ತಾ ಪಾಟಕರ, ಕೈಲಾಸ ಪಾಟಕರ ಬಂಧನಕ್ಕೆ ಎಎಸ್‌ಪಿ ಪ್ರದೀಪ ಗುಂಟೆ ಮಾರ್ಗದರ್ಶನದಲ್ಲಿ ಪೊಲೀಸರು ಮೂರು ತಂಡ ರಚಿಸಿ ಜಾಲ ಬೀಸಿದ್ದಾರೆ. ಈ ಸಂಬಂಧ ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.