ಲಕ್ಷ್ಮೇಶ್ವರ(ಏ.19): ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಮತ್ತೊಬ್ಬ ಕೂಲಿ ಕಾರ್ಮಿಕ ಮೃತಪಟ್ಟ ಘಟನೆ ಭಾನುವಾರ ಲಕ್ಷ್ಮೇಶ್ವರ ತಾಲೂಕಿನಲ್ಲಿ ಜರುಗಿದೆ.

ಲಕ್ಷ್ಮೇಶ್ವರ ಸಮೀಪದ ಹುಲ್ಲೂರ ಗ್ರಾಪಂನ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬದು ನಿರ್ಮಾಣ ಕಾಮಗಾರಿಗೆ ಹೋಗಿದ್ದ ಕೂಲಿ ಕಾರ್ಮಿಕ ನಿಂಗಪ್ಪ ಮೂಕಿ (35) ಕೂಲಿ ಕೆಲಸದಲ್ಲಿ ತೊಡಗಿದ್ದ ವೇಳೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಶನಿವಾರವಷ್ಟೇ ರೋಣ ತಾಲೂಕಿನ ಇಟಗಿ ಗ್ರಾಮದಲ್ಲಿ ಮಂಜುನಾಥ ಹುದ್ದಾರ (46) ಎಂಬವರು ಮೃತಪಟ್ಟಿದ್ದರು.

ತಿಮ್ಮಪ್ಪನ ದರ್ಶನಕ್ಕೆ ತೆರಳಿದ ಅಜ್ಜಿ ದೆಹಲಿ ತಲುಪಿದಳು..!

ಹುಲ್ಲೂರ ಗ್ರಾಮದ ನಿಂಗಪ್ಪ ಮೂಕಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಲು ಭಾನುವಾರ ಬೆಳಗ್ಗೆ ಎಲ್ಲರೊಂದಿಗೆ ಹೊಲಕ್ಕೆ ಹೋಗಿದ್ದರು. ಸ್ವಲ್ಪ ಹೊತ್ತು ಕೆಲಸ ಮಾಡಿದ್ದಾರೆ. ಈ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತು. ಸ್ವಲ್ಪಹೊತ್ತು ಅಲ್ಲಿಯೇ ಕುಳಿತುಕೊಂಡರು. ಆದರೆ ಚೇತರಿಕೆ ಕಾಣಲಿಲ್ಲ. ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಮನೆಗೆ ಕರೆತರುವ ವೇಳೆ ಅಸು ನೀಗಿದ್ದಾರೆ. ಮೃತ ನಿಂಗಪ್ಪ ಅವರಿಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಶಾಸಕ ರಾಮಣ್ಣ ಲಮಾಣಿ ಹಾಗೂ ತಾಪಂ ಅಧ್ಯಕ್ಷ ಪರಶುರಾಮ ಇಮ್ಮಡಿ ಅವರು ಮೃತ ಕಾರ್ಮಿಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.