ದಿಕ್ಕು ತೋಚದ ವೃದ್ಧೆಯನ್ನು ಮನೆಗೆ ಬಿಟ್ಟ ಯೋಧ, ಯೋಧನ ಕಾರ್ಯಕ್ಕೆ ಮೆಚ್ಚುಗೆ| ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ದಾಸಬಾಳ ಗ್ರಾಮದ ವೃದ್ಧೆ ಶಿವಮ್ಮ ಪಾಟೀಲ| ತಿಮ್ಮಪ್ಪನ ದರ್ಶನ ಮುಗಿಸಿ ವಾಪಸ್‌ ಬರುವಾಗ ಮೊಮ್ಮಗನಿಂದ ತಪ್ಪಿಸಿಕೊಂಡಿದ್ದ ಅಜ್ಜಿ|  

ರಿಯಾಜಅಹ್ಮದ ಎಂ. ದೊಡ್ಡಮನಿ

ಗದಗ(ಏ.18): ತಿರುಪತಿ ವೆಂಕಟೇಶ್ವರನ ದರ್ಶನಕ್ಕೆಂದು ತೆರಳಿದ್ದ ಬಾಗಲಕೋಟೆ ಜಿಲ್ಲೆಯ ಅಜ್ಜಿಯೊಬ್ಬಳು ವಾಪಸ್‌ ಬರುವಾಗ ರೈಲು ಬದಲಾವಣೆಯಾಗಿ ಹೊಸದೆಹಲಿ ತಲುಪಿದ ಘಟನೆ ನಡೆದಿದೆ. ಗದಗ ಜಿಲ್ಲೆಯ ಯೋಧನೋರ್ವ ಅಜ್ಜಿಯನ್ನು ವಾಪಸ್‌ ತವರೂರಿಗೆ ಕರೆತಂದು ಮಾನವೀಯತೆ ಮೆರೆದಿದ್ದಾನೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ದಾಸಬಾಳ ಗ್ರಾಮದ 72 ವರ್ಷದ ವೃದ್ಧೆ ಶಿವಮ್ಮ ಪಾಟೀಲ ತಿರುಪತಿ ತಿಮಪ್ಪನ ದರ್ಶನಕ್ಕೆಂದು ಮೊಮ್ಮಗನ ಜತೆ ಏ. 10ರಂದು ತಿರುಪತಿಗೆ ಹೋಗಿದ್ದಳು, ದರ್ಶನ ಮುಗಿಸಿ ಭಾನುವಾರ ವಾಪಸ್‌ ಬರುವಾಗ ಮೊಮ್ಮಗನಿಂದ ತಪ್ಪಿಸಿಕೊಂಡಿದ್ದಾಳೆ. ಹೀಗೆ ತಪ್ಪಿಸಿಕೊಂಡ ಧಾವಂತದಲ್ಲಿ ರೈಲು ಬದಲಾವಣೆಯಾಗಿ ದೆಹಲಿಗೆ ಹೋಗಿದ್ದಾಳೆ. ಅಲ್ಲಿ ಏನು ಮಾಡಬೇಕು ಎಂದು ದಿಕ್ಕು ತೋಚದೆ ಕಕ್ಕಾಬಿಕ್ಕಿಯಾಗಿದ್ದು, ಇವಳನ್ನು ಗಮನಿಸಿದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಕದಾಂಪೂರ ಗ್ರಾಮದ ಯೋಧ ಮುದಕಯ್ಯ ಶೇಖರಯ್ಯ ಹಿರೇಮಠ ಮರಳಿ ಕರೆತಂದಿದ್ದಾನೆ.

ಏ. 14ರಂದು ಹೊಸದೆಹಲಿ ರೈಲ್ವೆ ಸ್ಟೇಶನ್‌ದಲ್ಲಿ ಬೆಳಗ್ಗೆ ತವರೂರಿಗೆ ರಜೆ ಮೇಲೆ ಮರಳುತ್ತಿದ್ದ ಯೋಧ ಶೇಖರಯ್ಯದಂಪತಿಗೆ ಅಜ್ಜಿ ಸಿಕ್ಕಿದ್ದಾಳೆ. ಕನ್ನಡದಲ್ಲಿ ಮಾತನಾಡುತ್ತಿದ್ದ ಅಜ್ಜಿಯನ್ನು ನೋಡಿ ಯೋಧ ಅಜ್ಜಿಯನ್ನು ವಿಚಾರಿಸಿದ್ದಾನೆ. ಆಗ ಅಜ್ಜಿ ತಿರುಪತಿಯಿಂದ ರೈಲು ಬದಲಾಗಿ ತಪ್ಪಿಸಿಕೊಂಡಿದ್ದು ಬಂದಿದ್ದನ್ನು ತಿಳಿಸುತ್ತಾ, ತನ್ನನ್ನು ತವರಿಗೆ ಕಳಿಸುವಂತೆ ಅಂಗಲಾಚಿ ಬೇಡಿಕೊಂಡಿದ್ದಾಳೆ.

ಗದಗ: ಹೆದ್ದಾರಿ ನಿರ್ಮಾಣದ ಹೆಸರಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ

ಅಜ್ಜಿಯ ಸಂಬಂಧಿಸಿಕರಿಗೆ ಫೋನ್‌ ಮಾಡಲು ಅವಳ ಬಳಿ ಮೊಬೈಲ್‌ ನಂಬರ್‌ ಸಹ ಇರಲಿಲ್ಲ. ಯೋಧ ತಕ್ಷಣ ಬಾಗಲಕೋಟೆ ಜಿಲ್ಲೆಯ ಪರಿಚಿತ ಯೋಧರಿಗೆ ಫೋನ್‌ ಮಾಡಿ ಅಜ್ಜಿಯ ಸಂಬಂಧಿಕರು ಇರುವ ಹುನಗುಂದ ತಾಲೂಕಿನ ದಾಸಬಾಳಕ್ಕೆ ತೆರಳಲು ತಿಳಿಸಿ ಅವರ ಫೋನ್‌ ನಂಬರ್‌ ಪಡೆದು ಅವರ ಮಗ ಮಹಾಂತಗೌಡ ಪಾಟೀಲರಿಗೆ ವಿಡಿಯೋ ಕಾಲ್‌ ಮಾಡಿ ಮಾತನಾಡಿ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಅಲ್ಲಿಂದ ಬುಧವಾರ ಹೊರಟು ಶನಿವಾರ ಅಜ್ಜಿಯ ತವರೂರು ದಾಸಬಾಳದಲ್ಲಿರುವ ಮನೆಗೆ ಅಜ್ಜಿಯನ್ನು ಯೋಧ ತಲುಪಿಸಿದ್ದಾನೆ.

ಸೈನಿಕರು ದೇಶ ಕಾಯುವುದರ ಜೊತೆಗೆ ದೇಶದಲ್ಲಿರುವ ಜನರ ಹಿತಾಸಕ್ತಿಯನ್ನು ಕಾಯುವ ಮೂಲಕ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡಿರುವುದು ಶ್ಲಾಘನೀಯವಾದದ್ದು ಎಂದು ಕದಾಂಪೂರ ಗ್ರಾಮಸ್ಥ ಶರಣಪ್ಪ ಅಂಗಡಿ ತಿಳಿಸಿದ್ದಾರೆ.

ಪ್ರತಿಯೊಬ್ಬ ಸೈನಿಕರಲ್ಲಿ ಸತ್ಯ, ನ್ಯಾಯ, ನಿಷ್ಠೆ ಸಂಯಮದ ಜೊತೆಗೆ ಭಾರತ ಮಾತೆಯ ನಿಷ್ಠೆಯ ಸೇವೆ ಜೊತೆಗೆ ಸೈನಿಕರಲ್ಲಿ ಮಾನವೀಯ ಮೌಲ್ಯಗಳು ಅಡಕವಾಗಿರುತ್ತವೆ. ಸಿದ್ಧಗಂಗಾ ಶ್ರೀಗಳ ಆಶ್ರಯದಡಿ ಶಿಕ್ಷಣ ಜೊತೆಗೆ ಅವರು ಹಾಕಿ ಕೊಟ್ಟ ಮಾರ್ಗದಡಿ ತಾಯಿ ಸ್ವರೂಪಿಯಾದ ಶಿವಮ್ಮ ಪಾಟೀಲ್‌ರನ್ನು ಅವರ ಗ್ರಾಮಕ್ಕೆ ತಲುಪಿಸಿದ್ದು, ತುಂಬಾ ಸಂತೋಷ ತಂದಿದೆ ಎಂದು ವೃದ್ಧೆಯನ್ನು ಕರೆತಂದ ಯೋಧ ಮುದಕಯ್ಯ ಹಿರೇಮಠ ಹೇಳಿದ್ದಾರೆ.