ನವಲಗುಂದ(ಏ.18): ತಾಲೂಕಿನ ಬಳ್ಳೂರ ಗ್ರಾಮದಲ್ಲಿ ಕೊರೋನಾ ಲಾಕ್‌ಡೌನ್‌ ನಿಯಮ ಗಾಳಿಗೆ ತೂರಿ ಜಿಲ್ಲಾ ಪಂಚಾಯಿತಿ ಕಾಮಗಾರಿ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಮಣ್ಣು ಕುಸಿದು ಒಬ್ಬ ಮೃತಪಟ್ಟು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಜಿಲ್ಲಾ ಪಂಚಾಯತಿಯಿಂದ ಬಳ್ಳೂರಲ್ಲಿ ಪಿಆರ್‌ಡಿ ಯೋಜನೆ ಅಡಿಯಲ್ಲಿ ಕುಡಿವ ನೀರಿನ ಕೆರೆಯಿಂದ ತುಪ್ಪರಿ ಹಳ್ಳಕ್ಕೆ ಹೊಲಸು ನೀರು ಹೊರಬಿಡುವ ಸಂಬಂಧ ಪೈಪುಗಳನ್ನು ಅಳವಡಿಸಲಾಗುತ್ತಿತ್ತು. ಈ ವೇಳೆ 15 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಮಣ್ಣು ಕುಸಿದಿದೆ. ಸ್ಥಳದಲ್ಲಿಯೇ ಯಲ್ಲಪ್ಪ ನೀಲಪ್ಪ ಹಟ್ಟಿ(36) ಎಂಬಾತ ಮೃತಪಟ್ಟಿದ್ದಾನೆ. ನನ್ನುಸಾಬ ಯಲಿಗಾರ (50), ಸಾವು ಬದುಕಿನಲ್ಲಿ ಹೋರಾಡುತ್ತಿದ್ದು, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೊಬ್ಬ ಅಲ್ಲಾಭಕ್ಷ ಎಂಬಾತ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೊಬ್ಬ ಹಸನಸಾಬ ಮಕ್ತುಂಸಾಬ ಬಿಬಾನವರ (50) ಅದೃಷ್ಟವಶಾತ್‌ ಪಾರಾಗಿದ್ದಾನೆ.

ಮಹಾಮಾರಿ COVID-19: 'ಕೊರೋನಾ ಸೋಂಕು ತಗುಲಿದವರೆಲ್ಲ ಸಾಯಲ್ಲ'

ಈ ಬಗ್ಗೆ ದೂರು ನೀಡಿರುವ ಹಸನಸಾಬ, ಕಾಮಗಾರಿ ವೇಳೆ ಮಣ್ಣು ಕುಸಿಯುವ ಭಯವಿದ್ದ ಕಾರಣ ತಗ್ಗಿನಲ್ಲಿ ಮಣ್ಣಿಗೆ ಅಡ್ಡವಾವಾಗಿ ಕಂಬ ನೆಟ್ಟು ತಗಡನ್ನು ಅಳವಡಿಸುವಂತೆ ಕೇಳಿಕೊಂಡಿದ್ದೆವು. ರಕ್ಷಣೆಗಾಗಿ ಹೆಲ್ಮೆಟ್‌, ಬಾಡಿ ಪ್ರೊಟೆಕ್ಟರ್‌ ನೀಡುವಂತೆ ಒತ್ತಾಯಿಸಿದ್ದೆವು. ಆದರೆ ಗುತ್ತಿಗೆದಾರ ಬಸನಗೌಡ ನಿಂಗನಗೌಡ ಪಾಟೀಲ್‌ ನಿರ್ಲಕ್ಷಿಸಿದ್ದಾರೆ. ಇದರಿಂದ ಅವಘಡ ಸಂಭವಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನವಲಗುಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್‌ಪಿ ರವಿ ನಾಯಕ, ತಹಸೀಲ್ದಾರ್‌ ನವೀನ ಹುಲ್ಲೂರ, ಸಿಪಿಐ ಸಿ.ಸಿ. ಮಠಪತಿ, ಪಿಎಸ್‌ಐ ಜಯಪಾಲ ಪಾಟೀಲ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.