ರೈತರಿಗೆ ತಕ್ಷಣ ಬೆಳೆಹಾನಿ ಪರಿಹಾರ ಒದಗಿಸುವ ಕೆಲಸ ಮಾಡಿ: ಶಾಸಕ ಮುದ್ನಾಳ

ಸೂರತ್‌ ಚೆನ್ನೈ ಎಕ್ಸ್‌ ಪ್ರೆಸ್‌ ವೇ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿನ ರೈತರ ಜಮೀನು ಭೂಸ್ವಾಧೀನ ಮಾಡಿಕೊಂಡಿದ್ದು, ಭೂಮಿ ನೀಡಿದ ರೈತರಿಗೆ ನ್ಯಾಯಯುತವಾದ ನಿಗದಿತ ಬೆಲೆ ನೀಡಬೇಕು ಹಾಗೂ ಇತ್ತೀಚೆಗೆ ಎಡಬಿಡದೆ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಸಾವಿರಾರು ಎಕರೆ ಬೆಳೆ ಹಾನಿಯಾಗಿದ್ದು, ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಅಧಿಕಾರಿಗಳಿಗೆ ಸೂಚಿಸಿದರು.

Work to provide immediate crop damage relief to farmers says venkatreddy mudnal gvd

ಶಹಾಪುರ (ಅ.15): ಸೂರತ್‌ ಚೆನ್ನೈ ಎಕ್ಸ್‌ ಪ್ರೆಸ್‌ ವೇ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿನ ರೈತರ ಜಮೀನು ಭೂಸ್ವಾಧೀನ ಮಾಡಿಕೊಂಡಿದ್ದು, ಭೂಮಿ ನೀಡಿದ ರೈತರಿಗೆ ನ್ಯಾಯಯುತವಾದ ನಿಗದಿತ ಬೆಲೆ ನೀಡಬೇಕು ಹಾಗೂ ಇತ್ತೀಚೆಗೆ ಎಡಬಿಡದೆ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಸಾವಿರಾರು ಎಕರೆ ಬೆಳೆ ಹಾನಿಯಾಗಿದ್ದು, ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಮನಗನಾಳ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಗ್ರಾಮದ ಜನರ ಅಹವಾಲುಗಳನ್ನು ಸ್ವೀಕರಿಸಿ , ಅಂಗವಿಕಲರಿಗೆ ವ್ಹೀಲ್‌ ಚೇರ್‌ ಮತ್ತು ಕೈ ಸ್ಟ್ಯಾಂಡ್‌ ಹಾಗೂ ಇನ್ನಿತರ ಸಾಮಾನುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ, ಸಸಿಗೆ ನೀರೆರೆದು, ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳಿಗೆ ರಿಬ್ಬನ್‌ ಕಟ್‌ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಶಹಾಪುರದಲ್ಲಿ ಸರಣಿ ಕಳ್ಳತನ: ಹಣ ದೋಚಿದ ಖದೀಮರು

ರೈತರ ಬದುಕಿಗೆ ಆಸರೆಯಾಗಿದ್ದ ಭೂಮಿಯನ್ನು ರಾಷ್ಟ್ರೀಯ ಅಭಿವೃದ್ಧಿ ಯೋಜನೆಗೆ ಭೂಮಿ ನೀಡಿದ ರೈತರಿಗೆ ನ್ಯಾಯಯುತವಾದ ಬೆಲೆ ನೀಡಬೇಕು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡ ಜಮೀನಿಗೆ ನ್ಯಾಯಯುತವಾದ ಬೆಲೆ ನೀಡಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಜಮೀನಿಗೆ ಪರಿಹಾರ ನೀಡುವ ವಿಷಯದಲ್ಲಿ ಯಾರೊಬ್ಬ ರೈತರಿಗೂ ಅನ್ಯಾಯವಾಗದಂತೆ ಎಚ್ಚರವಹಿಸಬೇಕು. ಭಾರೀ ಮಳೆಗೆ ಸಾವಿರಾರು ಹೆಕ್ಟೇರ್‌ ಪ್ರದೇಶ ಬೆಳೆ ಹಾನಿಯಾಗಿದ್ದು, ರೈತರಿಗೆ ಪರಿಹಾರ ತಕ್ಷಣ ನೀಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡಬೇಕು. ಗ್ರಾಮಸ್ಥರು ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಮಾತನಾಡಿ, ಸಾರ್ವಜನಿಕರಿಗೆ ಕೂಡಲೇ ಸ್ಪಂದಿಸಿ ಜನಸ್ನೇಹಿ ಅಧಿಕಾರಿಯಾಗಿ ಕೆಲಸ ಮಾಡಬೇಕು. ಜನರನ್ನು ಕಚೇರಿಗೆ ಅಲೆದಾಡುವಂತೆ ಮಾಡಬೇಡಿ, ಮಾನವೀಯತೆ ನೆಲೆಗಟ್ಟಿನೊಂದಿಗೆ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು. ಸಾರ್ವಜನಿಕರು ತಮ್ಮ ಸಮಸ್ಯೆಗಳ ವಿವರವನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು. ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕಾರ್ಯನಿರ್ವಹಿಸಿದರೆ, ಸಾರ್ವಜನಿಕ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇಂದು ನಾನು ಮತ್ತು ಅಧೀಕಾರಿಗಳ ತಂಡ ಮನಗನಾಳದಲ್ಲಿ ವಾಸ್ತವ್ಯ ಹೂಡಿದ್ದು, ಅರ್ಜಿ ಸಲ್ಲಿಸುವ ಪ್ರತಿಯೊಬ್ಬರ ಸಮಸ್ಯೆಯನ್ನು ಖುದ್ದು ಆಲಿಸಿ, ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ ನೀಡಲಾಗುವುದು ಎಂದರು.

ಪಿಂಚಣಿ, ಆಶ್ರಯ ಯೋಜನೆ, ಸ್ಮಶಾನ, ಪಾವತಿ ಖಾತೆ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಮತದಾರರ ಪಟ್ಟಿಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥ, ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದ ಅಡೆತಡೆ ನಿವಾರಣೆಗೆ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ 54ಕ್ಕೂ ಹೆಚ್ಚಿನ ಸೇವೆ ನೀಡಲಾಗುತ್ತಿದೆ. ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಹಲವಾರು ಜನಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. 

ಗ್ರಾಮೀಣರು ಸೇವೆ ಪಡೆಯಲು ಅಲೆದಾಡುವುದನ್ನು ತಪ್ಪಿಸಲು ಅಧಿಕಾರಿಗಳ ತಂಡ ಪ್ರತಿ ತಿಂಗಳು ಮೂರನೇ ಶನಿವಾರ ಆಯ್ದ ಗ್ರಾಮಗಳಿಗೆ ಭೇಟಿ ನೀಡುತ್ತಿದೆ. ಗ್ರಾಮಸ್ಥರು ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರಿ ಸೌಲಭ್ಯಗಳು, ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ 26 ಜನರಿಗೆ ವಿಧವಾ ವೇತನ, ಅಂಗವಿಕಲ ವೇತನ, ಇಂದಿರಾಗಾಂಧಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಮಂಜೂರಾತಿ ಆದೇಶ ಪ್ರತಿ ನೀಡಲಾಯಿತು. ವಿವಿಧ ಇಲಾಖೆಯಿಂದ ಒದಗಿಸುವ ಸರ್ಕಾರಿ ಸೌಲಭ್ಯ ಕುರಿತು ಪ್ರದರ್ಶನ ಮಳಿಗೆಗಳ ಪ್ರದರ್ಶನ ಆಯೋಜಿಸಲಾಗಿತ್ತು.

ಬೀದಿನಾಟಕ ಪ್ರದರ್ಶನ: ಮಹತ್ಮಾ ಜ್ಯೋತಿ ಬಾಪುಲೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅಸ್ಪೃಶ್ಯತೆ ನಿವಾರಣೆ ಮತ್ತು ಬಾಲ್ಯ ವಿವಾಹ ಕುರಿತಂತೆ ಸಾಮಾಜಿಕ ಬೀದಿನಾಟಕ ಮತ್ತು ಸ್ವರ ಸಾಮ್ರಾಟ ಸಂಗೀತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆಯ ಶರಣು ನಾಟೇಕಾರ್‌ ಕಲಾ ತಂಡದಿಂದ ಬಾಲಾ ವ್ಯವಸ್ಥೆ ಹಾಗೂ ಕಿಶೋರಾವಸ್ಥೆ ನಿಷೇಧ ನಿಯಂತ್ರಣ ಕಾಯ್ದೆಯ 1986 ರ ಬಗ್ಗೆ ಜನ ಜಾಗೃತಿ ಅರಿವು ಮೂಡಿಸುವ ಬೀದಿನಾಟಕವನ್ನು ಪ್ರದರ್ಶಿಸಲಾಯಿತು.

ಪಿಎಸ್‌ಐ ನೇಮಕಾತಿ: ಪ್ರಶ್ನೆಪತ್ರಿಕೆ 1ರಲ್ಲೂ ಅಕ್ರಮ, ಬ್ಲೂಟೂತ್‌ ಬಳಕೆ ಪತ್ತೆ..!

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಸಹಾಯ ಆಯುಕ್ತ ಶಾ ಆಲಂ ಹುಸೇನ್‌, ಖಾನಾಪುರ ಗ್ರಾಪಂ ಅಧ್ಯಕ್ಷ ಹಣಮಂತ ರಾಯನೂರ್‌, ಶಹಾಪುರ ತಹಸೀಲ್ದಾರ್‌ ಮಧುರಾಜ್‌ ಕೂಡ್ಲಗಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸವ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ, ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ್‌ ಕವಿತಾಳ, ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ. ರಾಜು ದೇಶಮುಖ ಸೇರಿದಂತೆ ಇತರರಿದ್ದರು.

444 ಅರ್ಜಿಗಳು ಇತ್ಯರ್ಥ: ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ 47, ಆರೋಗ್ಯ ಇಲಾಖೆಗೆ 250, ಪಂಚಾಯತ್‌ ರಾಜ್‌ ಇಲಾಖೆಗೆ 167, ಜೆಸ್ಕಾಂ ಇಲಾಖೆಗೆ 5, ಕಾರ್ಮಿಕ ಇಲಾಖೆಗೆ 20, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ 16 ಅರ್ಜಿಗಳು ಸೇರಿದಂತೆ 535ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 444 ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗಿದೆ. 91 ಅರ್ಜಿಗಳು ಬಾಕಿ ಉಳಿದಿವೆ.

Latest Videos
Follow Us:
Download App:
  • android
  • ios