ಗದಗ: ಮುರುಘೇಂದ್ರ ಶ್ರೀಗಳ ಮಠಕ್ಕೆ ಮಹಿಳಾ ಉತ್ತರಾಧಿಕಾರಿ!

ಈ ಹಿಂದೆ ಮುಸ್ಲಿಂ ಯುವಕನಿಗೆ ಲಿಂಗದೀಕ್ಷೆ ನೀಡಿದ್ದ ಮುರುಘೇಂದ್ರ ಶ್ರೀ| ಇದೀಗ ಮತ್ತೊಂದು ಮಹತ್ವದ ಹೆಜ್ಜೆ| ಇದೀಗ ತಮ್ಮ ಉತ್ತರಾಧಿಕಾರಿಯನ್ನಾಗಿ ಮಹಿಳೆಯೊಬ್ಬರ ನೇಮಿಸಿದ ಸ್ವಾಮೀಜಿ|ಆಳಂದದ ಖಜೂರಿಯ ಮುರುಘೇಂದ್ರ ಕೋರಣೇಶ್ವರ ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ| 

Women Successor to Murughendra Matha in Gadag grg

ಹೊಳೆಆಲೂರ(ಗದಗ)(ಮಾ.28):  ಮುಸ್ಲಿಂ ಯುವಕನೊಬ್ಬನಿಗೆ ಲಿಂಗದೀಕ್ಷೆ ನೀಡಿ ಅಸೂಟಿ ಹಾಗೂ ಸೋಮನಕಟ್ಟಿಯ ಮುರುಘೇಂದ್ರ ಸ್ವಾಮಿ ಶಾಂತಿಧಾಮದ ಪೀಠಾಧಿಪತಿಯನ್ನಾಗಿ ಮಾಡಿದ್ದ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಖಜೂರಿಯ ಮುಮುರುಘೇಂದ್ರ ಕೋರಣೇಶ್ವರ ಶ್ರೀಗಳು ಇದೀಗ ಮಹಿಳೆಯೊಬ್ಬರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದಾರೆ. ಈ ಮೂಲಕ ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ.

2019-20ರಲ್ಲಿ ಅಸೂಟಿಯ ಮುಸ್ಲಿಂ ಯುವಕನಿಗೆ ಲಿಂಗದೀಕ್ಷೆ ನೀಡಿ ಅಸೂಟಿಯ ಶಾಂತಿಧಾಮದಲ್ಲಿ ನಿರಂತರ ದಾಸೋಹ ಹಾಗೂ ಬಸವ ತತ್ವವನ್ನು ಮುರುಘೇಂದ್ರ ಕೊರಣೇಶ್ವರ ಶ್ರೀಗಳು ಸಾರುತ್ತಿದ್ದು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಮ್ಮ ಉತ್ತರಾಧಿಕಾರಿಯನ್ನಾಗಿ ನೀಲಲೋಚನ ತಾಯಿ ಅವರನ್ನು ಆಯ್ಕೆ ಮಾಡಿದ್ದಾರೆ. ಶ್ರೀಗಳ ಈ ನಡೆಗೆ ಅಸೂಟಿ ಶಾಂತಿಧಾಮದ ದಿವಾನ್‌ ಶರೀಫರು ಹಾಗೂ ಭಕ್ತರು ಸ್ವಾಗತಿಸಿದ್ದಾರೆ.

Women Successor to Murughendra Matha in Gadag grg

ಯಾರೀ ಉತ್ತರಾಧಿಕಾರಿ?: 

ಆಳಂದ ತಾಲೂಕಿನ ಖಜೂರಿಯ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಮಹಿಳಾ ಚರಮೂರ್ತಿ ನೀಲಲೋಚನ ತಾಯಿ ಅವರು ಚಿತ್ರದುರ್ಗ ಮಠದ ಭಕ್ತರಾಗಿದ್ದು, ಬಸವತತ್ವ ಮಹಾವಿದ್ಯಾಲಯದಲ್ಲಿ ಸಾಧಕ-ಬಾಧಕ, ಸುಧಾರಕ ತರಬೇತಿ ಪಡೆದಿದ್ದಾರೆ. ಸದ್ಯ ಖಜೂರಿಯ ಮುಮುರುಘೇಂದ್ರ ಶ್ರೀಗಳ ಆಶ್ರಯದಲ್ಲಿ ನಿಜಾಚರಣೆ ವಸತಿ ಕನ್ನಡಶಾಲೆ ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಬಸವತತ್ವ ಸಾರುತ್ತಾ ರೈತ ಮಹಿಳೆಯರಿಗೆ ಹೈನೋದ್ಯಮಿ, ಕೆಎಂಎಫ್‌ ಡೈರಿ ಆರಂಭಿಸಿ ನಿರ್ವಹಣೆ ಮಾಡಿ ತರಬೇತಿ ನೀಡುತ್ತಿದ್ದಾರೆ. ಇವರು ಹೊಳೆಆಲೂರ ಹೋಬಳಿಯ ಅಸೂಟಿ, ಮೆಗೂರ, ಮಾಳವಾಡ, ಕರಮುಡಿ, ಮೇಲ್ಮಠ ಹಾಗೂ ಬೆಳಗಾವಿ ಜಿಲ್ಲೆಯ ಹೊಸಕೇರಿ, ಆರಟ್ಟಿ, ನರಗುಂದ ಸೇರಿ ದೇಶಾದ್ಯಂತ ಬಸವಧರ್ಮ ರಥದೊಂದಿಗೆ ಬಸವತತ್ವಗಳನ್ನು ಸಾರಿ ಅನೇಕ ಗ್ರಾಮಗಳಲ್ಲಿ ಬಸವ ಭವನ, ಶಾಂತಿಧಾಮ ಸೇರಿ ಅನೇಕ ಧಾರ್ಮಿಕ ಮಂದಿರಗಳ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಸಾಕಷ್ಟುಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಭಕ್ತರ ಮನದಲ್ಲಿ ನೆಲೆ ನಿಂತಿದ್ದಾರೆ.

Women Successor to Murughendra Matha in Gadag grg

ಲಿಂಗಾಯತ ಮಠಕ್ಕೆ ಮುಸ್ಲಿಂ ಸ್ವಾಮೀಜಿ ಪೀಠಾಧಿಪತಿ

ಬಸವತತ್ವ ಜಗವಿರುತನಕ, ಬಸವತತ್ವ ಪಾಲನೆ ಮಾಡುವುದೇ ಪರಂಪರೆಯ ನಿಯಮ. ಈ ದಿಶೆಯಲ್ಲಿ ಮಹಿಳಾ ಚರಮೂರ್ತಿ ನೀಲಲೋಚನ ತಾಯಿ ಅವರನ್ನು ಮಠದಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಮಹಿಳೆ ಮಕ್ಕಳನ್ನು ಹೆರುವ ಯಂತ್ರವಾಗದೆ ಸಮಾಜ ಸುಧಾರಣೆ, ಧಾರ್ಮಿಕತೆ, ಆಡಳಿತವನ್ನು ಮುನ್ನಡೆಸಲು ಮಾದರಿಯೂ ಆಗುತ್ತಾರೆ ಎಂದು ಶ್ರೀ ಅಸೂಟಿ ಶಾಂತಿಧಾಮ ಕಲಬುರ್ಗಿಯ ಖಜೂರಿ ಮುರುಘೇಂದ್ರ ಕೋರಣೇಶ್ವರ ಶ್ರೀಗಳು ತಿಳಿಸಿದ್ದಾರೆ.

ಅಸೂಟಿ ಶಾಂತಿಧಾಮದಿಂದ ಸ್ವಾಗತ

ಮುರುಘೇಂದ್ರ ಕೋರಣೇಶ್ವರ ಶ್ರೀಗಳ ಶಾಂತಿಧಾಮದ ದಿವಾನ್‌ ಶರೀಫರು ಸ್ವಾಮಿಗಳ ನಿರ್ಧಾರಕ್ಕೆ ಸ್ವಾಗತ ಕೋರಿದ್ದು ಶ್ರೀಗಳು ನಿರಂತರವಾಗಿ ಬಸವ ಧರ್ಮ ಪ್ರತಿಪಾದಕರು ಆಗಿದ್ದಾರೆ. ಅವರ ನಡೆಯಲ್ಲೆ ನಾವು ಸಾಗುತ್ತಿದ್ದು, ಅವರ ಮಹಿಳಾ ಉತ್ತರಾಧಿಕಾರಿ ನಿರ್ಣಯವನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ. ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ$ಈರಣ್ಣ ತಾಳಿ, ಮಲ್ಲಿಕಾರ್ಜುನ ಮೋಟೆಗೌಡ್ರ, ಶರಣಪ್ಪ ಕರಕಿಕಟ್ಟಿ, ರಾಚಪ್ಪ ತೋಟರ, ದ್ಯಾಮಣ್ಣ ಹದ್ಲಿ, ಹನುಮಪ್ಪ ನಾಯ್ಕರ, ಯಲ್ಲಪ್ಪಗೌಡ್ರ ಪಾಟೀಲ, ಕಮಲ್‌ಸಾಬ್‌ ಜಾಲಿಹಾಳ, ಶರಣವ್ವ ಯಲ್ಲಪ್ಪ ಕಾಗಲಗೊಂಬ ಸ್ವಾಗತ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
 

Latest Videos
Follow Us:
Download App:
  • android
  • ios