ವಿಧಾನಸಭೆ(ಫೆ.21): ಈಗಾಗಲೇ ಐಟಿ​- ಬಿಟಿ ಕಂಪನಿಗಳು, ಖಾಸಗಿ ಕಾರ್ಖಾನೆಗಳಲ್ಲಿ ಇರುವಂತೆ ಹೋಟೆಲ್‌, ಮಾಲ್‌ಗಳು ಸೇರಿದಂತೆ ಇತರೆ ವಾಣಿಜ್ಯ ಸಂಸ್ಥೆಗಳಲ್ಲೂ ರಾತ್ರಿ ಪಾಳಿ ಉದ್ಯೋಗಕ್ಕೆ ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಅವಕಾಶ ನೀಡುವ ‘ಕರ್ನಾಟಕ ವಾಣಿಜ್ಯ ಮತ್ತು ವಾಣಿಜ್ಯ ಕಾರ್ಯಸಂಸ್ಥೆಗಳ (ತಿದ್ದುಪಡಿ) ವಿಧೇಯಕ 2020’ ವಿಧಾನಸಭೆಯಲ್ಲಿ ಮಂಡನೆಯಾಯಿತು.

ಮಹಿಳಾ ಕಾರ್ಮಿಕರಿಗೂ ಉದ್ಯೋಗಾವಕಾಶಗಳಲ್ಲಿ ಸಮಾನ ಅವಕಾಶ ನೀಡಿ, ರಾತ್ರಿಪಾಳಿಯಲ್ಲೂ ಉದ್ಯೋಗ ಮಾಡಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ ಮಾಡಿದ್ದ ಆದೇಶಾನುಸಾರ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸ್ಪಷ್ಟನಿರ್ದೇಶನ ನೀಡಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಕಾರ್ಮಿಕ ಇಲಾಖೆ ಕಳೆದ ನವೆಂಬರ್‌ನಲ್ಲಿ ಕೈಗಾರಿಕೆಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸಕ್ಕೆ ಷರತ್ತು ಬದ್ಧ ಅನುಮತಿ ನೀಡಿ ಅಧಿಸೂಚನೆ ಹೊರಡಿಸಿತ್ತು. ಇದೀಗ, ಅದನ್ನು ವಾಣಿಜ್ಯ ಸಂಸ್ಥೆಗಳಿಗೂ ವಿಸ್ತರಿಸಲು ವಿಧೇಯಕ ಮಂಡಿಸಿದೆ. ಈ ಮಸೂದೆ ಮುಂದಿನ ಬಜೆಟ್‌ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಧೇಯಕದಲ್ಲಿ, ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಮುಂದೆ ಬಂದರೆ ಮಾತ್ರ ಅವಕಾಶ ನೀಡಬೇಕು. ಕಡ್ಡಾಯ ಮಾಡಬಾರದು. ಲಿಖಿತವಾಗಿ ಅವರಿಂದ ಒಪ್ಪಿಗೆ ಪಡೆಯಬೇಕು. ಮಹಿಳೆಯರ ಸುರಕ್ಷತೆಗೆ ಎಲ್ಲಾ ರೀತಿಯ ಭದ್ರತೆ ಹಾಗೂ ಜಾಗೃತ ಕ್ರಮಗಳನ್ನು ವಹಿಸಬೇಕು. ಮಹಿಳಾ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು. ಮನೆಯಿಂದ ಕೆಲಸಕ್ಕೆ ಬಂದು ಹೋಗಲು ವಾಹನ ವ್ಯವಸ್ಥೆ ಮಾಡಬೇಕು. ಸ್ವಯಂ ಅಥವಾ ಇತರೆ ಸಂಸ್ಥೆಗಳಿಂದ ಮಹಿಳಾ ಉದ್ಯೋಗಿಗಳು ಪಡೆದ ಶಿಶು ಕೇಂದ್ರದ ವೆಚ್ಚವನ್ನು ಕಾರ್ಯಸಂಸ್ಥೆಯೇ ಭರಿಸಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ಉಲ್ಲೇಖಿಸಲಾಗಿದೆ.