ಚಿನ್ನಕ್ಕಾಗಿ ದೊಡ್ಡ ಕೆರೆಯ ನೀರು ಖಾಲಿ ಮಾಡಲು ಮುಂದಾದರು
ಚಿನ್ನಕ್ಕಾಗಿ ಜನರು ದೊಡ್ಡದ ಕೆರೆಯ ನೀರನ್ನು ಸಂಪೂರ್ಣ ಖಾಲಿ ಮಾಡಲು ಮುಂದಾಗಿದ್ದರು. ಮಹಿಳೆ ಮಾತಿನಿಂದ ಈ ನಿರ್ಧಾರ ಕೈಗೊಂಡಿದ್ದರು.
ರಾಮನಗರ (ಡಿ.14): ಮಹಿಳೆಯೊಬ್ಬರ ಮಾತು ನಂಬಿಕೊಂಡು ಕಳೆದು ಹೋಗಿದ್ದ ಚಿನ್ನದ ಸರ ಹುಡುಕಲು ಇಡೀ ಕೆರೆಯನ್ನೇ ಬರಿದು ಮಾಡಲು ಗ್ರಾಮದ ಜನರು ಮುಂದಾಗಿದ್ದರು. ಆದರೆ, ಅದೃಷ್ಟವಶಾತ್ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಕೆರೆ ಬರಿದು ಮಾಡುವ ಕಾರ್ಯ ಸ್ಥಗಿತಗೊಂಡಿದೆ.
ಇಂತಹದೊಂದು ವಿಲಕ್ಷಣಕಾರಿ ಘಟನೆ ನಡೆದಿರುವುದು ರಾಮನಗರ ತಾಲೂಕಿನ ಬಿಳಗುಂಬ ಗ್ರಾಮದಲ್ಲಿ. ಸ್ಥಳೀಯ ವಾಸಿ ಸವಿತಾ ಎಂಬುವರ ಚಿನ್ನದ ಒಡವೆಗಳನ್ನು ಮೂರು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದವು.
ಈ ವಿಚಾರವಾಗಿ ಮನೆಯಲ್ಲಿ ಪತಿ ಭಗವಂತ ಮತ್ತು ಸವಿತಾ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಇದರಿಂದ ರೋಸಿ ಹೋದ ಸವಿತಾ ತನ್ನಲ್ಲಿದ್ದ ಮಾಂಗಲ್ಯ ಸರ, ಚಿನ್ನದ ಬಳೆ, ಉಂಗುರ ಸೇರಿದಂತೆ ಬರೋಬ್ಬರಿ 250 ಗ್ರಾಂ ಚಿನ್ನದ ಒಡವೆಗಳನ್ನು ಕವರ್‌ನಲ್ಲಿ ಕಟ್ಟಿಹಲಗೇಗೌಡನ ಕಟ್ಟೆಕೆರೆಗೆ ಎಸೆದಿದ್ದಾಗಿ ಸುಳ್ಳು ಹೇಳಿದ್ದಾರೆ. ಇದನ್ನೇ ಸತ್ಯವೆಂದು ನಂಬಿಕೊಂಡ ಗ್ರಾಮದ ಮುಖಂಡರು ಸಭೆ ಸೇರಿದ್ದಾರೆ. ಇಡೀ ಕೆರೆಯ ನೀರನ್ನು ಬರಿದು ಮಾಡಿ, ಚಿನ್ನವಿರುವ ಕವರ್ ಅನ್ನು ಹೊರ ತೆಗೆಯಲು ನಿರ್ಧಾರ ಕೈಗೊಂಡಿದ್ದಾರೆ. ಬಿಳಗುಂಬ ಗ್ರಾಪಂ ಎದುರಲ್ಲೆ ಕೆರೆ ನೀರು ಬರಿದು ಮಾಡುವ ಕಾರ್ಯಕ್ಕೆ ಕೆಲ ಗ್ರಾಮಸ್ಥರು ಮುಂದಾಗಿದ್ದರು. ನೀರನ್ನು ಮತ್ತೆ ಕೆರೆಗೆ ತುಂಬಿಸುವುದಾಗಿ ಮಾತು ನೀಡಿದ್ದರು ಎನ್ನಲಾಗಿದೆ.
ಕಾಂಗ್ರೆಸ್ - ಬಿಜೆಪಿಯಿಂದ ಜೆಡಿಎಸ್ ಮನೆಗೆ ಕನ್ನ ! ಪಕ್ಷ ಬಿಟ್ಟು ತೆರಳಿದ ಮುಖಂಡರು
ಡಿಸೆಂಬರ್ 9ರಂದು ಕೆರೆಗೆ ಮೋಟಾರ್ ಅಳವಡಿಸಿ, ಸುಮಾರು 1 ಗಂಟೆಗಳ ಕಾಲ ನೀರನ್ನು ಹೊರಗೆ ಸಾಗಿಸಲು ಪ್ರಾರಂಭಿಸಿದ್ದಾರೆ. ಈ ವಿಚಾರವನ್ನು ಅದೇ ಗ್ರಾಮದ ಬಿ.ಟಿ.ರಾಜೇಂದ್ರ ಎಂಬುವವರು ಜಿಲ್ಲಾಡಳಿತದ ಗಮನಕ್ಕೆ ತಂದು ದೂರು ನೀಡಿದ್ದಾರೆ. ಸವಿತಾ ಎಂಬುವವರು ಒಡವೆಯನ್ನು ಕಳೆದುಕೊಂಡು, ಕೆರೆಗೆ ಎಸೆದಿರುವುದಾಗಿ ಸುಳ್ಳು ಹೇಳಿದ್ದಾರೆ. ಕೆರೆಯ ನೀರು ಖಾಲಿಯಾಗುವುದನ್ನು ತಡೆಯಬೇಕು ಎಂದು ಮನವಿ ಮಾಡಿದ ಬಳಿಕ ಕೆರೆ ನೀರು ಖಾಲಿ ಮಾಡುವ ಕಾರ್ಯಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಡೆವೊಡ್ಡಿದ್ದಾರೆ.
ಗ್ರಾಮಸ್ಥರ ಹೇಳಿಕೆ ಏನು?
250 ಗ್ರಾಂ ಚಿನ್ನ ಎಂದರೆ ಹುಡುಗಾಟವಲ್ಲ. ಸವಿತಾ ಅವರು ಯಾವುದೋ ಕೋಪದಲ್ಲಿ ಒಡವೆಗಳನ್ನೆಲ್ಲ ಕೆರೆಗೆ ಎಸೆದಿರುವುದಾಗಿ ಹೇಳಿದ್ದರು. ಹೀಗಾಗಿ ನಾವು ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂಬ ಆಸೆಯಿಂದ ನೀರು ಖಾಲಿ ಮಾಡಲು ಮುಂದಾಗಿದ್ದವು. ಆದರೆ, ಈವರೆಗೂ ಹನಿ ನೀರನ್ನು ಕೆರೆಯಿಂದ ತೆಗಿದಿಲ್ಲ. ಅಷ್ಟರಲ್ಲಿ ನಮ್ಮೂರಿನ ಒಬ್ಬರೆ ದೂರು ನೀಡಿದ್ದರು ಎನ್ನುತ್ತಾರೆ ಗ್ರಾಮಸ್ಥರು.
ಒಡವೆ ಎಲ್ಲಿದೆ?
ಸವಿತಾ ಒಡವೆಗಳನ್ನು ಕೆರೆಗೆ ಎಸೆದಿರುವುದು ಸುಳ್ಳು ಎಂಬುದು ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರಿಗೆ ಒವಡೆಗಳು ಎಲ್ಲಿವೆ ಎಂಬು ಪ್ರಶ್ನೆ ಕಾಡುತ್ತಿದೆ. ನಿಜವಾಗಿಯು ಒಡವೆ ಕೆರೆಯಲ್ಲಿಯೇ ಇದೆಯೇ? ಇಲ್ಲವೇ ಎಲ್ಲೊ ಕಳೆದುಕೊಂಡಿದ್ದಾರೆಯೇ? ಎಂಬುದಕ್ಕೆ ಸವಿತಾ ಅವರೇ ಉತ್ತರಿಸಬೇಕಿದೆ.