ಬೆಂಗಳೂರು(ಅ.09): ಬಾಗಿಲು ತೆರೆದು ಆನ್‌ ಮಾಡಿದ ಕೂಡಲೇ ರಿವರ್ಸ್‌ ಗೇರ್‌ನಲ್ಲಿದ್ದ ಕಾರು ಚಲಿಸಿ ಕಾರಿನ ಬಾಗಿಲು ಮತ್ತು ಮರದ ನಡುವೆ ಸಿಲುಕಿಕೊಂಡು ಮಹಿಳೆಯೊಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸದಾಶಿವನಗರ ಸಮೀಪ ನಡೆದಿದೆ.

"

ಬಿಇಎಲ್‌ ರಸ್ತೆ ಆರ್‌ಕೆ ಗಾರ್ಡನ್‌ 4ನೇ ಕ್ರಾಸ್‌ ನಂದಿನಿ ರಾವ್‌(45) ಮೃತ ದುರ್ದೈವಿ. ಮನೆ ಮುಂದೆ ನೆರಳಿಗೆ ಕಾರನ್ನು ನಿಲ್ಲಿಸಲು ಬುಧವಾರ ಮಧ್ಯಾಹ್ನ ನಂದಿನಿ ತೆರಳಿದ್ದಾಗ ಈ ದಾರುಣ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆ ನಡೆದಿದ್ದು ಹೇಗೆ?:

ನಂದಿನಿ ಅವರ ಪತಿ ರಾಜೇಶ್‌ ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಮಗುವಿಗೆ ಸ್ನಾನ ಮಾಡಿಸುತ್ತಿದ್ದರು. ಈ ವೇಳೆ ಮನೆಯ ಮುಂದೆ ಮರದಡಿ ನಿಲ್ಲಿಸಿದ್ದ ಹೊಂಡಾ ಸಿಟಿ ಕಾರಿಗೆ ಬಿಸಿಲು ಬೀಳುತ್ತಿದ್ದ ಕಾರಣ, ಕಾರನ್ನು ಪಕ್ಕಕ್ಕೆ ನಿಲ್ಲಿಸಲು ನಂದಿನಿ ಬಂದಿದ್ದರು.

ಜಮಖಂಡಿ: ಹಿಂಬದಿಯಿಂದ ಬಸ್‌ ಡಿಕ್ಕಿ, ಬೈಕ್‌ ಸವಾರರಿಬ್ಬರ ದುರ್ಮರಣ

ಮನೆ ಮುಂದೆ ಇಳಿಜಾರು ಪ್ರದೇಶವಿರುವ ಕಾರಣ ರಿವರ್ಸ್‌ ಗೇರ್‌ನಲ್ಲೇ ಕಾರನ್ನು ನಿಲ್ಲಿಸಲಾಗಿತ್ತು. ಬಾಗಿಲು ತೆರೆದು ಹೊರಗಿನಿಂದಲೇ ನಂದಿನಿ ಕಾರನ್ನು ಸ್ಟಾರ್ಟ್‌ ಮಾಡಿದ್ದಾರೆ. ರಿವರ್ಸ್‌ ಗೇರ್‌ನಲ್ಲಿದ್ದ ಕಾರಣಕ್ಕೆ ತಕ್ಷಣವೇ ಕಾರು ಚಲಿಸಿದೆ. ಅನಿರೀಕ್ಷಿತ ಘಟನೆಯಿಂದ ಅವರು ಪಾರಾಗುವ ವೇಳೆಗೆ ಕಾರಿನ ಬಾಗಿಲು ಬಡಿದಿದೆ. ಬಾಗಿಲು ಸಮೇತ ಅವರು ಸಾಗಿದ್ದು, ಕಾರು ಮತ್ತು ಮರದ ನಡುವೆ ಅವರು ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲೇ ಅವರು ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೊಂಡಾ ಸಿಟಿ ಆಗಿದ್ದರಿಂದ ಅವುಗಳ ರಿವರ್ಸ್‌ ಗೇರ್‌ನಲ್ಲಿದ್ದರು ಗರಿಷ್ಠ ಪ್ರಮಾಣದ ವೇಗ ಮಿತಿಯಲ್ಲಿರುತ್ತದೆ. ಹೀಗಾಗಿ ಆನ್‌ ಮಾಡಿದ ಕೂಡಲೇ ಕಾರು ಚಲಿಸಿದಾಗ ಅವರಿಗೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಮರದ ಸನಿಹದಲ್ಲೇ ಕಾರು ನಿಲ್ಲಿಸಿದ್ದು ಕೂಡಾ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಸದಾಶಿವನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.