ಬೆಳಗಾವಿ(ಫೆ.23): ಅನೈತಿಕ ಸಂಬಂಧದಿಂದ ರಕ್ಷಿಸಿಕೊಳ್ಳಲು ತನ್ನ ಪತಿಯನ್ನೇ ಹತ್ಯೆಗೈದು, ನಂತರ ಪತಿ ಕಾಣೆಯಾಗಿರುವ ಬಗ್ಗೆ ಕಟ್ಟುಕಥೆ ಕಟ್ಟಿದ ಪತ್ನಿ ಹಾಗೂ ಪ್ರಿಯತಮ ಇದೀಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾರೆ.

ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದ ಅಂಜಲಿ ದೀಪಕ ಪಟ್ಟಣದಾರ (26) ಹಾಗೂ ಅವಳ ಪ್ರಿಯತಮ ಕಾರ್‌ಡ್ರೈವರ್ ಪ್ರಶಾಂತ ದತ್ತಾತ್ರೇಯ ಪಾಟೀಲ (28) ಎಂಬುವರೇ ಕಂಬಿ ಹಿಂದಿನ ಆರೋಪಿಗಳು. ಇನ್ನಿಬ್ಬರು ಆರೋಪಿಗಳಾದ ನವೀನ ಅಶೋಕ ಕೆಂಗೇರಿ ಹಾಗೂ ಪ್ರವೀಣ ಶಿವಲಿಂಗಪ್ಪ ಹುಡೇದ ತಲೆ ಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಜಾಲ ಬಿಸಿದ್ದಾರೆ. ಹೊನ್ನಿಹಾಳ ಗ್ರಾಮದ ಯೋಧ ದೀಪಕ ಪಟ್ಟಣದಾರ (32) ಹತ್ಯೆಗೀಡಾದ ವ್ಯಕ್ತಿ. 

ಯೋಧನ ಪತ್ನಿ ಅಂಜಲಿ , ಕಾರ್ ಡೈವರ್ ಪ್ರಶಾಂತ ಪಾಟೀಲ ನಡುವೆ ಅಕ್ರಮ ಸಂಬಂಧವಿತ್ತು. ಅದು ಮನೆಯವರಿಗೆ ಗೊತ್ತಾಗಿದ್ದರಿಂದ ಇಬ್ಬರಲ್ಲಿ ವೈಮನಸ್ಸು ಉಂಟಾಗಿತ್ತು. ಇದರಿಂದಾಗಿ ಅಂಜಲಿ ತನ್ನ ಪ್ರಿಯತಮ ಪ್ರಶಾಂತನಿಗೆ ತಿಳಿಸಿದ್ದಾಳೆ. ಪತ್ನಿ ಅಂಜಲಿ, ಪ್ರಶಾಂತ ಹಾಗೂ ಇತನ ಗೆಳೆಯರಾದ ನವೀನ ಕೆಂಗೇರಿ, ಪ್ರವೀಣ ಹುಡೇದ ಜತೆಗೂಡಿ ಈಗ್ಗೆ ನಾಲ್ಕು ತಿಂಗಳ ಹಿಂದೆಯೇ ಪತಿಯನ್ನು ಕೊಲೆ ಮಾಡುವ ಬಗ್ಗೆ ಸಂಚು ರೂಪಿಸಿದ್ದರು.

ಮದುವೆಯಾದ್ರೂ ಕಾರ್ ಡ್ರೈವರ್‌ ಜೊತೆ ಅಕ್ರಮ ಸಂಬಂಧ: ಗಂಡನನ್ನೇ ಹತ್ಯೆಗೈದ ಹೆಂಡ್ತಿ!

ಕಳೆದ ಜ.28 ರಂದು ಮಧ್ಯಾಹ್ನ2.30 ಗಂಟೆಗೆ ಗೋಕಾಕ ತಾಲೂಕಿನ ಗೋಡಚಿನಮಲ್ಕಿ ಜಲಪಾತಕ್ಕೆ ಹೋಗಿ ಬರೋಣ ಎಂದು ತಮ್ಮ ಕಾರನಲ್ಲಿ ತೆರಳಿದ್ದಾರೆ. ಈ ವೇಳೆ ಜಲಪಾತದ ಹತ್ತಿರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾರೆ. ನಂತರ ದೇಹದ ಗುರುತುಗಳು ಪತ್ತೆಯಾಗದಂತೆ ದೇಹವನ್ನು ಮುಚ್ಚಿ ಹಾಕಿದ್ದಾರೆ. ನಂತರ ಪತಿಯ ಹತ್ಯೆಯಲ್ಲಿ ಭಾಗವಹಿಸಿದ್ದ ಪತ್ನಿ ಅಂಜಲಿ ಫೆ. 4 ರಂದು ಮಾರಿಹಾಳ ಪೊಲೀಸ್ ಠಾಣೆಗೆ ತೆರಳಿ ಜ.28 ರಂದು ಗೆಳೆಯರ ಜತೆ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಜಲಾಪತಕ್ಕೆ ಹೋಗಿ ಮರಳಿ ಬರುವ ಸಂದರ್ಭದಲ್ಲಿ ನನ್ನನ್ನು ಸಾಂಬ್ರಾ ಗ್ರಾಮದಲ್ಲಿರುವ ಹಳೆಯ ಪೊಲೀಸ್ ಠಾಣೆಯ ಹತ್ತಿರದ ಬಸ್ ತಂಗುದಾಣದ ಬಳಿ ರಾತ್ರಿ 9.30 ಗಂಟೆಗೆ ಕಾರನಿಂದ ಇಳಿಸಿ ಹೋದವನು ಮರಳಿ ಮನೆಗೆ ಬರದೆ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾಳೆ. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸ್‌ರಿಗೆ ಕೊಲೆಗೀಡಾದ ಯೋಧ ದೀಪಕ ಹಾಗೂ ಪತ್ನಿ ಅಂಜಲಿಗೆ ತಮ್ಮ ಕಾರ್ ಡ್ರೈವರ್ ಪ್ರಶಾಂತ ಪಾಟೀಲಗೂ ಅನೈತಿಕ ಸಂಬಂಧ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಕೊಲೆ ಮಾಡಿದ್ದನ್ನ ಒಪ್ಪಿಕೊಂಡ ಪತ್ನಿ: 

ತನಿಖೆ ಕೈಗೊಂಡಿ ದ್ದ ಪೊಲೀಸರಿಗೆ ಒಂದು ಸಣ್ಣ ಸುಳಿಯುವ ಸಿಗುತ್ತಿದ್ದಂತೆ ತಮ್ಮದೇ ರೀತಿಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಯೋಧ ದೀಪಕನ ಪತ್ನಿ ಅಂಜಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಅಂಜಲಿ ಕಾರ್ ಡ್ರೈವರ್ ಪ್ರಶಾಂತ ಪಾಟೀಲ ನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಷಯ ಮನೆಯವರಿಗೆ ಗೊತ್ತಾಗಿದ್ದರಿಂದ ಮನಸ್ತಾಪವಿತ್ತು. ಆದ್ದರಿಂದ ಪತಿ ದೀಪಕನನ್ನು ಹತ್ಯೆಮಾಡುವ ಬಗ್ಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು. ತಾವು ರೂಪಿಸಿದ ಸಂಚಿನಂತೆ ಪತಿ ದೀಪಕನನ್ನು ಪ್ರಿಯತಮ ಪ್ರಶಾಂತ ಹಾಗೂ ಆತನ ಗೆಳಯರಾದ ನವೀನ್ ಹಾಗೂ ಪ್ರವೀಣ ಜತೆಗೂಡಿ ಹತ್ಯೆ ಮಾಡಿ, ಕೊಲೆಯ ಕೃತ್ಯವನ್ನು ಮುಚ್ಚಿಹಾಕಲು ಉದ್ದೇಶದಿಂದ ಪತಿ ದೀಪಕ ಕಾಣೆಯಾಗಿರುವ ಬಗ್ಗೆ ಕಥೆ ಕಟ್ಟಿದ ಬಗ್ಗೆ ಮಾಹಿತಿ ನೀಡಿದ್ದಾಳೆ. 

ಆರೋಪಿ ಅಂಜಲಿ ನೀಡಿದ ಮಾಹಿತಿ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಕಾರ್ ಡ್ರೈವರ್ ಪ್ರಶಾಂತ ಪಾಟೀಲನನ್ನು ಬಂಧಿಸಿದ್ದಾರೆ. ನಂತರ ಯೋಧ ದೀಪಕನನ್ನು ಹತ್ಯೆ ಮಾಡಿದ ಗೋಡಚೀನಮಲ್ಕಿಯ ಜಲಪಾತದ ಅರಣ್ಯ ಪ್ರದೇಶದಲ್ಲಿ ಶವ ಮುಚ್ಚಿಹಾಕಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದೇಹದ ಅವಶೇಷಗಳು ಪತ್ತೆಯಾಗಿವೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಯೋಧನ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಗ್ರಾಮೀಣ ಎಸಿಪಿ ಕೆ.ಶಿವಾರೆಡ್ಡಿ, ಮಾರಿಹಾಳ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಿಜಯಕುಮಾರ ಸಿನ್ನೂರ, ಸಿಬ್ಬಂದಿ ಎಂ.ಬಿ.ಬಡಿಗೇರ, ಬಿ.ಎಸ್.ನಾಯಿಕ, ಬಿ.ಬಿ, ಕಡ್ಡಿ, ಯು.ಎಸ್. ಗದಗ, ಎಸ್.ಎಸ್.ಬಡಿಗೇರ, ಬಿ.ಪಿ.ಸುಂಕದ, ಎ. ಎಂ.ಜಮಖಂಡಿ, ಎಂ.ಆರ್. ಸುಲಧಾಳ, ಆರ್.ಎಸ್.ತಳೇವಾಡ, ಎಚ್.ಎಲ್. ಯರಗುದ್ರಿ, ಎಂ.ಎಸ್. ಹೂಗಾರ, ಎಂ.ಡಿ. ಯಾದವಾಡ, ಐ.ಎನ್. ಥೈಕಾರ, ಆರ್.ಸ್.ಅಕ್ಕಿ ಹಾಗೂ ಮಹಿಳಾ ಸಿಬ್ಬಂದಿಯ ತಂಡವನ್ನು ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ, ಡಿಸಿಪಿಗಳಾದ ಸೀಮಾ ಲಾಟ್ಕರ, ಯಶೋಧಾ ವಂಟಗೂಡೆ ಶ್ಲಾಘಿಸಿದ್ದಾರೆ.