ಬೆಳಗಾವಿ(ಫೆ.22): ಪತ್ನಿಯ ಅನೈತಿಕ ಸಂಬಂಧದಿಂದ ಪತಿ, ಪತ್ನಿಯಲ್ಲಿ ಉಂಟಾದ ವೈಮನಸ್ಸು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತನ್ನ ಪತಿಯನ್ನು ಹತ್ಯೆ ಮಾಡುವ ಮೂಲಕ ಅಂತ್ಯಕಂಡಿದೆ. ಈ ಕುರಿತು ಯೋಧನ ಸಹೋದರ ಉದಯ ಪಟ್ಟಣದಾರ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಯ ಮೊರೆ ಹೋಗಿರುವ ಘಟನೆ ನಡೆದಿದೆ. 

ತಾಲೂಕಿನ ಹೊನ್ನಿಹಾಳ ಗ್ರಾಮದ ಯೋಧ ದೀಪಕ ಪಟ್ಟಣದಾರ (32) ಹತ್ಯೆಗೀಡಾದ ವ್ಯಕ್ತಿ. ಯೋಧನ ಪತ್ನಿ ಅಂಜಲಿ, ಕಾರ್ ಡೈವರ್ ಪ್ರಶಾಂತ ಪಾಟೀಲ, ನವೀನ ಕೆಂಗೇರಿ ಹಾಗೂ ಪ್ರವೀಣ ಹುಡೇದ ಸೇರಿದಂತೆ ನಾಲ್ವರ ವಿರುದ್ಧ ಮೃತ ಯೋಧನ ಸಹೋದರ ದೂರು ದಾಖಲಿಸಿದ್ದಾನೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹತ್ಯೇಗೀಡಾದ ಸ್ಥಳ ಪರಿಶೀಲನೆ ನಡೆಸಿದ್ದು, ಕೊಲೆಗೀಡಾದ ದೀಪಕ ಶವದ ಮೂಳೆ ಸೇರಿದಂತೆ ಇನ್ನಿತರ ಸಾಕ್ಷ್ಯಗಳು ಪೊಲೀಸರಿಗೆ ದೊರೆತಿದ್ದು, ತನಿಕೆ ಚುರುಕು ಗೊಳಿಸಿದ್ದಾರೆಂದು ತಿಳಿದು ಬಂದಿದೆ. 

ಘಟನೆ ಹಿನ್ನೆಲೆ: 

ಕೊಲೆಗೀಡಾದ ಯೋಧ ದೀಪಕನ ಹೆಂಡತಿ ಅಂಜಲಿಗೂ ಹಾಗು ಕಾರ್ ಚಾಲಕ ಪ್ರಶಾಂತ ಪಾಟೀಲ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಅದು ಮನೆಯವರಿಗೆ ಗೊತ್ತಾಗಿದ್ದರಿಂದ ಇಬ್ಬರಲ್ಲಿ ವೈಮನಸ್ಸು ಉಂಟಾಗಿತ್ತು. ಇದರಿಂದಾಗಿ ಸಂಚು ರೂಪಿಸಿದ ನಾಲ್ಕು ಜನರು ದೀಪಕನಿಗೆ ಪಾರ್ಟಿ ಮಾಡುವ ನೆಪದಲ್ಲಿ ಕಂಠಪೂರ್ತಿ ಮಧ್ಯೆ ಕುಡಿಸಿ, ಗೋಕಾಕ ತಾಲೂಕಿನ ಗೋಡಚಿನ ಮಲ್ಕಿ ಬಳಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾರೆ. ಅಲ್ಲದೇ ಗುರುತು ಸಿಗದಂತೆ ದೇಹವನ್ನು ಮುಚ್ಚಿಹಾಕಿದ್ದಾರೆ. 

ಆದರೆ ಫೆ.4 ರಂದು ಮಾರಿಹಾಳ ಪೊಲೀಸ್ ಠಾಣೆಗೆ ತೆರಳಿದ ಯೋಧನ ಪತ್ನಿ ಅಂಜಲಿ, ಜನವರಿ 28 ರಂದು ಗೆಳೆಯರ ಜತೆ ಬೆಳಗಾವಿಗೆ ಹೋಗುತ್ತೇನೆ ಎಂದು ಹೋದ ತನ ಪತಿ ಮರಳಿ ಮನೆಗೆ ಬಂದಿಲ್ಲ. ಕಾಣೆಯಾದ ಗಂಡನ ನ್ನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಕೊಲೇಗೀಡಾದ ಯೋಧ ದೀಪಕ ಸಹೋದರ ಉದಯ ನನ್ನ ತಮ್ಮ ಕೊಲೆಯಾಗಿರುವ ಕುರಿತಂತೆ ಶಂಕೆ ವ್ಯಕ್ತಪಡಿಸಿ, ದೀಪಕನ ಹೆಂಡತಿ ಅಂಜಲಿ, ಆಕೆಯ ಕಾರು ಡ್ರೈವರ ಪ್ರಶಾಂತ ಪಾಟೀಲ ಮತ್ತು ಆತನ ಗೆಳೆಯರಾದ ನವೀನ ಕೆಂಗೇರಿ ಮತ್ತು ಪ್ರವೀಣ ಹುಡೇದ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾನೆ. 

ದೂರಿನಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುವ ದೀಪಕನ ಹೆಂಡತಿಗೂ ಮತ್ತು ಕಾರ್‌ ಡ್ರೈವರ್ ಪ್ರಶಾಂತ ಪಾಟೀಲಗೂ ಅನೈತಿಕ ಸಂಬಂಧವಿತ್ತು. ಅದು ಮನೆಯವರಿಗೆ ಗೊತ್ತಾಗಿದ್ದರಿಂದ ಇಬ್ಬರಲ್ಲಿ ವೈಮನಸ್ಸು ಉಂಟಾಗಿತ್ತು. ಜನವರಿ 28 ರಂದು ದೀಪಕನ ಹೆಂಡತಿ ಅಂಜಲಿ, ಕಾರ್ ಡ್ರೈವರ್ ಪ್ರಶಾಂತ ಪಾಟೀಲ ಮತ್ತು ಆತನ ಇನ್ನಿಬ್ಬರು ಗೆಳೆಯರು ದೀಪಕನನ್ನು ಪುಸಲಾಯಿಸಿ ಕರೆದೊಯ್ದು, ಗೊಡಚಿನಮಲ್ಕಿ ಬಳಿಯ ಅರಣ್ಯದಲ್ಲಿ ಆತನಿಗೆ ಮದ್ಯ ಕುಡಿಸಿ ಬಳಿಕ ಕೊಲೆ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದನು. ದೂರಿನಲ್ಲಿ ನಮೋದಿಸಿದ ವಿಷಯವನ್ನು ಕಂಡು ಅಕ್ಷರಶಃ ಬೆಚ್ಚಿ ಬಿಳಿಸಿದೆ. 

ಯೋಧನ ಸಹೋದರನು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಗೋಡಚೀನಮಲ್ಕಿಯಲ್ಲಿ ದೀಪಕನ ಶವ ಮುಚ್ಚಿ ಹಾಕಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದೇಹದ ಅವಶೇಷಗಳು ಪತ್ತೆಯಾಗಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ ಎಂದು ತಿಳಿದು ಬಂದಿದೆ.