Asianet Suvarna News Asianet Suvarna News

ಕರ್ನಾಟಕದಲ್ಲಿ ನಿತ್ಯಾನಂದನ ಬಳಿಕ ಬಂದ ಸತ್ಯಾನಂದ ಸ್ವಾಮೀಜಿ: ಈ ಕಾಮುಕನ ಬಗ್ಗೆ ಹೆಣ್ಮಕ್ಳು ಹುಷಾರಾಗಿರಿ..!

ಉತ್ತರಕನ್ನಡ ಜಿಲ್ಲೆಯಲ್ಲಿದ್ದಾನೆ ಜನರನ್ನು ಮೋಸ ಮಾಡುವ ಕಳ್ಳ ಸ್ವಾಮೀಜಿ

Women Be careful about Sathyanand Swamiji in Uttara Kannada grg
Author
Bengaluru, First Published Jul 30, 2022, 9:06 AM IST

ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಜು.30): ಜನರ ಸಂಕಷ್ಟಗಳನ್ನೇ ಬಂಡವಾಳ ಮಾಡಿಕೊಳ್ಳೋ ಸಾಕಷ್ಟು ಡೋಂಗಿ ಸ್ವಾಮೀಜಿಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಥೇಟ್ ಬಿಡದಿ ನಿತ್ಯಾನಂದನ ಲುಕ್, ಆತನಂತೆ ಮಾತಿನ ದಾಟಿಯನ್ನು ಪಾಲಿಸುತ್ತಾ ಸಾಮಾಜಿಕ‌ ಜಾಲತಾಣಗಳ ಮೂಲಕ ಜನರನ್ನು ಸಂಪರ್ಕಿಸಿ ಅವರನ್ನು ಮರಳು ಮಾಡೋ ಕಳ್ಳ ಸ್ವಾಮೀಜಿ ಉತ್ತರಕನ್ನಡ ಜಿಲ್ಲೆಯಲ್ಲಿದ್ದಾನೆ. ಇತ್ತೀಚೆಗಷ್ಟೇ ಹಿಂದೂ ಸಂಘಟನೆಗಳು ಆತನಿಗೆ ಗೂಸಾ ಕೊಟ್ಟು, ಎಚ್ಚರಿಕೆ ನೀಡಿ‌ ಆತನ ಅಸಲೀ ಮುಖವನ್ನು ಬಯಲಿಗೆ ಎಳೆದಿದ್ದಾರೆ. ಅಷ್ಟಕ್ಕೂ ಆ ಕಳ್ಳ ಸ್ವಾಮೀಜಿ ಯಾರು? ಆತ ಮಾಡುತ್ತಿದ್ದದ್ದಾದ್ರೂ ಏನು? ಅಂತೀರಾ... ಈ ಸ್ಟೋರಿ ನೋಡಿ...

ಮಹಾನ್ ರಸಿಕ‌, ಕಳ್ಳ ಸ್ವಾಮೀಜಿ ಬಿಡದಿ ನಿತ್ಯಾನಂದನಂತೆ ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ಡೋಂಗಿ ಸ್ವಾಮೀಜಿಯೊಬ್ಬ ಉದ್ಭವವಾಗಿ ಬಿಟ್ಟಿದ್ದಾನೆ. ಅಂಕೋಲಾ ತಾಲೂಕಿನ ಅಚಿವೆ ಗ್ರಾಮ ಪಂಚಾಯತ್‌ನ ಬೋರಳ್ಳಿಯಲ್ಲಿರುವ ಈತ ತಾನು ಸ್ವಾಮೀಜಿ, ಜ್ಯೋತಿಷಿ ಎಂದು ಕಾವಿ ಧರಿಸಿ ಥೇಟ್ ನಿತ್ಯಾನಂದನಂತೆ ಅನುಕರಣೆ ಮಾಡುತ್ತಾನೆ. 

ಹೃದಯ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾದ ಪದವಿ ವಿದ್ಯಾರ್ಥಿನಿಗೆ ಬೇಕಿದೆ ದಾನಿಗಳ ನೆರವು!

ಅಂದಹಾಗೆ, ಈತನ ಹೆಸರು ಸತ್ಯಾನಂದ ಅಲಿಯಾಸ್ ಶೇಖರ ಸ್ವಾಮೀಜಿ. ಈತನಿಗೆ ಮಹಿಳೆಯರು ಅಂದ್ರೆ ಅತೀವ ಪ್ರೀತಿಯಾಗಿದ್ದರಿಂದ ಈ ಹಿಂದೆ ಓರ್ವ ಮಹಿಳೆಯನ್ನು ಅತ್ಯಾಚಾರ ಮಾಡಲು ಹೋಗಿ ಜೈಲಿನ ಕಂಬಿ ಎಣಿಸಿ ಬೇಲ್ ಮೂಲಕ ಹೊರಬಂದಿದ್ದಾನೆ. ಆದರೂ, ತನ್ನ ಚಾಳಿ ಮುಂದುವರೆಸಿರುವ ಈತ ಸತ್ಯಾನಂದ ಪರಮಶಿವ ಎಂಬ ಫೇಸ್ ಬುಕ್ ಅಕೌಂಟ್ ಮಾಡಿಕೊಂಡು ಪ್ರತೀ ದಿನ ಧಾರ್ಮಿಕ ವಿಚಾರವಾಗಿ ದಿನಗಟ್ಟಲೇ ಪ್ರವಚನ ನೀಡುತಿದ್ದ. ಇಷ್ಟು ಸಾಲದು ಎನ್ನುವಂತೆ ಹಿಂದೂ ದೇವರು, ಧರ್ಮ ಹಾಗೂ ಧಾರ್ಮಿಕ ಕೇಂದ್ರಗಳ ಬಗ್ಗೆ ಅವಹೇಳನ ಮಾಡುವುದು, ತಾನೇ ದೇವರೆಂದು ಹೇಳುವ ಮೂಲಕ ಜನರಿಗೆ ಮಂಕುಬೂದಿ ಎರಚಲು ಪ್ರಯತ್ನಿಸುತ್ತಿದ್ದ.

ಫೇಸ್‌ಬುಕ್ ಮೂಲಕ ಮಂಗಳೂರು, ಬೆಂಗಳೂರು ಮೂಲದ ಮುಗ್ಧ ಮಹಿಳೆಯರನ್ನು ತನ್ನ ನಯವಾದ ಮಾತಿನಿಂದ ಆಕರ್ಷಿಸಿ ಹಣ ಪೀಕುವುದಲ್ಲದೇ, ದೇವಿಯ ದರ್ಶನ ಮಾಡಿಸುತ್ತೇನೆ ತನ್ನ ಆಶ್ರಮಕ್ಕೆ ಬನ್ನಿ ಎಂದು ಕರೆಸಿಕೊಳ್ಳುತಿದ್ದ. ಹೀಗೆ ಮಂಗಳೂರಿನ ಮಹಿಳೆಯೋರ್ವರನ್ನು ಕರೆಯಿಸಿ ದೇವರನ್ನು ತೋರಿಸಲು ಹೋಗಿ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಗೂಸಾ ತಿಂದು ಕ್ಷಮಾಪಣೆ ಕೇಳಿ ಕಾವಿಯನ್ನು ಕಳಚಿದ್ದ. ಅಲ್ಲದೇ, ತಾನು ತಪ್ಪು ಮಾಡಿದ್ದು, ಮತ್ತೆ ಇದನ್ನು ಅನುಸರಿಸುವುದಿಲ್ಲ ಎಂದು ಮುಚ್ಚಳಿಕೆ ಕೂಡಾ ಬರೆದು ಗ್ರಾಮ ಪಂಚಾಯತ್‌ಗೆ ಕಳುಹಿಸಿದ್ದ. ಆದರೆ, ಮತ್ತೆ ಸ್ವಾಮೀಜಿಯಂತೆ ಪೋಸ್ ಕೊಟ್ಟು ಅಲ್ಲಲ್ಲಿ ತಿರುಗಾಡುತ್ತಾ ಮಾನಸಿಕನಂತೆ ವರ್ತಿಸುತ್ತಾನೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಅಂದಹಾಗೆ, ಈ ಕಳ್ಳ ಸ್ವಾಮೀಜಿಯ ನಿಜವಾದ ಹೆಸರು ಶೇಖರ್ ಸಣ್ತಮ್ಮ ಪಟಗಾರ್. ಅಚಿವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರಳ್ಳಿ ಗ್ರಾಮದಲ್ಲಿ ಆಟೋ ಚಲಾಯಿಸಿಕೊಂಡು ಉಳಿದ ಸಮಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಸಾಧಾರಣ ಮನೆ ಮಾಡಿಕೊಂಡಿದ್ದ ಈತನಿಗೆ ಒಂದು ಎಕರೆ ಅಡಿಕೆ ತೋಟ ಬೇರೆಯಿದೆ. ಆದರೆ, ಕಳೆದೆರಡು ವರ್ಷಗಳಿಂದ ಅದೇನಾಯ್ತೋ ಏನೋ ನನ್ನ ಮೈ ಮೇಲೆ ದೇವಿ ಬರುತ್ತಾಳೆ, ನಾನು ನಿತ್ಯಾನಂದನ ಸ್ವರೂಪಿ ಅಂತಾ ಕಾವಿ, ರುದ್ರಾಕ್ಷಿ ತೊಟ್ಟು ಸ್ವಯಂ ಘೋಷಿತ ಸ್ವಾಮೀಜಿ ಆಗಿದ್ದಾನೆ. 

ಪ್ರವೀಣ್ ಹತ್ಯೆ ಖಂಡಿಸಿ ಯುವ ಮೋರ್ಚಾ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅದ್ರಲ್ಲಿ ವಿಡಿಯೋ ಹರಿಯ ಬಿಟ್ಟು ಜನರನ್ನು ಹಣಕ್ಕಾಗಿ ಮರಳು ಮಾಡುತ್ತಿದ್ದ ಈತನಿಗೆ ಸಾಕಷ್ಟು ಜನರು ಫಾಲೋವರ್ಸ್ ಕೂಡಾ ಇದ್ದಾರೆ. ತನ್ನ ಮನೆಯನ್ನೇ ಆಶ್ರಮ ಮಾಡಿಕೊಂಡು ಅಲ್ಲಿಗೆ ತನ್ನ ಅನುಯಾಯಿಗಳನ್ನು ಕರೆಸಿಕೊಂಡು ಜ್ಯೋತಿಷ್ಯ, ವಾಸ್ತು, ಧರ್ಮ ಭೋದನೆ ಎಂದು ಪುಂಗಿ ಬಿಟ್ಟು ಹಣ ಪೀಕುತಿದ್ದ. ಯಾವಾಗ ಈತನಿಗೆ ಮಹಿಳೆಯರ ಚಪಲ ಹೆಚ್ಚಾಯ್ತೋ ಆಗ ಈತನ ಅಸಲೀ ಮುಖ ಆತನ ಅನುಯಾಯಿಗಳಿಗೆ ನಿಧಾನವಾಗಿ ತಿಳಿಯಲು ಪ್ರಾರಂಭವಾಯ್ತು. ಇನ್ನು ಅಚಿವೆ ಗ್ರಾಮಪಂಚಾಯತ್ ಸದಸ್ಯರು ಕೂಡಾ ಈತನನ್ನು ಹುಡುಕಿಕೊಂಡು ಬರುವ ಜನರಿಗೆ ಈ ಕಳ್ಳ ಮಾಡೋ ಮೋಸದ ಬಗ್ಗೆ ಮಾಹಿತಿ ನೀಡುವುದಲ್ಲದೇ, ತಈ ಕಳ್ಳ ಶೇಖರನಿಗೂ ಬುದ್ಧಿ ಹೇಳಿ ಇವೆಲ್ಲವನ್ನು ಬಿಡುವಂತೆ ಹೇಳಿದ್ದರು. ಆತನ ಮಾನ ಮರ್ಯಾದೆ ಬೀದಿ ಪಾಲಾಗಿದ್ರೂ, ಯಾವುದಕ್ಕೂ ಕಿವಿ ಕೊಡದೇ ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ ಅನ್ನೋ ಆರೋಪಗಳು ಕೇಳಿ ಬಂದಿದೆ. ವಂಚನೆ ಮಾಡೋ ಕೆಲಸವನ್ನು ಮುಂದುವರೆಸಿರುವ ಈತನನ್ನು ಹುಡುಕಿಕೊಂಡು ಮಾಧ್ಯಮಗಳು ಸ್ಥಳಕ್ಕೆ ತೆರಳಿದಾಗ ಈ‌ ಕಳ್ಳ ಸ್ವಾಮೀಜಿ ತನ್ನ ಆಶ್ರಮಕ್ಕೆ ಬೀಗ ಹಾಕಿ ಓಡಿಹೋಗಿದ್ದಾನೆ.

ಒಟ್ಟಿನಲ್ಲಿ ಸ್ವಯಂ ಘೋಷಿತ ಸ್ವಾಮಿ ಶೇಖರನಿಗೆ ಹಿಂದೂ ಸಂಘಟನೆ ಎಚ್ಚರಿಕೆ ನೀಡಿದ್ದ ಬಳಿಕ ಕಾವಿ, ರುದ್ರಾಕ್ಷಿ ಬಿಚ್ಚಿ ನಾನು ಇನ್ನ ಮೇಲೆ ಕಾವಿ ತೊಡುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಹರಿ ಬಿಟ್ಟಿದ್ದ. ಆದರೆ, ಇದೀಗ ಮತ್ತೆ ಅಲ್ಲಲ್ಲಿ ತಿರುಗಾಡಿಕೊಂಡು ಈತ ತನ್ನ ಬಾಲ‌ ಬಿಚ್ಚಿದ್ದು, ಜನರು ಇಂತಹ ಮೋಸಗಳಿಗೆ ಬಲಿಯಾಗದೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಿದೆ ಎಂಬುದು ನಮ್ಮ ಆಶಯ.
 

Follow Us:
Download App:
  • android
  • ios