Davanagere: ಹೊನ್ನಾಳಿ ಶಾಸಕ ರೇಣುಕಾಚಾರ್ಯರಿಗೆ ಗೃಹ ಕಂಟಕ: ಎಂಎಲ್ಎಗೆ ವಂಚಿತರಿಂದ ಹಿಡಿಶಾಪ
ಕೊರೊನಾ ಕಾಲದಲ್ಲಿ ಹಗಲು ರಾತ್ರಿ ಎನ್ನದೇ ಓಡಾಡಿ ಕೋವಿಡ್ ಸೋಂಕಿತರ ಸೇವೆ ಮಾಡಿದ್ದ ರೇಣುಕಾಚಾರ್ಯ ಇದೀಗ ಹೊಸದೊಂದು ವಿವಾದ ಕೊರಳಿಗೆ ಸುತ್ತಿಕೊಂಡಿದೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಮೇ.12): ವಿವಾದಕ್ಕೂ ಶಾಸಕ ಎಂಪಿ ರೇಣುಕಾಚಾರ್ಯಗೆ (MP Renukacharya) ಯಾವಾಗಲೂ ಒಂದು ರೀತಿಯಲ್ಲಿ ಎಣ್ಣೆ ಸೀಗೆಕಾಯಿ ಸಂಬಂಧ. ವಿವಾದ ಇಲ್ಲದೇ ಅವರು ಇರುವುದೇ ಕಷ್ಟ. ಕೊರೊನಾ (Corona) ಕಾಲದಲ್ಲಿ ಹಗಲು ರಾತ್ರಿ ಎನ್ನದೇ ಓಡಾಡಿ ಕೋವಿಡ್ ಸೋಂಕಿತರ ಸೇವೆ ಮಾಡಿದ್ದ ರೇಣುಕಾಚಾರ್ಯ ಇದೀಗ ಹೊಸದೊಂದು ವಿವಾದ ಕೊರಳಿಗೆ ಸುತ್ತಿಕೊಂಡಿದೆ. ಹೊನ್ನಾಳಿ ಪಟ್ಟಣದಲ್ಲಿ ಪಂಚ ಕಮಲ (Pancha Kamala) ಎಂಬ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಮನೆ (House) ನಿರ್ಮಾಣ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. 38 ಗುಂಟೆ ಅಂದ್ರೆ ಹೆಚ್ಚು ಕಮ್ಮಿ ಒಂದು ಎಕರೆ ಪ್ರದೇಶದಲ್ಲಿ ಮನೆ ಕಟ್ಟಿತ್ತಿದ್ದಾರೆ. ಈ ಮನೆ ನಿವೇಶನವನ್ನು ಶಾಸಕ ರೇಣುಕಾಚಾರ್ಯ ಅಧಿಕಾರದ ಪ್ರಭಾವ ಬಳಸಿ ಅಕ್ರಮವಾಗಿ (Illegal) ಖರೀದಿಸಿದ್ದಾರೆ ಎಂದು ಮೂಲ ವಾರಸುದಾರರು ಆರೋಪಿಸಿದ್ದಾರೆ. ನಮಗೆ ನ್ಯಾಯ ಬೇಕೆಂದು ಇದೀಗ ಹೊನ್ನಾಳಿ ತಹಶೀಲ್ದಾರ್ ಕಚೇರಿ ಮುಂದೆ ಮೂಲ ನಿವೇಶನದಾರರು ಪ್ರತಿಭಟನೆ (Protest) ನಡೆಸಿದ್ದಾರೆ.
ರೇಣುಕಾಚಾರ್ಯ ಕಟ್ಟುತ್ತಿರುವ ಹೊಸ ಮನೆ ಪಂಚ ಕಮಲ ಬಂಗ್ಲೋ: ಹೊನ್ನಾಳಿ ನ್ಯಾಮತಿ ರಸ್ತೆಯಲ್ಲಿ ಸರ್ವೇ ನಂಬರ್ 14 ರಲ್ಲಿ ಶಾಸಕ ರೇಣುಕಾರ್ಯರ ಹೊಸ ಮನೆ ನಿರ್ಮಾಣವಾಗುತ್ತಿದೆ. ಅದನ್ನು ಮನೆ ಅನ್ನೋದಿಕ್ಕಿಂತ ಬಂಗ್ಲೋ ಎಂದ್ರೆ ಸೂಕ್ತ ಎನಿಸುವಷ್ಟರ ಮಟ್ಟಿಗೆ ಗಜಗಾತ್ರ ಹೊಂದಿದೆ. ಈ ನಿರ್ಮಾಣ ಹಂತದಲ್ಲಿರುವ ಭವ್ಯ ಬಂಗ್ಲೋ ನಿವೇಶನ ನಮ್ಮ ಪಿತ್ರಾರ್ಜಿತ ಆಸ್ತಿ ಎಂದು ವನಜಾಕ್ಷಮ್ಮ, ಪ್ರತಿಭಾ ಗೀತಾ ಎಂಬುವರು ಹೋರಾಟ ನಡೆಸಿದ್ದಾರೆ. ಅವರ ಕುಟುಂಬವನ್ನು ಕರೆದುಕೊಂಡು ಬಂದು ತಾಲ್ಲೂಕು ಕಚೇರಿ ಮುಂದೆ ನ್ಯಾಯ ಕೊಡಿ ಎಂದು ಪ್ರತಿಭಟನೆ ನಡೆಸಿದ್ದಾರೆ.
PSI Recruitment Scam: ದಾಖಲೆ ಬಿಡುಗಡೆ ಮಾಡಲು ಕುಮಾರಸ್ವಾಮಿಗೆ ಸವಾಲು ಹಾಕಿದ ಶಾಸಕ ರೇಣುಕಾಚಾರ್ಯ
ಭವ್ಯ ಬಂಗಲೆ ಹೆಸರು ಪಂಚ ಕಮಲ. ಪಂಚ ಅಂದ್ರೆ ಅವರ ತಂದೆ ಪಂಚಾಕ್ಷರಯ್ಯ ಇರಬೇಕು. ಕಮಲ ಅಂದ್ರೆ ಬಿಜೆಪಿ ಎಂಬ ಅರ್ಥವು ಇದೆ. ಮೂಲಗಳ ಪ್ರಕಾರ 30 ಗುಂಟೆಗೆ 60 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಜೊತೆಗೆ ಈಗ ಸುತ್ತಲಿನ ಒಟ್ಟು ಐದು ಎಕರೆ ಐದು ಗುಂಟೆ ಜಮೀನು ಸಹ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಅದಕ್ಕೆ ಸೂಕ್ತ ದಾಖಲೆಗಳು ಕೂಡ ಇವೆ. ರೇಣುಕಾಚಾರ್ಯ ವಿರುದ್ಧ ದೊಡ್ಡ ಕೆಂಚಮ್ಮ, ಗೀತಾ, ವನಜಾಕ್ಷಮ್ಮ ಹಾಗೂ ಪ್ರತಿಭಾ ನಾಲ್ವರು ನಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಮನೆ ಕಟ್ಟುತ್ತಿದ್ದಾರೆ ಎಂದು ಹೋರಾಟ ನಡೆಸಿದ್ದಾರೆ.
ಮೂಲ ಆಸ್ತಿಯ ಇತಿಹಾಸ: ಈ ಜಮೀನು ಹೊನ್ನಾಳಿ ನಿವಾಸಿ ದಿವಂಗತ ಸಿದ್ದಪ್ಪ ಎಂಬುವರಿಗೆ ಅವರ ತಂದೆಯಿಂದ ಬಂದ ಆಸ್ತಿ. ಸಿದ್ದಪ್ಪನಿಗೆ ದ್ಯಾಮಮ್ಮ, ದೊಡ್ಡ ಕೆಂಚಮ್ಮ ಹಾಗೂ ಸಣ್ಣ ಕೆಂಚಮ್ಮ ಎಂಬ ಮೂರು ಜನ ಹೆಂಡತಿಯರು. ಮೊದಲ ಹೆಂಡತಿಗೆ ಮಕ್ಕಳಿಲ್ಲ. ಹೀಗೆ ಎರಡು ಮತ್ತು ಮೂರನೇ ಹೆಂಡತಿಯರು ಒಟ್ಟು ಐದು ಜನ ಮಕ್ಕಳು. 1992ರಲ್ಲಿ ಒಟ್ಟು ಆಸ್ತಿ ಹಿರಿಹೆಂಡತಿಗೆ ಒಂದು ಭಾಗ. ಮೊಮ್ಮಕ್ಕಳಿಗೆ 1/6 ಹೀಗೆ ಐದು ಭಾಗ ಆಗಿತ್ತು. ಇದೇ ಪ್ರಕಾರ ಇವರು ಸೈಟ್ ಮಾಡಿಕೊಂಡು ಅವರೆಲ್ಲರು ಇ - ಸೊತ್ತು ಸಹ ಮಾಡಿಕೊಂಡಿದ್ದರು. ಆದ್ರೆ ಈಗ ಆ ನಿವೇಶನದಲ್ಲಿ ರೇಣುಕಾಚಾರ್ಯ ಅವರ ಹೆಸರಿಗೆ ಬದಲಾಗಿದೆ.
ಸಿದ್ದಪ್ಪನವರ ಮೂರನೇ ಪತ್ನಿ ಸಣ್ಣ ಕೆಂಚಮ್ಮನ ಹೆಸರಿನಿಂದ ಬೇರೆ ವ್ಯಕ್ತಿ ಸರಸ್ವತಿ ಎಂಬುವರ ಹೆಸರಿಗೆ ಜಮೀನು ಮಾಡಿ, ನಂತರ ರಾಘವೇಂದ್ರ ಶೆಟ್ಟಿಹಳ್ಳಿ ಎಂಬುವರ ಹೆಸರಿಗೆ ರಿಜಿಸ್ಟರ್ ಮಾಡಿ ಅವರಿಂದ ಶಾಸಕ ರೇಣುಕಾಚಾರ್ಯ ಖರೀದಿ ಮಾಡಿದ್ದಾರೆ ಎಂದು ದಾಖಲೆ ಸೃಷ್ಠಿಸಿದ್ದಾರೆ. ಇದಕ್ಕೆ ಹೊನ್ನಾಳಿ ತಹಶೀಲ್ದಾರ ಆಗಿದ್ದ ಬಸನಗೌಡ ಕೊಟ್ಟೂರ ಸಹಕಾರ ನೀಡಿದ್ದಾರೆ ಎಂಬುದು ಮಹಿಳೆಯರ ಆರೋಪ. ಇ ಸ್ವತ್ತು ಆರ್ ಟಿ ಸಿ ನಮ್ಮ ಕುಟುಂಬದವರ ಹೆಸರಿಗಿದ್ದು ನಮ್ಮ ಕುಟುಂಬದವರ ಸಹಿ ಇಲ್ಲದೇ ನಿವೇಶನ ರಿಜಿಸ್ಟರ್ ಆಗಿದ್ದು ಹೇಗೆ? ಅಲಿನೇಷನ್ ಆಗಿದ್ದು ಹೇಗೆ ಎಂದು ಮಹಿಳೆಯರು ಪ್ರಶ್ನಿಸಿದ್ದಾರೆ. ಕೊರೊನಾ ಕಾಲದಲ್ಲಿ ರಾಜ್ಯದ ಗಮನ ಸೆಳೆಯುವ ಕಾರ್ಯ ಮಾಡಿದ್ದ ರೇಣುಕಾಚಾರ್ಯ ಆದೇ ಸಮಯ ಬಳಸಿಕೊಂಡು ಈ ಮಹಿಳೆಯಗೆ ವಂಚನೆ ಮಾಡಿದ್ದಾರೆ ಎಂಬ ಆರೋಪವು ಮಹಿಳೆಯರಾದ ವನಜಾಕ್ಷಮ್ಮ, ಪ್ರತಿಭಾರಿಂದ ವ್ಯಕ್ತವಾಗಿದೆ.
ರೇಣುಕಾಚಾರ್ಯರು ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ವಿಚಾರ ಗೊತ್ತಾಗಿ ಸಿದ್ದಪ್ಪನ ಮಕ್ಕಳು ಕೋರ್ಟ ಮೊರೆ ಹೋಗಿದ್ದಾರೆ. ಆಗ ಕೊರೊನಾ ಬಂದು ಲಾಕ್ ಡೌನ್ ಆಗಿದೆ. ಕೋರ್ಟ್ ಕಲಾಪಗಳು ನಡೆದಿಲ್ಲ ತಡೆಯಾಜ್ಞೆ ಸಿಕ್ಕಿಲ್ಲ. ಕೊರೊನೊ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಬುದ್ದಿವಂತಿಕೆ ಮಾಡಿ ಮನೆ ನಿರ್ಮಿಸಿ ಬಿಟ್ಟಿದ್ದಾರೆ ರೇಣುಕಾಚಾರ್ಯ. ಸೈಟ್ ಮಾಡಿಕೊಂಡು ಮಕ್ಕಳ ಜೀವನ ರೂಪಿಸಲು ಯೋಜನೆ ರೂಪಿಸಿಕೊಂಡಿದ್ದ ಅಸಹಾಯಕ ಮಹಿಳೆಯರು ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಜೊತೆಗೆ ಕೋರ್ಟ ಗೆ ಅಲೆದಾಡುತ್ತಿದ್ದಾರೆ.
Madrasa Row: ಮತ್ತೊಮ್ಮೆ ಮದರಸಗಳ ಬಗ್ಗೆ ಮಾತನಾಡಿದ ರೇಣುಕಾಚಾರ್ಯ
ಕೋರ್ಟ್‌ನಲ್ಲಿ ಡಿಕ್ರಿಯಾದ ಜಮೀನನ್ನು ಕಾನೂನು ಬದ್ದವಾಗಿ ಖರೀದಿ ಮಾಡಿದ್ದೇನೆ ಎಂದ ರೇಣುಕಾಚಾರ್ಯ: ಈ ಬಗ್ಗೆ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿ ಈ ನಿವೇಶನ ಸ್ವತ್ತಿನ ವಿಚಾರ ಕೋರ್ಟ್‌ನಲ್ಲಿತ್ತು. ಸರಸ್ವತಿ ಗಂಡ ರಮೇಶ್ ಅವರಿಗೆ ಕೋರ್ಟ್ ನಲ್ಲೇ ಡಿಕ್ರಿಯಾಗಿದೆ.ಅವರಿಂದ ನಾನು 60 ಲಕ್ಷಕ್ಕೆ ಖರೀದಿ ಮಾಡಿದ್ದೇನೆ. ನಾನು ಕಾನೂನು ಬದ್ದವಾಗಿ ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ಇದರ ಮೂಲ ವಾರಸುದಾರರ ಬಗ್ಗೆ ನನಗೆ ಮಾಹಿತಿ ಇಲ್ಲ ಅವರ ಪ್ರತಿಭಟನೆಯು ನನಗೆ ಗೊತ್ತಿಲ್ಲ. ಇದರ ಹಿಂದೆ ರಾಜಕೀಯ ಪಿತೂರಿಯು ಇರಬಹುದು. ಬೇಡ ಜಂಗಮ ಜಾತಿ ಪ್ರಮಾಣ ಪತ್ರದ ವಿಚಾರ ನಂತರ, ಇದೀಗ ಮನೆ ವಿಚಾರ ಇಟ್ಟುಕೊಂಡು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎನ್ನುತ್ತಾರೆ ರೇಣುಕಾಚಾರ್ಯ.
ಸ್ಥಳೀಯ ಅಧಿಕಾರಿಗಳ ಬುಟ್ಟಿಗೆ ಹಾಕಿಕೊಂಡು ಬಡವರ ಜಮೀನು ಕಬಳಿಸಿಕೊಂಡಿರುವ ರೇಣುಕಾಚಾರ್ಯರ ಮೇಲೆ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ವೇದಿಕೆ ಮೇಲೆ ನಾನೊಬ್ಬ ಸಾಮಾನ್ಯ ಶಿಕ್ಷಕನ ಮಗ, ಜನರ ಸೇವಕ, ನನ್ನ ಮತ ಕ್ಷೇತ್ರದವರು ದೇವರು ಎಂದು ಹೇಳುವ ರೇಣುಕಾರ್ಯ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮನೆ ಕಟ್ಟಲು ಆಯ್ಕೆ ಮಾಡಿಕೊಂಡ ಜಮೀನು ಈಗ ವಿವಾದಕ್ಕೆ ಗುರಿಯಾಗಿದೆ. ಪಂಚ ಕಮಲ ಕಟ್ಟಿ ಹೊನ್ನಾಳಿಯಲ್ಲಿ ಸಾಮ್ರಾಜ್ಯ ಸ್ಥಾಪನೆಗೆ ಮುಂದಾಗಿದ್ದ ರೇಣುಕಾಚಾರ್ಯಗೆ ಗೃಹ ಕಂಟಕ ಬಿಂಬಿಡದೇ ಕಾಡುತ್ತಿದೆ.