ಆಲಮಟ್ಟಿ (ಸೆ.11): ಆಳವಾಗಿದ್ದ ಕಾಲುವೆ ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಮಹಿಳೆಯೊಬ್ಬಳು ತಾನು ಉಟ್ಟಿದ್ದ ಸೀರೆಯನ್ನೇ ಬಿಚ್ಚಿಕೊಟ್ಟಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. 

ಕಾಲುವೆಯ ಬಳಿ ಕುಳಿತಿದ್ದ ಅರವಿಂದ (6) ಎಂಬ ಬಾಲಕ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು, ರಕ್ಷಿಸುವಂತೆ ಒದ್ದಾಡುತ್ತಿದ್ದ. ಈ ವೇಳೆ ತಕ್ಷಣ ರಕ್ಷಣೆಗೆ ಓಡಿ ಬಂದ ಮಹಿಳೆಯೊಬ್ಬಳು ಬಾಲಕನ್ನು ಕಾಪಾಡುವಂತೆ ಜೋರಾಗಿ ಕೂಗಿಕೊಂಡಿದ್ದಾರೆ. ವ್ಯಕ್ತಿಯೊಬ್ಬ​ರು ನೀರಿಗೆ ಜಿಗಿದು ರಕ್ಷಿ​ಸ​ಲು ಯತ್ನಿಸಿದ್ದಾರೆ. 

ಆದರೆ, ಕಾಲುವೆ ಆಳವಾಗಿದ್ದರಿಂದ ದಡದ ಮೇಲಿದ್ದ ಮಹಿಳೆ ತಾನು ಉಟ್ಟಿದ್ದ ಸೀರೆಯನ್ನು ಬಿಚ್ಚಿ ಶಿಕ್ಷಕನಿಗೆ ನೀಡಿದ್ದಾರೆ. ನಂತರ ಶಿಕ್ಷಕ ಬಾಲಕನಿಗೆ ಸೀರೆಯ ಒಂದು ತುದಿಯನ್ನು ತಾನು ಹಿಡಿದುಕೊಂಡು ಮತ್ತೊಂದು ತುದಿಯನ್ನು ಬಾಲಕನಿಗೆ ಎಸೆದಿದ್ದಾನೆ. ಬಾಲಕ ಸೀರೆಯನ್ನು ಹಿಡಿದುಕೊಂಡು ದಡ ಸೇರಿದ್ದಾನೆ.

ಕಾಲುವೆಗೆ ಬಿದ್ದಿದ್ದರಿಂದ ಬಾಲಕ ನೀರು ಕುಡಿದಿದ್ದ. ನಂತರ ಬಾಲಕನ ದೇಹವನ್ನು ಒತ್ತಿ ಆತ ಕುಡಿದಿದ್ದ ನೀರನ್ನು ಹೊರಗೆ ತೆಗೆಯಲಾಯಿತು. ನಂತರ ಆತ ಸುರಕ್ಷಿತವಾಗಿ ಮನೆ ಸೇರಿದ. ಈ ವೇಳೆ ಶಿಕ್ಷಕ ಹಾಗೂ ಆ ಮಹಿಳೆಯ ಈ ರಕ್ಷಣಾ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು.