ವಿಜಯಪುರ(ಜ.04): ಬಣ್ಣದ ಮಾತಿಗೆ ಮರುಳಾಗಿ ಮೂರು ಮಕ್ಕಳು ಹಾಗೂ ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿದ್ದ ಮಹಿಳೆಯೊಬ್ಬಳು ಮೋಸ ಹೋದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ನಡೆದಿದೆ. ಸುಮಾರು 7 ತಿಂಗಳು ಪುಣೆಯಲ್ಲಿ ಮಹಿಳೆಯನ್ನ ದೈಹಿಕವಾಗಿ ಬಳಸಿಕೊಂಡ ಯುವಕ ಇದೀಗ ನಾಪತ್ತೆಯಾಗಿದ್ದಾನೆ. 

ಏನಿದು ಪ್ರಕರಣ? 

ಮೂರು ಮಕ್ಕಳು ಹಾಗೂ ಗಂಡನ ಜತೆ ಸುಖ ಸಂಸಾರ ನಡೆಸುತ್ತಿದ್ದ ಯಲ್ಲಮ್ಮ ಇದೆ ಗ್ರಾಮದ ಪ್ರಭು ಚಲವಾದಿ ಎಂಬುವನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಆರೋಪಿ ಪ್ರಭು ಚಲವಾದಿಯ ಬಣ್ಣ ಬಣ್ಣದ ಮಾತು ಕೇಳಿದ ಯಲ್ಲಮ್ಮ ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಪುಣೆಗೆ ಓಡಿ ಹೋಗಿದ್ದಳು. 

ಸುಮಾರು 7 ತಿಂಗಳು ಪುಣೆಯಲ್ಲಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ಈ ಜೋಡಿ ಇತ್ತೀಚೆಗೆ ಮರಳಿ ಮಡಿಕೇಶ್ವರ ಗ್ರಾಮಕ್ಕೆ ಬಂದಿದ್ದರು. ಆದರೆ, ಇದೀಗ ಯಲ್ಲಮ್ಮಳನ್ನು ಬಿಟ್ಟು ಪ್ರಭು ಚಲವಾದಿ ಪರಾರಿಯಾಗಿದ್ದಾನೆ. ಇದರಿಂದ ಕಂಗಾಲಾದ ಯಲ್ಲಮ್ಮ ಪ್ರಭು ಚಲವಾದಿ ಮನೆಯ ಎದುರು ಮಕ್ಕಳ ಸಮೇತ ಧರಣಿ ನಡೆಸುತ್ತಿದ್ದಾಳೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಿಯಕರನ ಜೊತೆ ಓಡಿ ಹೋಗಿದ್ದ ಯಲ್ಲಮ್ಮಳನ್ನ ಗಂಡ ಕೂಡ ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ಹೀಗಾಗಿ ಪ್ರಿಯಕರನ ಮನೆ ಮುಂದೆ ಬಂದು ಕುಳಿತ ಮೂರು ಮಕ್ಕಳ ತಾಯಿ ಯಲ್ಲಮ್ಮ ಕಣ್ಣೀರು ಹಾಕುತ್ತಿದ್ದಾಳೆ. ಕಳೆದ‌‌ ಎರಡು ದಿನಗಳಿಂದ ಪ್ರಿಯಕರನ ಮನೆ ಎದುರು ಕುಳಿತು ಧರಣಿ ನಡೆಸುತ್ತಿದ್ದಾಳೆ. 

ಈ ಸಂಬಂಧ ಯಲ್ಲಮ್ಮ ಶುಕ್ರವಾರ ತಾಳಿಕೋಟಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೂ ಯಾವುದೇ  ಪ್ರಯೋಜನವಾಗಿಲ್ಲ, ಹೀಗಾಗಿ ಯಲ್ಲಮ್ಮಗೆ ನ್ಯಾಯ ದೊರಕಿಸಿ ಕೊಡಲು ಡಿಎಸ್ಎಸ್ ಸಂಘಟ‌ನೆಗಳು ಸಾಥ್ ನೀಡಿವೆ. ಆಕೆ ಪ್ರಿಯಕರ ಪ್ರಭು ಮನೆಗೆ ಸೇರಿದಲು ಸಂಘಟನೆಗಳ ಕಾರ್ಯಕರ್ತರು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಪ್ರಭು ಮನೆಯವರು ಮನೆಗೆ ಬಾಗಿಲು ಹಾಕಿಕೊಂಡು ಸಂಬಂಧಿಕರ ಮನೆಗೆ ತೆರಳಿದ್ದಾರೆ.