ಸಿಂದಗಿ(ಮೇ.25): ಕಿರಾಣಿ ಅಂಗಡಿಗಳಲ್ಲಿ, ಮನೆಗಳಲ್ಲಿ, ಹೋಟೆಲ್‌ಗಳಲ್ಲಿ ಅಕ್ರಮವಾಗಿ ಪ್ರತಿನಿತ್ಯ ಮಾರಾಟ ಮಾಡುತ್ತಿದ್ದ ಮದ್ಯದ ಬಾಟಲಿಗಳನ್ನು, ಪ್ಯಾಕೇಟ್‌ಗಳನ್ನು ಗ್ರಾಮದ ಮಹಿಳೆಯರು ವಶ ಪಡಿಸಿಕೊಂಡು ರಸ್ತೆಗೆ ಹಾಕಿ ಬೈಕ್‌ ಹಾಯಿಸಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಹೊನ್ನಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅದನ್ನು ನಿಲ್ಲಿಸಿ ಎಂಬ ಪ್ರತಿಭಟನೆ ಆಗಾಗ್ಗೆ ನಡೆಯುತ್ತಲೆ ಇದ್ದರು ಅಬಕಾರಿ ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ. ಇಲ್ಲಿಯವರೆಗೂ ಯಾವುದೆ ಕ್ರಮ ಜರುಗಿಸುತ್ತಿಲ್ಲ. ಅಕ್ರಮ ಮದ್ಯ ಮಾರಾಟದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕಾಟಾಚಾರಕ್ಕೆ ಗ್ರಾಮಕ್ಕೆ ಆಗಮಿಸುತ್ತಾರೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಹೋಗುತ್ತಾರೆ. ಆದರೆ ಮದ್ಯ ಮಾರಾಟ ಮಾತ್ರ ನಿಂತಿಲ್ಲ. ಇದಕ್ಕೆಲ್ಲ ಅಧಿಕಾರಿಗಳೆ ಮೂಲ ಕಾರಣ. ಗ್ರಾಮಸ್ಥರಿಗೆ ಸಿಗುವ ಮದ್ಯದ ವಸ್ತುಗಳು ಅಧಿಕಾರಿಗಳಿಗೆ ಯಾಕೆ ಸಿಗುವುದಿಲ್ಲ. ತಾಲೂಕಿನಾದ್ಯಂತ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದರು ಸಂಬಂಧಿಸಿದ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮದ ಮಹಿಳೆಯರು ಸೇರಿದಂತೆ ಅನೇಕ ಹಿರಿಯರು ಆರೋಪಿಸುತ್ತಿದ್ದಾರೆ. ಇನ್ನು ಮೇಲೆ ಇದಕ್ಕೆ ಸಂಪೂರ್ಣ ವಿದಾಯ ಹೇಳದಿದ್ದಲ್ಲಿ ತಾಲೂಕಿನಾದ್ಯಂತ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರಾದ ಮುದಕಮ್ಮ ಗೌಂಡಿ, ಮಾಬಣ್ಣಿ ಗಬಸಾವಳಗಿ, ಸರಸ್ವತಿ ಡಿಗ್ಗಿ, ಹುಸೇನ ತಂಗಡಗಿ, ರಂಜಾನಬಿ ಕತ್ನಳ್ಳಿ, ಮುಸ್ತಾಪ, ಮಹಾಂತೇಶ ಸೇರಿದಂತೆ ಅನೇಕರು ಎಚ್ಚರಿಕೆ ನೀಡುತ್ತಿದ್ದಾರೆ.

ಸಿಂದಗಿ: ಅಕ್ರಮ ಗಾಂಜಾ ಸಾಗಾಟ, ಓರ್ವನ ಬಂಧನ

ಅಕ್ರಮವಾಗಿ ಹೊನ್ನಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟವಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕಿರಾಣಿ ಅಂಗಡಿಗಳಲ್ಲಿ, ಹೊಟೇಲ್‌ಗಳಲ್ಲಿ ಮತ್ತು ಮನೆಗಳಲ್ಲಿ ಮದ್ಯ ಇಟ್ಟು ಮಾರಾಟ ಮಾಡುತ್ತಿದ್ದಾರೆ. ನಮ್ಮ ಇಲಾಖೆ ಯಾವ ಮೂಲಾಜಿಲ್ಲದೆ ಸಂಬಂಧಿಸಿದವರ ಮೇಲೆ ಕಾನೂನಿನ ಕ್ರಮ ಜರುಗಿಸಲಾಗುವುದು. ಇನ್ನು ಕೆಲವೆ ದಿನಗಳಲ್ಲಿ ಅಬಕಾರಿ ಇಲಾಖೆ ಗ್ರಾಮದಲ್ಲಿ ಗ್ರಾಮ ಸಭೆ ಮಾಡಿ ಎಚ್ಚರ ನೀಡುವ ಕ್ರಮಕ್ಕೆ ಮುಂದಾಗಲಿದೆ ಎಂದು ಅಬಕಾರಿ ಇಲಾಖೆಯ ಸಿಪಿಐ ಎ.ಎ.ಮುಜಾವರ ಅವರು ಹೇಳಿದ್ದಾರೆ.