ತವರು ಮನೆಯಲ್ಲಿ ಜಾಸ್ತಿ ದಿನ ಹೆಂಡತಿ ಬಿಟ್ರೆ ವಿವಾಹವೇ ರದ್ದು
ಮದುವೆಯಾದರೂ ಹೆಂಡತಿ ಜತೆಗೆ ಇರುತ್ತಾಳೆ ಎಂಬ ಭರವಸೆ ಇಲ್ಲದ ಕಾಲ ನಿರ್ಮಾಣವಾಗಿದೆ. ಅದು ನೋಂದಣಿ ಮಾಡಿಸಿಕೊಂಡಿದ್ದರೂ ಹೆಂಡತಿ ಇನ್ನೊಬ್ಬನ ಜತೆ ಹೋಗಬಹುದು ಎಂಬುದಕ್ಕೆ ಕಾರವಾರದ ಈ ಘಟನೆ ಸಾಕ್ಷಿಯಾಗಿದೆ.
ಕಾರವಾರ[ಆ.8] ಪ್ರೇಮ ವಿವಾಹವಾಗಿ ನೋಂದಣಿಯಾಗಿದ್ದ ಹುಡುಗಿಗೆ ಮತ್ತೊಮ್ಮೆ ವಿವಾಹ ಮಾಡಿ ನೋಂದಣಿ ಮಾಡಿದ ಘಟನೆ ಬೆಳಕಿಗೆ ಬಂದಿದೆ. ವಧು ಒಬ್ಬಳೇ ಆಗಿದ್ದು, ವರ ಬೇರೆ ಬೇರೆಯಾಗಿದ್ದಾರೆ. ನ್ಯಾಯ ಒದಗಿಸುವಂತೆ ಮೊದಲ ಪತಿ ಪೊಲೀಸರ ಮೊರೆ ಹೋಗಿದ್ದಾರೆ.
ಯಲ್ಲಾಪುರ ತಾಲೂಕಿನ ದೇಹಳ್ಳಿಯ ಗಣಪತಿ ಭಟ್ ಅದೇ ತಾಲೂಕಿನ ಕಂಪ್ಲಿಯ ಆಶಾ ಹೆಗಡೆ ಅವರನ್ನು 2014ರ ಫೆ. 7ರಂದು ಕಾರವಾರದ ಉಪನೋಂದಣಾಧಿಕಾರಿ ಕಾರ್ಯಾಲಯದಲ್ಲಿ ವಿವಾಹ ಆಗಿದ್ದರು. ನಂತರ ಆಶಾ ಅವರ ಪಾಲಕರ ಒಪ್ಪಿಗೆ ಪಡೆದು ವಿವಾಹವಾಗುವ ಉದ್ದೇಶದಿಂದ ಅವರನ್ನು ತಾಯಿ ಮನೆಗೆ ಬಿಟ್ಟು ಬಂದಿದ್ದರು.
ಆಶಾ ಮನೆಯಲ್ಲಿ ಮಳೆಗಾಲದ ನಂತರ ವಿವಾಹ ಮಾಡಿಕೊಡುವುದಾಗಿ ತಿಳಿಸಿದ್ದರು. ಗಣಪತಿ ಭಟ್ ಬೆಂಗಳೂರಿನಲ್ಲಿ ವೈದಿಕರಾಗಿದ್ದು, ಆಗಾಗ ಕರೆ ಮಾಡಿ ಆಶಾ ಅವರ ಬಳಿ ಮಾತನಾಡುತ್ತಿದ್ದರು. ಆಶಾ ಅವರ ತಾಯಿ ಮಮತಾ ಹೆಗಡೆ ದಿನ ಕಳೆದಂತೆ ಅವರ ಕರೆ ಬಂದರೆ ಮಗಳಿಗೆ ನೀಡುತ್ತಿರಲಿಲ್ಲ. ಹೊರಗಡೆ ತೆರಳಿದ್ದಾಳೆ ಎಂದು ಸಬೂಬು ಹೇಳುತ್ತಿದ್ದರು.
ಬೆಂಗಳೂರಿನಿಂದ ಯಲ್ಲಾಪುರಕ್ಕೆ ವಾಪಸ್ ಬಂದು ಆಶಾಳ ತವರು ಮನೆಗೆ ಹೋದರೆ ನೀನು ಬರಬೇಡ. ಅವಳನ್ನು ಮರೆತು ಬಿಡು.
ಪದೇ ಪದೇ ಬಂದರೆ ಪೊಲೀಸ್ ದೂರು ನೀಡುತ್ತೇವೆ ಎಂದು ಮಮತಾ ಗಣಪತಿಯವರಿಗೆ ಬೆದರಿಕೆ ಹಾಕಿದ್ದರು.
ಎರಡು ಕಡೆ ನೋಂದಣಿ: ಆಶಾ ಹಾಗೂ ಗಣಪತಿ ಅವರದ್ದು ಪ್ರೇಮವಿವಾಹ ಆದ್ದರಿಂದ 2014ರ ಫೆ.7ರಂದು ಕಾರವಾರದಲ್ಲಿ ನೋಂದಣಿ ಮಾಡಿಸಿದ್ದರು. ಇದಾದ ಬಳಿಕ ಆಶಾ ತಾಯಿ ಮಮತಾ ರಾಜೇಶ ಎಂಬವರ ಜತೆ ಆಶಾರನ್ನು ಮತ್ತೆ ವಿವಾಹ ಮಾಡಿಸಿದ್ದಾರೆ. ಅಲ್ಲದೇ ಯಲ್ಲಾಪುರ ನೋಂದಣಾಧಿಕಾರಿ ಕಾರ್ಯಾಲಯದಲ್ಲಿ 2018ರ ಜು. 31 ರಂದು ಮತ್ತೆ ನೋಂದಣಿ ಮಾಡಿದ್ದರು.
ಗಣಪತಿಯವರಿಗೆ ಆಶಾ ದೂರದ ಸಂಬಂಧಿ. ಸಮಾರಂಭಗಳಲ್ಲಿ ಭೇಟಿಯಾಗಿ ಮಾತನಾಡಿದ್ದು, ಪ್ರೇಮಾಂಕುರವಾಗಿತ್ತು. ಪರಸ್ಪರ ಪ್ರೇಮ ನಿವೇದನೆ ಬಳಿಕ ವಿವಾಹ ಮಾಡಿಕೊಂಡಿದ್ದರು. ಪಾಲಕರನ್ನು ಒಪ್ಪಿಸಿ ವಿವಾಹವಾಗಲು ಸಿದಟಛಿತೆ ನಡೆದಿತ್ತು. ಆದರೆ ಆಶಾ ತಾಯಿ ಬೇರೊಬ್ಬರ ಜತೆ ವಿವಾಹ ಮಾಡಿಸಿದ್ದಾರೆ.
ಅಚ್ಚರಿಯ ಸಂಗತಿ
ಒಂದು ಹುಡುಗಿಗೆ 2ಕಡೆ ನೋಂದಣಿಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಎರಡೂ ಕಡೆಗಳಲ್ಲೂ ಹುಡುಗಿಯ ಹೆಸರನ್ನು ಆಶಾ ಧನಂಜಯ ಹೆಗಡೆ ಎಂದೇ ನಮೂದಿಸಲಾಗಿದೆ. ಹೀಗಿದ್ದಾಗ್ಯೂ ನೋಂದಣಾಧಿಕಾರಿ ಕಾರ್ಯಾಲಯದಲ್ಲಿ ಈ ಬಗ್ಗೆ ಪರಿಶೀಲಿಸದಿರುವುದು ಅಥವಾ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಆಶ್ಚರ್ಯದ ಸಂಗತಿ.
ಪೊಲೀಸರ ಮೊರೆ
ಮೊದಲು ವಿವಾಹವಾಗಿದ್ದ ಗಣಪತಿ ಭಟ್ ಅವರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠ ವಿನಾಯಕ ಪಾಟೀಲ್ ಅವರಿಗೆ ದೂರು ನೀಡಿ ತಮ್ಮ ವಿವಾಹದ ನೋಂದಣಿ ಪತ್ರಗಳನ್ನು ನೀಡಿ ನ್ಯಾಯ ದೊರಕಿಸುವಂತೆ ಕೇಳಿಕೊಂಡರು.