ಮೆದುಳು ನಿಷ್ಕ್ರಿಯ: ಝೀರೋ ಟ್ರಾಫಿಕಲ್ಲಿ ಮಂಗ್ಳೂರಿಂದ ಮೈಸೂರಿಗೆ ಮಹಿಳೆಯ ಲಿವರ್ ಶಿಫ್ಟ್!
ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಮಧ್ಯಾಹ್ನ 12.30ಕ್ಕೆ ಅಂಗಾಂಗವನ್ನು ಹೊತ್ತ ಆ್ಯಂಬುಲೆನ್ಸ್ ಗ್ರೀನ್ ಕಾರಿಡಾರ್ ಟ್ರಾಫಿಕ್‌ನಲ್ಲಿ ಮೈಸೂರಿಗೆ ಹೊರಟಿತು. ಮಂಗಳೂರಿನಿಂದ ಮಾಣಿ, ಮಡಿಕೇರಿ ಹೆದ್ದಾರಿಯುದ್ಧಕ್ಕೂ ಪೊಲೀಸರು ಟ್ರಾಫಿಕ್ ತಡೆಹಿಡಿದು ಆ್ಯಂಬುಲೆನ್ಸ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೈಸೂರಿನ ಆ್ಯಂಬುಲೆನ್ಸ್‌ನ್ನು ವೆಂಕಟೇಶ್ ಎಂಬವರು ಚಲಾಯಿಸಿದ್ದು, ಆರೋಗ್ಯ ಸಿಬ್ಬಂದಿ ಸಂದೀಪ್ ಜೊತೆಗಿದ್ದರು.
ಮಂಗಳೂರು(ಜ.11): ಮಂಗಳೂರಿನ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗವನ್ನು ಮೈಸೂರಿಗೆ ಶುಕ್ರವಾರ ಗ್ರೀನ್ ಕಾರಿಡಾರ್ (ಝೀರೋ ಟ್ರಾಫಿಕ್) ಸಂಚಾರ ವ್ಯವಸ್ಥೆಯ ಮೂಲಕ ಅತ್ಯಂತ ತ್ವರಿತವಾಗಿ ಆ್ಯಂಬುಲೆನ್ಸ್‌ನಲ್ಲಿ ರವಾನಿಸಲಾಯಿತು.
ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ಮಹಿಳೆಯ ಲಿವರ್‌ನ್ನು ದಾನ ಮಾಡಲಾಗಿದ್ದು, ಮಹಿಳೆಯ ಎರಡು ಕಣ್ಣುಗಳನ್ನು ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾನ ಮಾಡಲಾಗಿದ್ದು, ಇಬ್ಬರು ವ್ಯಕ್ತಿಗಳ ದೃಷ್ಟಿಗೆ ವರದಾನವಾಗಲಿದೆ.
ಬೆಂಗಳೂರು: ಜೀರೋ ಟ್ರಾಫಿಕ್ಕಲ್ಲಿ ಬಂದರೂ ಬೆಡ್ ಇಲ್ಲದೆ ನಿಮ್ಹಾನ್ಸ್‌ನಲ್ಲಿ ಮಗು ಸಾವು..!
ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಮಧ್ಯಾಹ್ನ 12.30ಕ್ಕೆ ಅಂಗಾಂಗವನ್ನು ಹೊತ್ತ ಆ್ಯಂಬುಲೆನ್ಸ್ ಗ್ರೀನ್ ಕಾರಿಡಾರ್ ಟ್ರಾಫಿಕ್‌ನಲ್ಲಿ ಮೈಸೂರಿಗೆ ಹೊರಟಿತು. ಮಂಗಳೂರಿನಿಂದ ಮಾಣಿ, ಮಡಿಕೇರಿ ಹೆದ್ದಾರಿಯುದ್ಧಕ್ಕೂ ಪೊಲೀಸರು ಟ್ರಾಫಿಕ್ ತಡೆಹಿಡಿದು ಆ್ಯಂಬುಲೆನ್ಸ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೈಸೂರಿನ ಆ್ಯಂಬುಲೆನ್ಸ್‌ನ್ನು ವೆಂಕಟೇಶ್ ಎಂಬವರು ಚಲಾಯಿಸಿದ್ದು, ಆರೋಗ್ಯ ಸಿಬ್ಬಂದಿ ಸಂದೀಪ್ ಜೊತೆಗಿದ್ದರು.
ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆಯ ಲಿವರ್‌ನ್ನು ಬೇರೊಬ್ಬರಿಗೆ ಕಸಿ ಮಾಡುವ ಪ್ರಕ್ರಿಯೆಗೆ ಈ ಅಂಗಾಂಗ ದಾನ ಮಾಡಲಾಗಿದೆ. ಈ ಅಂಗಾಂಗ ಕಸಿಗೆ 40ರಿಂದ 45 ಲಕ್ಷ ರು.ಗಳ ಅಗತ್ಯವಿದೆ. ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಲಿವರ್‌ಗೆ ಈ ಲಿವರ್ ಹೊಂದಿಕೆಯಾಗಬೇಕಾದ್ದು ಅತೀ ಮುಖ್ಯವಾಗಿದೆ. ಲಿವರ್‌ನ್ನು ತೆಗೆದ ಬಳಿಕ ಆರು ಗಂಟೆ ಅವಧಿಯಲ್ಲಿ ಮರು ಕಸಿ ಮಾಡಬೇಕಾಗಿದೆ. ಮೈಸೂರಿಗೆ ತಲುಪಿದ ಎರಡು ಗಂಟೆಯ ಜರೂರಲ್ಲಿ ವೈದ್ಯರು ಇನ್ನೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ ಲಿವರ್ ಕಸಿ ಮಾಡಬೇಕಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಕೆಎಂಸಿಗೆ ಕಣ್ಣು ರವಾನೆ:
ಮಹಿಳೆಯ ಎರಡು ಕಣ್ಣುಗಳನ್ನು ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾನ ಮಾಡಲಾಗಿದೆ. ಎರಡು ಕಣ್ಣುಗಳನ್ನು ದೃಷ್ಟಿ ಕಳಕೊಂಡ ಇಬ್ಬರಿಗೆ ಮರುಜೋಡಿಸಲಾಗುತ್ತದೆ. ಕೆಎಂಸಿ ಆಸ್ಪತ್ರೆಯಲ್ಲಿ ಕಸಿ ಮಾಡಿಸಿಕೊಳ್ಳುವವರು ಇಲ್ಲದಿದ್ದರೆ, ಮಂಗಳೂರಿನ ಬೇರೆ ಆಸ್ಪತ್ರೆಗಳಿಗೆ ಡ್ರೋನ್ ಮೂಲಕ ತ್ವರಿತಗತಿಯಲ್ಲಿ ಕಣ್ಣುಗಳನ್ನು ರವಾನಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಂಗಾಂಗ ದಾನ ಮಾಡಿದ ರೇಖಾ ಕುಟುಂಬ
ಮೆದುಳು ನಿಷ್ಕ್ರಿಯಗೊಂಡ ಮಹಿಳೆ ರೇಖಾ(41) ಶಿವಮೊಗ್ಗದ ರಾಗಿಗುಡ್ಡ ನಿವಾಸಿ. ಈಕೆಗೆ ಇಬ್ಬರು ಸಹೋದರರು ಇದ್ದಾರೆ. ಅವಿವಾಹಿತೆಯಾದ ಈಕೆ ತಾಯಿಯ ಮನೆಯಲ್ಲಿ ವಾಸವಿದ್ದರು. ಕೆಲವು ದಿನಗಳ ಹಿಂದೆ ಈಕೆಗೆ ತಲೆಯಲ್ಲಿ ರಕ್ತಹೆಪ್ಪುಗಟ್ಟಿತ್ತು. ಹಾಗಾಗಿ ರೇಖಾಳನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಭಾನುವಾರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೆನ್ಲಾಕ್‌ನಲ್ಲಿ ರೇಖಾಗೆ ಗುರುವಾರ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೇ ರಕ್ತಹೆಪ್ಪುಗಟ್ಟುವಿಕೆ ಉಲ್ಭಣಿಸಿ ಮೆದುಳು ನಿಷ್ಕ್ರಿಯಗೊಂಡಿತ್ತು.
ಬಳಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಆಕೆಯ ಕುಟುಂಬವನ್ನು ಸಂಪರ್ಕಿಸಿ ಅಂಗಾಂಗ ದಾನಕ್ಕೆ ಮನ ಒಲಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ರೇಖಾಳ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದರು.
ಅಂಗಾಂಗ ರವಾನೆ: ವೆನ್ಲಾಕ್ ಆಸ್ಪತ್ರೆ ಇದೇ ಮೊದಲು
ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಅಂಗಾಂಗ ರವಾನಿಸುವುದು ಕೆಲವು ವರ್ಷಗಳಿಂದ ಆರಂಭಗೊಂಡಿದೆ. ಆದರೆ ಸರ್ಕಾರಿ ಆಸ್ಪತ್ರೆಯೊಂದು ಅಂಗಾಂಗ ರವಾನಿಸಿರುವುದು ಇದೇ ಮೊದಲು. ಹಾಗಾಗಿ ಆಸ್ಪತ್ರೆಯ ಪಾಲಿಗೆ ಇನ್ನೊಬ್ಬರ ಬಾಳಿಗೆ ಬೆಳಕಾಗುವುದು ಇದೊಂದು ಸುವರ್ಣ ದಿನ ಎಂದು ವೈದ್ಯಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ತೆರೆದ ಹೃದಯ ಚಿಕಿತ್ಸೆ; 3 ದಿನದ ಬೇಬಿ ಜೀರೋ ಟ್ರಾಫಿಕ್‌ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಶಿಫ್ಟ್!
ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ.ಶಿವಪ್ರಕಾಶ್, ನೋಡೆಲ್ ಅಧಿಕಾರಿ ಡಾ.ಅಜಯ್ ಕುಮಾರ್, ಸರ್ಜಿಕಲ್ ಬ್ಲಾಕ್‌ನ ವೈದ್ಯಾಧಿಕಾರಿ ಡಾ.ಭಾನುಪ್ರಕಾಶ್, ಡಾ.ಅಣ್ಣಯ್ಯ ಕುಲಾಲ್ ಮತ್ತಿತತರು ಈ ಸಂದರ್ಭ ಅಂಗಾಂಗ ದಾನ ಪ್ರಕ್ರಿಯೆ ನಡೆಸಿಕೊಟ್ಟರು.
ಸಹೋದರಿಯ ಮೆದುಳು ಗುರುವಾರ ನಿಷ್ಕ್ರಿಯಗೊಂಡಿತ್ತು. ಬಳಿಕ ವೈದ್ಯಾಧಿಕಾರಿಗಳ ಕೋರಿಗೆ ಮೇರೆಗೆ ಸಮಾಜಕ್ಕೆ ಕೊಡುಗೆಯಾಗಿ ಈಕೆಯ ಲಿವರ್ ಮತ್ತು ಕಣ್ಣುಗಳನ್ನು ದಾನ ಮಾಡಲು ಒಪ್ಪಿಕೊಂಡಿದ್ದೇವೆ. ಇದರಲ್ಲಿ ನಮಗೆ ಧನ್ಯತಾ ಭಾವ ಇದೆ ಎಂದು ಶಿವಮೊಗ್ಗದ ರೇಖಾಳ ಸಹೋದರ ಶೇಷಾದ್ರಿ ತಿಳಿಸಿದ್ದಾರೆ.