ಬೆಂಗಳೂರು[ಜು.06]: ಫೋಟೋ ಶೂಟ್‌ ನೆಪದಲ್ಲಿ ಉತ್ತರ ಭಾರತೀಯ ಮೂಲದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಮಹಾಲಕ್ಷ್ಮೇ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ಎಸ್‌.ಎಂ.ಶರತ್‌ಕುಮಾರ್‌ (29) ಬಂಧಿತ ಆರೋಪಿ. ಬೇಗೂರು ನಿವಾಸಿ ಸುಮಾರು 27 ವರ್ಷದ ಯುವತಿ ಕೊಟ್ಟದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಶರತ್‌ಕುಮಾರ್‌ ಕೆಲ ವರ್ಷಗಳಿಂದ ಶಂಕರ ನಗರದ ಮುಖ್ಯರಸ್ತೆಯಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದ. ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಫೋಟೋ ಶೂಟ್‌ ಮಾಡುವುದಾಗಿ ಆರೋಪಿ ಜಾಹೀರಾತು ಹಾಕಿಕೊಂಡಿದ್ದ.

ಐದಾರು ವರ್ಷಗಳ ಹಿಂದೆ ನಗರಕ್ಕೆ ಬಂದಿರುವ ಛತೀಸ್‌ಗಡ ಮೂಲದ ಯುವತಿ ಆರೋಪಿ ನೀಡಿದ್ದ ಜಾಹೀರಾತು ಗಮನಿಸಿ ಆತನನ್ನು ಸಂಪರ್ಕ ಮಾಡಿದ್ದರು. ಫೋಟೋ ಶೂಟ್‌ ಮಾಡುವುದಾಗಿ ಯುವತಿಯನ್ನು ಬುಧವಾರ ಮಧ್ಯಾಹ್ನ ಸ್ಟುಡಿಯೋಗೆ ಕರೆಸಿಕೊಂಡಿದ್ದ. ಸ್ಥಳದಲ್ಲಿದ್ದ ಗ್ರಾಹಕರನ್ನೆಲ್ಲ ಹೊರಗೆ ಕಳುಹಿಸಿದ್ದ ಆರೋಪಿ, ಸ್ಟುಡಿಯೋದ ಬಾಗಿಲು ಬಂದ್‌ ಮಾಡಿ ಫೋಟೋಶೂಟ್‌ ಆರಂಭಿಸಿದ್ದ. ಅದೇ ವೇಳೆಯೇ ಬಟ್ಟೆಎಳೆದು ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಗಾಬರಿಗೊಂಡ ಯುವತಿ ಸ್ಟುಡಿಯೋದಿಂದ ಹೊರ ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.