ಉಡುಪಿ(ಆ.29): ಬಹಳ ಕಾಲದ ನಂತರ ರಾಜ್ಯದ ಸಚಿವ ಸಂಪುಟದಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆಗಳೆರಡಕ್ಕೂ ಒಬ್ಬರೇ ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರ ಸ್ವೀಕರಿಸಿದ್ದಾರೆ.

ಕರಾವಳಿಯವರೇ ಆಗಿದ್ದು, ಮೀನುಗಾರರ, ಬಂದರಿನ ಸಮಸ್ಯೆಗಳ ಬಗ್ಗೆ ಅಮೂಲಾಗ್ರ ಮಾಹಿತಿ ಇರುವ ಕೋಟ ಅವರು ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಸಚಿವರಾಗಿದ್ದು ಕರಾವಳಿಗರಿಗೆ ಅದರಲ್ಲೂ ಮೀನುಗಾರರಿಗೆ ಬಹಳ ಖುಷಿಗೆ ಕಾರಣವಾಗಿದೆ.

ಆದರೆ, ತಾನು ಮೀನುಗಾರಿಕೆ ಇಲಾಖೆಗೆ ಸಚಿವ ಆಗುತ್ತೇನೆ ಎಂದು ಸ್ವತಃ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೊನೆ ಕ್ಷಣದವರೆಗೂ ಗೊತ್ತಿರಲಿಕ್ಕಿಲ್ಲ. ಆದರೆ, ಅವರು ಮೀನುಗಾರಿಕಾ ಇಲಾಖೆಗೆ ಮೊದಲೇ ಫಿಕ್ಸ್‌ ಅಗಿದ್ದರು.

ಸಚಿವರಾಗಿ ಕೋಟ ಪ್ರಮಾಣವಚನ ಸ್ವೀಕರಿಸುವ ದಿನವೇ ಒಂದು ಆಸಕ್ತಿದಾಯಕ ಘಟನೆ ನಡೆದಿತ್ತು. ಅತ್ತ ಬೆಂಗಳೂರಿನಲ್ಲಿ ಕೋಟ ಅವರು ಪ್ರಮಾಣವಚನ ಸ್ವೀಕರಿಸುವಾಗ ಇತ್ತ ಕೋಟದಲ್ಲಿರುವ ಸಚಿವರ ಮನೆಗೆ ಮೀನುಗಾರ ಮಹಿಳೆಯೊಬ್ಬರು ಮೀನು ಮಾರುವುದಕ್ಕೆ ಬಂದಿದ್ದರು. ಆಕೆಯ ಹೆಸರು ಗುಲಾಬಿ.

ಗುಲಾಬಿ ಹೇಳಿದಂತೆಯೇ ಆಯಿತು:

ಆಕೆಗೆ ಕೋಟ ಪೂಜಾರ್ರು ಸಚಿವರಾಗುತ್ತಿರುವುದು ಗೊತ್ತಿಲ್ಲ. ‘ನಾನು ಫ್ರೆಶ್‌ ಕಾಣೆ, ಬಂಗುಡೆ, ಪಾಂಪ್ಲೆಟ್‌ ಮೀನಿನ ಬುಟ್ಟಿಹೊತ್ತುಕೊಂಡು ಬಂದರೆ ಪೂಜಾರ್ರು ನನ್ನ ಹತ್ರ ಮೀನು ಖರೀದಿಸದೆ ವಾಪಾಸು ಕಳಿಸಿದ್ದೇ ಇಲ್ಲ. ಫ್ರಿಡ್ಜಲ್ಲಿ ಫುಲ್‌ ಮೀನಿದ್ರೂ ಮತ್ತೆ ಫ್ರೆಶ್‌ ಮೀನು ತಗೊಳ್ಳುತ್ತಾರೆ. ಎಷ್ಟೇ ದುಬಾರಿಯಾದ್ರೂ ಮೀನು ಖರೀದಿ ಮಾಡಿಯೇ ಮಾಡುತ್ತಾರೆ. ಪೂಜಾರ್ರೆ ನಮಗೆ ಮೀನಿನ ಸಚಿವರೇ ಆಗ್ಲಿ’ ಎಂದು ಗುಲಾಬಿ ಹಾರೈಸಿದ್ದರು. ಅದಾಗಿ 6 ದಿನಗಳ ನಂತರ ಕೋಟ ಅವರಿಗೆ ಮೀನಿನ ಖಾತೆಯೇ ಸಿಕ್ಕಿದೆ. ಗುಲಾಬಿಯ ಹಾರೈಕೆ ಈಡೇರಿದೆ.

ಮೀನುಗಾರಿಕೆ ಇಲಾಖೆ ಸಿಕ್ಕಿದ್ದು ಗುಲಾಬಿಗೆ ಗೊತ್ತೇ ಇಲ್ಲ:

ಇಷ್ಟಕ್ಕೂ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದು, ಮೀನುಗಾರಿಕೆ ಬಂದರು ಇಲಾಖೆಯ ಜವಾಬ್ದಾರಿ ಸಿಕ್ಕಿದ್ದು ಮೀನುಗಾರ ಮಹಿಳೆ ಗುಲಾಬಿಗೆ ಗೊತ್ತೇ ಇಲ್ಲ. ಆದರೂ ಆಕೆಯ ಮುಗ್ಧ ಆಸೆಯನ್ನು ವಿಧಿ ಈಡೇರಿಸಿದೆ. ಶ್ರೀನಿವಾಸ ಪೂಜಾರಿ ಅವರ ಬಗ್ಗೆ ಕರಾವಳಿಯ ಮೀನುಗಾರರಿಗೂ ಬೆಟ್ಟದಷ್ಟುನಿರೀಕ್ಷೆ ಇದೆ. ಸಿಂಪಲ್‌ ಶ್ರೀನಿವಾಸ ಎಂದೇ ಹೆಸರಾದ ಕೋಟದ ಪೂಜಾರ್ರು ತವರಿನ ಜನರ ನಿರೀಕ್ಷೆ ಈಡೇರಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.